ಸೋಮವಾರ, ಸೆಪ್ಟೆಂಬರ್ 27, 2021
25 °C

ನಾವೆಲ್ಲ ಅಣ್ಣ, ತಮ್ಮಂದಿರಂತೆ ಇದ್ದೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ನಾನು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಎಲ್ಲರೂ ಅಣ್ಣ- ತಮ್ಮಂದಿರಂತೆ ಇದ್ದೇವೆ. ಹೀಗಿರುವಾಗ ಸರ್ಕಾರ ಬೀಳುವ ಮಾತೇ ಇಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಕುಂದಗೋಳದಲ್ಲಿ‌ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬಿಜೆಪಿಯವರು ರಾಜ್ಯ ಸರ್ಕಾರ ಈಗ ಬೀಳುತ್ತದೆ, ಆಗ ಬೀಳುತ್ತದೆ ಎನ್ನುತ್ತಲೇ ಇದ್ದಾರೆ. ಕಾಂಗ್ರೆಸ್- ಜೆಡಿಎಸ್ ನಾಯಕರೆಲ್ಲ ಒಂದೇ ಕುಟುಂಬದವರಂತೆ ಇರುವಾಗ ಸರ್ಕಾರ ಹೇಗೆ ಬೀಳುತ್ತದೆ’ ಎಂದು ಪ್ರಶ್ನಿಸಿದರು.

‘ಯಾವ ಪುರುಷಾರ್ಥಕ್ಕೆ ಈ ಸರ್ಕಾರ ಬೀಳಬೇಕು. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಮುಂದುವರೆಸಿರುವುದಕ್ಕಾ? ಕೊಟ್ಟ ಮಾತಿನಂತೆ ರಾಜ್ಯದ ರೈತರ ₹42 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಕ್ಕೆ ಬೀಳಬೇಕಾ' ಎಂದು ಪ್ರಶ್ನಿಸಿದ ಅವರು, ‘ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಬರುವ ಸುಳ್ಳು ಸುದ್ದಿಗಳಿಗೆ ಕಾರ್ಯಕರ್ತರು ಕಿವಿಗೊಡಬಾರದು.‌ ಈ ಸರ್ಕಾರವನ್ನು ಯಾರೂ ಅಸ್ಥಿರಗೊಳಿಸಲು ಸಾಧ್ಯವಿಲ್ಲ’ ಎಂದರು.

‘ನನಗೆ ಬಡವರ ಕಷ್ಟ ಕಂಡರೆ, ಕಟ್ಟಡ ಕುಸಿತ ದುರಂತದಂತಹ ಸ್ಥಳಕ್ಕೆ ಹೋದರೆ, ಸಹೋದರಿ ಕುಸುಮಾವತಿ ಅವರಂತಹವರನ್ನು ಕಂಡರೆ ಕಣ್ಣೀರು ಬರುತ್ತದೆ. ಬಿಜೆಪಿಯವರಿಗೆ ಕಣ್ಣೀರು ಬರುವುದಿಲ್ಲ. ಯಾಕೆಂದರೆ ಅವರು ಕಟುಕರು ಹಾಗೂ‌ ಹೃದಯ ಹೀನರು. ಬಡವರ ಬಗ್ಗೆ ಅವರಿಗೆಲ್ಲಿಂದ ಕಣ್ಣೀರು ಬರಬೇಕು’ ಎಂದರು.

ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಮೇ 23ರ ಬಳಿಕ ರಾಜ್ಯದ ರಾಜಕೀಯದಲ್ಲಿ ಅಲ್ಲೋಲ– ಕಲ್ಲೋಲವಾಗುತ್ತದೆ. ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸರ್ಕಾರ ರಚಿಸುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅಲ್ಲಿಯವರೆಗೆ ನಾವೇನು‌ ಕಡಲೆಕಾಯಿ ತಿಂತಾ ಕುಳಿತಿರುತ್ತೇವಾ’ ಎಂದು ಬಿಜೆಪಿಯವರಿಗೆ ತಿರುಗೇಟು ನೀಡಿದರು.

‘ಅಧಿಕಾರ ಇದ್ದಾಗ ಏನನ್ನೂ ಮಾಡದ ಯಡಿಯೂರಪ್ಪ ಮತ್ತು ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಈಗ ಏನು ಕಡಿದು ಕಟ್ಟೆ ಹಾಕುತ್ತಾರೆ’ ಎಂದ ಅವರು, ‘ಇಲ್ಲಿನ ಬಿಜೆಪಿಯವರಿಗೆ ಕಾಂಗ್ರೆಸ್‌ಗೆ ಬರಲು ಪ್ರೀತಿಯಿಂದ ಆಹ್ವಾನ ನೀಡುತ್ತೇನೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು