ಉನ್ನತ ಉದ್ಯೋಗಾವಕಾಶಕ್ಕೆ ಅರಣ್ಯ ಪದವಿ

ಸೋಮವಾರ, ಮೇ 27, 2019
29 °C
ಕೃಷಿಕರ ಮಕ್ಕಳಿಗೆ ಶೇ 15ರಷ್ಟು ಮೀಸಲಾತಿ l ಅಂತಿಮ ವರ್ಷ ಕ್ಷೇತ್ರಾಧ್ಯಯನಕ್ಕೆ ಮೀಸಲು

ಉನ್ನತ ಉದ್ಯೋಗಾವಕಾಶಕ್ಕೆ ಅರಣ್ಯ ಪದವಿ

Published:
Updated:
Prajavani

ಶಿರಸಿ: ಪರಿಸರ ಹಾಗೂ ಕಾಡಿನ ಒಡನಾಟದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯತೆಯಿರುವ ಅರಣ್ಯ ಪದವಿಗೆ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಅತಿ ಹೆಚ್ಚು ಉದ್ಯೋಗಾವಕಾಶ ಇರುವುದು ಬೇಡಿಕೆ ಹೆಚ್ಚಾಗಲು ಮುಖ್ಯ ಕಾರಣ.

ಅರಣ್ಯ ಪದವಿಗೆ ಸೇರಲು ರಾಜ್ಯದಲ್ಲಿ ಎರಡು ಕಡೆ ಮಾತ್ರ ಅವಕಾಶಗಳಿವೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಅರಣ್ಯ ಕಾಲೇಜುಹಾಗೂ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಕೊಡಗು ಜಿಲ್ಲೆಯ ಪೊನ್ನಂಪೇಟೆ ಅರಣ್ಯ ಕಾಲೇಜು.

ನಾಲ್ಕು ವರ್ಷಗಳ ಈ ಪದವಿ ಕೋರ್ಸ್ (forestry honours) ಅರಣ್ಯ ನಿರ್ವಹಣೆಗೆ ಅಗತ್ಯವಿರುವ ಎಲ್ಲ ವಿಷಯಗಳನ್ನು ಳಗೊಂಡಿದೆ. ಪಿಸಿಎಂಬಿ ಕಾಂಬಿನೇಷನ್‌ನಲ್ಲಿ ದ್ವಿತೀಯ ಪಿಯುಸಿ ಪೂರೈಸಿದವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಮೂಲಕ ಈ ಪದವಿಗೆ ಪ್ರವೇಶ ಪಡೆಯಬಹುದು. ಪ್ರಾಯೋಗಿಕ ಪರೀಕ್ಷೆಯ ಶೇ 50, ಇನ್ನರ್ಧ ಸಿಇಟಿ ಹಾಗೂ ಸಿಬಿಝಡ್ ಅಂಕಗಳನ್ನು ಪರಿಗಣಿಸಿ, ರ‍್ಯಾಂಕಿಂಗ್ ನಿರ್ಧಾರವಾಗುತ್ತದೆ. ಪ್ರಥಮ ವರ್ಷಕ್ಕೆ ಲಭ್ಯವಿರುವ ಸೀಟು 60.

ಕೃಷಿಕರ ಮಕ್ಕಳಿಗೆ ಶೇ 15ರಷ್ಟು ಸೀಟುಗಳು ಮೀಸಲಿವೆ. ಇದಕ್ಕೆ ಅರ್ಜಿ ಸಲ್ಲಿಸುವವರು ಹೆಚ್ಚುವರಿಯಾಗಿ ಪ್ರಾಯೋಗಿಕ ಪರೀಕ್ಷೆಯೊಂದನ್ನು ಎದುರಿಸಬೇಕಾಗುತ್ತದೆ. ಕೆಲವು ಎನ್ಆರ್‌ಐ ಸೀಟುಗಳನ್ನು ಕಾಯ್ದಿಡಲಾಗುತ್ತದೆ. ಈ ಮೂಲಕ ಬಂದವರಿಗೆ
ವರ್ಷಕ್ಕೆ ಅಂದಾಜು ₹ 4.5 ಲಕ್ಷ ಶುಲ್ಕವಿರುತ್ತದೆ.

ಮೊದಲ ಮೂರು ವರ್ಷಗಳಲ್ಲಿ ಅರಣ್ಯ ಬೇಸಾಯ, ಅರಣ್ಯ ಜೀವವಿಜ್ಞಾನ, ವನ್ಯಜೀವಿ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಕಾಡಿನ ಉಪಯೋಗ, ಕಿರು ಅರಣ್ಯ ಉತ್ಪನ್ನಗಳು, ಜೈವಿಕ ತಂತ್ರಜ್ಞಾನ ವಿಷಯಗಳ ಅಧ್ಯಯನ, ಅಂತಿಮ ವರ್ಷ ಪೂರ್ಣ ಪ್ರಮಾಣದಲ್ಲಿ ಕ್ಷೇತ್ರಾಧ್ಯಯನ ಮಾಡಬೇಕಾಗುತ್ತದೆ. ಆಯ್ದ ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನಕ್ಕೆ ವಿದೇಶಕ್ಕೆ ಹೋಗಲು ಅವಕಾಶವಿದೆ.

‘ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಮತ್ತು ಯೋಗ ಕಡ್ಡಾಯ ವಿಷಯ. ಬೆಳಿಗ್ಗೆ 5.30ರಿಂದ 7.30ರವರೆಗೆ ದೇಹಕ್ಕೆ ಶ್ರಮ ನೀಡುವ ಆಟೋಟ, ಯೋಗದಲ್ಲಿ ತೊಡಗಿಕೊಳ್ಳಬೇಕು. ಭವಿಷ್ಯದಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ಈ ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ಹೆಚ್ಚಬೇಕೆಂಬುದು ಇದರ ಹಿಂದಿನ ಆಶಯ’ ಎನ್ನುತ್ತಾರೆ ಕಾಲೇಜಿನ ಡೀನ್ ಎಂ.ಎಚ್.ಹೊಸ್ಮನಿ.

‘ಅರಣ್ಯ ಪದವೀಧರರಿಗೆ ಅರಣ್ಯ ಇಲಾಖೆಯ ಆರ್‌ಎಫ್ಒ ಹುದ್ದೆ ನೇಮಕಾತಿಯಲ್ಲಿ ಶೇ 75, ಡಿಆರ್‌ಎಫ್ ಹುದ್ದೆಯಲ್ಲಿ
ಶೇ 50ರಷ್ಟು ಮೀಸಲಾತಿಯಿದೆ. ಅರಣ್ಯ ಅಭಿವೃದ್ಧಿ ನಿಗಮ, ಬ್ಯಾಂಕ್, ಪೇಪರ್‌ ಮಿಲ್‌ಗಳಲ್ಲಿ ಸಹ ಉದ್ಯೋಗಾವಕಾಶ ಪಡೆಯಬಹುದು. ಈಗಾಗಲೇ 35ಕ್ಕೂ ಹೆಚ್ಚು ಜನರು ಐಎಫ್‌ಎಸ್ ಅಧಿಕಾರಿಗಳಾಗಿದ್ದಾರೆ. ಎರಡೂ ಕಾಲೇಜುಗಳು ಕಾಡಿನ ಸಾಂಗತ್ಯದಲ್ಲೇ ಇವೆ. ನಿತ್ಯಹರಿದ್ವರ್ಣ, ಅರೆ ನಿತ್ಯಹರಿದ್ವರ್ಣ, ಎಲೆ ಉದುರುವ ಕಾಡು, ಕುರುಚಲು, ಕಾಂಡ್ಲಾವನ, ಕಾನು ಅರಣ್ಯಗಳಲ್ಲಿ ಅಧ್ಯಯನ ಮಾಡುವ ಅಪೂರ್ವ ಅವಕಾಶ ಸಿಗುತ್ತದೆ’ ಎನ್ನುತ್ತಾರೆ ಅರಣ್ಯ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಆರ್. ವಾಸುದೇವ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !