ಶನಿವಾರ, ಸೆಪ್ಟೆಂಬರ್ 25, 2021
24 °C

ವಿಶ್ವನಾಥ್ ಹೇಳಿಕೆಗೆ ಸಚಿವ ಪುಟ್ಟರಾಜು ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ಅವರು ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ಮೊದಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರೊಂದಿಗೆ ಸಮಾಲೋಚನೆ ನಡೆಸಬೇಕು’ ಎಂದು ಸಚಿವ ಸಿ.ಎಸ್. ಪುಟ್ಟರಾಜು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮೈತ್ರಿಧರ್ಮ ಪಾಲನೆ ಮಾಡುವಲ್ಲಿ ಜೆಡಿಎಸ್‌ನ ಎಲ್ಲ ಶಾಸಕರು ಹಾಗೂ ಮುಖಂಡರು ಬದ್ಧರಾಗಿದ್ದಾರೆ. ಹೀಗಾಗಿ ಮೈತ್ರಿ ಧರ್ಮಕ್ಕೆ ಧಕ್ಕೆಯಾಗುವ ಮಾತುಗಳನ್ನು ಹೇಳುವ ಪ್ರಶ್ನೆಯೇ ಬರುವುದಿಲ್ಲ. ಎಚ್.ವಿಶ್ವನಾಥ್ ಹಾಗೂ ಸಿದ್ದರಾಮಯ್ಯ ಅವರು ಒಂದೇ ಪಕ್ಷದಲ್ಲಿ ಕಾರ್ಯನಿರ್ವಹಿಸಿದ್ದು, ಸಮಕಾಲೀನರಾಗಿದ್ದಾರೆ. ಹೀಗಾಗಿ ಅವರು ಮಾತನಾಡಿರಬಹುದು. ಆದರೂ, ಮುಂದೆ ಮಾತನಾಡುವಾಗ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಬಳಿ ಸಮಾಲೋಚನೆ ನಡೆಸಿ ಮಾತನಾಡುವುದು ಸೂಕ್ತ’ ಎಂದರು.

‘ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡ ದಂತೆ ಸೂಚನೆ ನೀಡಲು ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡುವಂತೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ಮುಖಂಡರಿಗೆ ಸೂಚನೆ ನೀಡಲಿದ್ದಾರೆ. ಇನ್ನು ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಕುಂದಗೋಳ, ಚಿಂಚೋಳಿ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಪ್ರಚಾರ ಮಾಡಲಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆನ್ನುವ ವಿಚಾರ ಈ ಐದು ವರ್ಷಕ್ಕೆ ಅನ್ವಯಿಸುವುದಿಲ್ಲ. ಮೈತ್ರಿ ಸರ್ಕಾರ ರಚನೆಯಲ್ಲಿ ಕಾಂಗ್ರೆಸ್ ನಾಯಕರು ಯಾವುದೇ ಷರತ್ತು ಹಾಕದೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದರೆ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಮಾಡಲಿ. ಆಗ ನಾವು ಬೇಡ ಎನ್ನುವುದಿಲ್ಲ’ ಎಂದರು.

‘ಬಿಜೆಪಿ ನಾಯಕರು ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಿಸುವ ಮುಂಚೆ ಕೇಂದ್ರದಲ್ಲಿ ನರೇಂದ್ರ ಮೋದಿ ಅವರನ್ನು ಉಳಿಸಿಕೊಳ್ಳಲಿ. ನಂತರ ಸಮ್ಮಿಶ್ರ ಸರ್ಕಾರ ಉರುಳಿಸುವ ಬಗ್ಗೆ ಚಿಂತೆ ಮಾಡಲಿ. ಸರ್ಕಾರ ರಚನೆಯಾದ ದಿನದಿಂದ ಮೈತ್ರಿ ಸರ್ಕಾರದ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅವರು ಆಪರೇಷನ್ ಮಾಡಿದರೆ, ನಾವು ಕಡ್ಲೆ ತಿನ್ನುತ್ತಾ ಸುಮ್ಮನೆ ಕೂರಬೇಕಾ? ನಾವು ಕೂಡ ರಾಜಕಾರಣ ಮಾಡುತ್ತಿದ್ದು, ನಮ್ಮ ಶಕ್ತಿ ತೋರಿಸುತ್ತೇವೆ’ ಎಂದರು.

‘ಕೆ.ನಿಖಿಲ್ ಗೆಲುವಿನ ಬಗ್ಗೆ ಮುಖ್ಯಮಂತ್ರಿಗಳು ಯಾವುದೇ ಸಮೀಕ್ಷೆ ನಡೆಸಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕೆ.ನಿಖಿಲ್ 2.5 ಲಕ್ಷ ಮತಗಳ ಅಂತರದಿಂದ ಗೆದ್ದು ಸಂಸದರಾಗುತ್ತಾರೆ. ಲೋಕಸಭಾ ಸದಸ್ಯರ ನೇತೃತ್ವದಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಲು ಐವರು ಶಾಸಕರು ಹಾಗೂ ಮೂರು ಸಚಿವರು ಸಹಕರಿಸಲಿದ್ದೇವೆ. ಮಂಡ್ಯ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು