ಗುರುವಾರ , ಸೆಪ್ಟೆಂಬರ್ 23, 2021
26 °C
ಕರಿಂಜೆ ಓಂ ಶ್ರೀ ಶಕ್ತಿ ಗುರುಮಠದ ಶ್ರೀ ಮುಕ್ತಾನಂದ ಸ್ವಾಮೀಜಿ

ದೇಶದ ರಾಷ್ಟ್ರೀಯತೆ ಮೂಲಮಂತ್ರ ಹಿಂದುತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೈಂದೂರು: ಹಿಂದುತ್ವವು ಭಾರತದ ರಾಷ್ಟ್ರೀಯತೆಯ ಮೂಲಮಂತ್ರ. ಸಂಸ್ಕೃತಿ, ಸಂಸ್ಕಾರ ಮತ್ತು ಸಂಸ್ಕೃತದಿಂದ ನಮ್ಮ ದೇಶ ವಿಶ್ವಗುರುವೆನಿಸಿದೆ ಎಂದು ಮೂಡುಬಿದಿರೆ ಶ್ರೀ ಕ್ಷೇತ್ರ ಕರಿಂಜೆ ಓಂ ಶ್ರೀ ಶಕ್ತಿ ಗುರುಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು.

ಗಂಗೊಳ್ಳಿಯ ಹಿಂದೂ ಜಾಗರಣ ವೇದಿಕೆ ಅಲ್ಲಿನ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ಭಾನುವಾರ ಆಯೋಜಿಸಿದ್ದ 505 ಕಲಶಗಳ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಹಿಂದೂ ಸಮಾಜವನ್ನು ಸಂಕುಚಿತಗೊಳಿಸುವ, ವಿಕೃತಗೊಳಿಸುವ ಕೆಲಸಗಳು ನಿರಂತರ ನಡೆಯುತ್ತಿವೆ. ಯುವ ಜನರ ದಾರಿ ತಪ್ಪಿಸುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ಇವುಗಳ ವಿರುದ್ಧ ಜನರು ಎಚ್ಚರ ವಹಿಸಬೇಕು. ಭಾರತ ದೇಶದಲ್ಲಿ ಹಿಂದೂ ಸಮಾಜ ಎಂದೂ ಅಸಹಾಯಕವಾಗಬಾರದು, ದುರ್ಬಲವಾಗಬಾರದು. ಸಮಾಜ ಜಾಗೃತವಾದರೆ ಅದನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

‘ಹಿಂದೂ ಧರ್ಮ ಎಲ್ಲ ಧರ್ಮಗಳನ್ನು ಗೌರವಿಸುತ್ತಾ ಬಂದಿದೆ. ಆದರೆ ಅನ್ಯ ಧರ್ಮಗಳು ದೇಶವನ್ನು ಆಕ್ರಮಿಸಿ, ಇಲ್ಲಿನ ದೇವಾಲಯಗಳನ್ನು ಧ್ವಂಸಗೊಳಿಸಿ, ಮತಾಂತರ ನಡೆಸಿ ದೇಶವನ್ನು ನಾಶಮಾಡುವ ಪ್ರಯತ್ನ ನಡೆಸಿದ್ದವು. ಅದು ಯಶಸ್ವಿಯಾಗಲಿಲ್ಲ’ ಎಂದು ಹೇಳಿದರು.

ಪ್ರಧಾನ ಭಾಷಣಕಾರರಾಗಿದ್ದ ವಿಟ್ಲ ತಾಲ್ಲೂಕು ಹಿಂದೂ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ಗಣರಾಜ್ ಭಟ್ ಕೆದಿಲ್ ಮಾತನಾಡಿ, ‘ಹಾಡಹಗಲೇ ಗೋವುಗಳಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗುತ್ತಿದೆ. ಹಿಂದೂ ಬಾಂಧವರು ಗೋವುಗಳ ಮಹತ್ವವನ್ನು ಅರಿತು ಅವುಗಳ ರಕ್ಷಣೆಗೆ ಮುಂದಾಗಬೇಕು. ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರ ನೀಡಬೇಕು. ಲವ್ ಜಿಹಾದ್ ಮೂಲಕ ಹಿಂದೂ
ಸಮಾಜದ ಹೆಣ್ಣು ಮಕ್ಕಳನ್ನು ಮೋಸದ ಬಲೆಗೆ ಬೀಳಿಸುವ ಷಡ್ಯಂತ್ರವನ್ನು, ಲ್ಯಾಂಡ್ ಜಿಹಾದ್ ಮೂಲಕ ಭೂಮಿಯನ್ನು ಕೊಂಡು ಅಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿ ಮಸೀದಿ, ಮದರಸಾಗಳಾಗಿ ಬಳಸುವುದನ್ನು ವಿಫಲಗೊಳಿಸಬೇಕು’
ಎಂದರು.

‘ಒಗ್ಗಟ್ಟಿನ ಕೊರತೆಯಿಂದ ಹಿಂದೂ ಸಮಾಜದ ಮೇಲೆ ದಾಳಿ, ದಬ್ಬಾಳಿಕೆ ನಡೆಯುತ್ತಿರುವುದರಿಂದ ಪ್ರತಿಯೊಂದು ಕ್ಷಣದಲ್ಲೂ ಹಿಂದೂ ಸಮಾಜ ಒಗ್ಗಟ್ಟು ಪ್ರದರ್ಶಿಸಬೇಕು. ಹಿಂದೂಗಳನ್ನು ಕೆಣಕಲು ಬರಬೇಡಿ, ಹಿಂದೂ ಸಮಾಜವನ್ನು ಅಪಹಾಸ್ಯ ಮಾಡಬೇಡಿ. ಹಿಂದೂ ಸಮಾಜ ಹಾಳು ಮಾಡಲು ಬಂದರೆ, ಹಿಂದೂಗಳಿಗೆ ಅನ್ಯಾಯ, ತೊಂದರೆ ಮಾಡಿದರೆ ಯಾವ ವಿಕೃತಿಗೂ ಹೋಗಲು ಸಿದ್ಧರಿರಬೇಕು. ನಮ್ಮ ರಾಷ್ಟ್ರ ಹಾಗೂ ಹಿಂದುತ್ವ ರಕ್ಷಣೆಗೆ ಪ್ರಾಣ ಕೊಡಲು ಸನ್ನದ್ಧರಾಗಬೇಕು’ ಎಂದು ಕರೆ ನೀಡಿದರು.

ಹೆಮ್ಮಾಡಿ ರಾಮಲಕ್ಷ್ಮಣ ಸಭಾಭವನದ ಕೆ.ಎಂ. ರಾಮ ಲಕ್ಷ್ಮಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಡಿ ಬಿಕ್ಯಾ ಖಾರ್ವಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಪ್ರಮೋದ ಗಾಣಿಗ, ಶ್ರೀ ಅಂಬಿಕಾ ದೇವಸ್ಥಾನದ ಅರ್ಚಕ ಜಿ.ವಿಠಲದಾಸ ಭಟ್, ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಅರುಣ್ ಕುಮಾರ್, ಮತ್ಸ್ಯೋದ್ಯಮಿ ಅನಿಲ್ ಸಾಲಿಯಾನ್ ಇದ್ದರು.

ಹಿಂದೂ ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ಅಧ್ಯಕ್ಷ ಗೋವಿಂದ್ರಾಯ ಶೇರುಗಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯಶವಂತ ಖಾರ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಂದರ ಬಿ. ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ ಎಸ್.ಆರ್.ಜಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗಂಗೊಳ್ಳಿ ಶ್ರೀ ರಾಮ ಮಂದಿರದ ಬಳಿಯಿಂದ ಮುಖ್ಯರಸ್ತೆಯಲ್ಲಿ ಶೋಭಾಯಾತ್ರೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು