ಭಾನುವಾರ, ಸೆಪ್ಟೆಂಬರ್ 15, 2019
23 °C
ಪೂರ್ಣಗೊಂಡ ಮರು ವಿಚಾರಣೆ...

ಎತ್ತಿನಹೊಳೆ: ತೀರ್ಪು ಕಾದಿರಿಸಿದ ಎನ್‌ಜಿಟಿ

Published:
Updated:

ನವದೆಹಲಿ: ಎತ್ತಿನಹೊಳೆ ಯೋಜನೆ ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಮರು ವಿಚಾರಣೆಯನ್ನು ಸೋಮವಾರ ಪೂರ್ಣಗೊಳಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಈ ಕುರಿತ ತೀರ್ಪನ್ನು ಕಾದಿರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ವಾದ, ವಿವಾದಗಳನ್ನು ಈಗಾಗಲೇ ಆಲಿಸಿರುವುದರಿಂದ, ಹೆಚ್ಚುವರಿ ವಾದವನ್ನು ಒಂದು ವಾರದೊಳಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಅರ್ಜಿದಾರರು ಹಾಗೂ ರಾಜ್ಯ ಸರ್ಕಾರಗಳ ಪರ ವಕೀಲರಿಗೆ ನ್ಯಾಯಮೂರ್ತಿ ಆದರ್ಶ
ಕುಮಾರ್ ಗೋಯೆಲ್ ನೇತೃತ್ವದ ಎನ್‌ಜಿಟಿಯ ಪ್ರಧಾನ ಪೀಠ ಸೂಚಿಸಿತು.

ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳನ್ನು ಯೋಜನೆಗಾಗಿ ಉಲ್ಲಂಘಿಸಲಾಗಿದೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಇರುವ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಲಾಗಿದ್ದು, ಸರ್ಕಾರ ಪಡೆದಿರುವ ಪರಿಸರ ಮತ್ತು ಅರಣ್ಯ ಅನುಮತಿಯೇ ಕಾನೂನುಬಾಹಿರ ಎಂದು ಅರ್ಜಿದಾರರ ಪರ ವಕೀಲರಾದ ಸೃಷ್ಟಿ ಅಗ್ನಿಹೋತ್ರಿ ಅವರು ನ್ಯಾಯಮೂರ್ತಿಗಳಾದ ಎಸ್.ಪಿ. ವಾಂಗ್ಡಿ, ರಾಮಕೃಷ್ಣನ್ ಹಾಗೂ ತಜ್ಞ ಸದಸ್ಯ ನಾಗಿನ್ ನಂದಾ ಅವರಿದ್ದ ಪೀಠದೆದುರು ವಾದ ಮಂಡಿಸಿದರು.

ಪಶ್ಚಿಮ ಘಟ್ಟದಲ್ಲಿರುವ ನದಿ ಪರಿಸರದ ಮೇಲೆ ಯೋಜನೆಯಿಂದ ಆಗುವ ಸಾಧಕ– ಬಾಧಕಗಳ ಕುರಿತೂ ರಾಜ್ಯ ಸರ್ಕಾರ ಪರಾಮರ್ಶೆ ನಡೆಸಿಲ್ಲ. ಗಿಡ–ಮರಗಳನ್ನೂ ಕಡಿಯಲಾಗಿದೆ. ಒಂದೊಮ್ಮೆ ಯೋಜನೆ ಜಾರಿಯಾದಲ್ಲಿ ಆ ಪ್ರದೇಶದಲ್ಲಿ ಮಾನವ- ಪ್ರಾಣಿಗಳ ನಡುವಿನ ಸಂಘರ್ಷ ತೀವ್ರಗೊಳ್ಳಲಿದೆ ಎಂದು ಅವರು ಹೇಳಿದರು.

ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಮತ್ತಿತರ ಜಿಲ್ಲೆಗಳ ಜನತೆಗೆ ನೇತ್ರಾವತಿ ನದಿಯಿಂದ ಕುಡಿಯುವ ನೀರು ಪೂರೈಸುವ ಸದುದ್ದೇಶದಿಂದ ನಿಯಮಾನುಸಾರವೇ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಯೋಜನೆ ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಯ ಸಿಂಧುತ್ವವೇ ಪ್ರಶ್ನಾರ್ಹ ಎಂದು ರಾಜ್ಯ ಸರ್ಕಾರದ ಪರ ವಕೀಲ ಅಶೋಕ್ ದೇವರಾಜ್ ನ್ಯಾಯಪೀಠದೆದುರು ಪ್ರತಿಪಾದಿಸಿದರು.

ಯೋಜನೆಗೆ ಪರಿಸರ ಮತ್ತು ಅರಣ್ಯ ಅನುಮತಿ ಪಡೆದಿರುವುದನ್ನು ಪ್ರಶ್ನಿಸಿ ಪರಿಸರವಾದಿ ಕೆ.ಎನ್. ಸೋಮಶೇಖರ್ ಅರ್ಜಿ ಸಲ್ಲಿಸಿದ್ದರು. ಇವರೊಂದಿಗೆ ಕಿಶೋರ್‌ಕುಮಾರ್‌ ಮತ್ತು ಪುರುಷೋತ್ತಮ ಚಿತ್ರಾಪುರ ಎಂಬುವವರೂ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಡಾ.ಜವಾದ್‌ ರಹೀಂ ನೇತೃತ್ವದ ಹಸಿರು ಪೀಠವು, ಕೆಲವು ಷರತ್ತುಗಳೊಂದಿಗೆ ಯೋಜನೆಗೆ ಅನುಮತಿ ನೀಡಿ 2017ರ ಅಕ್ಟೋಬರ್‌ 6ರಂದು ತೀರ್ಪು ಪ್ರಕಟಿಸಿತ್ತು.

ಆದರೆ, ಪೀಠದಲ್ಲಿದ್ದ ತಜ್ಞ ಸದಸ್ಯ ರಂಜನ್‌ ಚಟರ್ಜಿ ಅವರು ಷರತ್ತುಗಳನ್ನು ಪ್ರಕಟಿಸುವ ಮೊದಲೇ ನಿವೃತ್ತರಾಗಿದ್ದರಿಂದ, 2018ರ ಮಾರ್ಚ್‌ 20ರಂದು ಪ್ರಕರಣದ ಮರು ವಿಚಾರಣೆ ಆರಂಭವಾಗಿತ್ತು.

Post Comments (+)