ಸೋಮವಾರ, ಸೆಪ್ಟೆಂಬರ್ 16, 2019
21 °C
ಪತ್ರಿಕಾಗೋಷ್ಠಿಯಲ್ಲಿ ಕೆ.ವಿ.ನಾಗರಾಜ್ ವಿರುದ್ಧ ಜೆಡಿಎಸ್ ಮುಖಂಡರ ವಾಗ್ದಾಳಿ

ಪಕ್ಷಾಂತರ ಮಾಡಿದವರಿಗೆ ಸರಿಯಾದ ಪಾಠ

Published:
Updated:

ಚಿಕ್ಕಬಳ್ಳಾಪುರ: ‘ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಈ ಬಾರಿಯ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಮತದಾರರು ಪಕ್ಷಾತೀತವಾಗಿ ನಮ್ಮನ್ನು ಬೆಂಬಲಿಸಿ, ಪಕ್ಷಾಂತರ ಮಾಡಿದವರಿಗೆ ಸರಿಯಾದ ಪಾಠ ಕಲಿಸಿದ್ದಾರೆ’ ಎಂದು ಜೆಡಿಎಸ್‌ ಮುಖಂಡ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ತಂದೆ ಕೆ.ಬಿ.ಪಿಳ್ಳಪ್ಪ ಅವರು 1991–92ರಲ್ಲಿ ಮೊದಲ ಬಾರಿಗೆ ಕೆ.ವಿ.ನಾಗರಾಜ್ ಅವರನ್ನು ಕೋಚಿಮುಲ್‌ಗೆ ನಿರ್ದೇಶಕರನ್ನಾಗಿ ಕಳುಹಿಸಿಕೊಟ್ಟರು. ಅಂದಿನಿಂದ ಅವರು ಸತತವಾಗಿ 27 ವರ್ಷಗಳ ಕಾಲ ಜೆಡಿಎಸ್ ಬೆಂಬಲದಿಂದ ನಿರಂತರವಾಗಿ ನಿರ್ದೇಶಕರಾಗಿ ಆಯ್ಕೆಯಾಗುತ್ತ ಬಂದಿದ್ದರು. ನಾನು ಅವರ ಹಿಂದೆ ಇದ್ದು ಪ್ರತಿ ಚುನಾವಣೆಯಲ್ಲಿ ಗೆಲುವು ತಂದು ಕೊಟ್ಟಿದ್ದೆ. ಅವರು ನಮಗೆ ಕೈಕೊಟ್ಟರೂ ಮತದಾರರ ನಮ್ಮ ಕೈ ಹಿಡಿದರು’ ಎಂದು ತಿಳಿಸಿದರು.

‘ಈ ಚುನಾವಣೆಯಲ್ಲಿ ನಮ್ಮ ವಿರೋಧಿಗಳು ತಮ್ಮ ಹಣಬಲ, ತೋಳ್ಬಲ ಬಳಸಿ ಸುಮಾರು 90 ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರಿಗೆ ವಿವಿಧ ಆಮಿಷ ಒಡ್ಡಿ, ಬೆದರಿಕೆ ಹಾಕಿ, ಪ್ರವಾಸದ ನೆಪದಲ್ಲಿ ಗೋವಾಗೆ ಕರೆದುಕೊಂಡು ಆಣೆ, ಪ್ರಮಾಣ ಮಾಡಿಸಿಕೊಂಡಿದ್ದರು. ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ತಿಪ್ಪರಲಾಗ ಹಾಕಿದರೂ ಮತದಾರರು ನಾಗರಾಜ್ ಅವರನ್ನು ಬೆಂಬಲಿಸಿಲ್ಲ. ಇದು ಪ್ರಜಾಪ್ರಭುತ್ವದ ಶಕ್ತಿ’ ಎಂದರು.

‘ನಮ್ಮ ಅಭ್ಯರ್ಥಿ ಬದಲಾದರೂ ಮತದಾರರು ನಮ್ಮ ಕೈ ಹಿಡಿದಿರುವುದು ಪಿಳ್ಳಪ್ಪನವರು ಈ ಭಾಗದಲ್ಲಿ ಹಾಕಿದ ರಾಜಕೀಯ ಅಡಿಪಾಯ ಇನ್ನೂ ಗಟ್ಟಿಯಾಗಿದೆ ಎಂಬುದು ತೋರಿಸುತ್ತದೆ. ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ, ಮತದಾರರಿಗೆ ವಂದನೆ ಸಲ್ಲಿಸುತ್ತೇನೆ. ಕೋಚಿಮುಲ್‌ನಲ್ಲಿ ಈ ಹಿಂದೆ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆಗೆ ಆಗ್ರಹಿಸುತ್ತೇವೆ’ ಎಂದು ಹೇಳಿದರು.

ಕೋಚಿಮುಲ್ ನೂತನ ನಿರ್ದೇಶಕ ಎನ್‌.ಸಿ.ವೆಂಕಟೇಶ್‌ ಮಾತನಾಡಿ, ‘ಜೆಡಿಎಸ್‌ನಿಂದ 27 ವರ್ಷ ಅಧಿಕಾರ ಅನುಭವಿಸಿ, ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡಿದ ಕೆ.ವಿ.ನಾಗರಾಜ್ ಅವರಿಗೆ ಮತದಾರರು ಒಳ್ಳೆಯ ಬುದ್ದಿ ಕಲಿಸಿದ್ದಾರೆ. ನಾಗರಾಜ್‌ ಅವರು ಮನೆ ಮನೆಗೆ ಹೋಗಿ ಮೆಗಾ ಡೇರಿಯಲ್ಲಿ ಕೆಲಸ ಕೊಡಿಸುವುದಾಗಿ ಅನೇಕ ಜನರಿಂದ ಲಕ್ಷಗಟ್ಟಲೇ ಹಣ ಪಡೆದು ವಂಚಿಸಿ, ಕೊನೆಗೆ ಹಣ ವಾಪಸ್‌ ಮಾಡಿರುವ ಬಗ್ಗೆ ಅನೇಕ ಸಂಘಗಳ ಅಧ್ಯಕ್ಷರು ಆರೋಪಿಸಿದ್ದಾರೆ’ ಎಂದು ತಿಳಿಸಿದರು.

ಮುಖಂಡ ಎನ್.ಆರ್.ನಾರಾಯಣಸ್ವಾಮಿ, ‘ನಾಗರಾಜ್ ಅವರು ತನ್ನನ್ನು ಬೆಳೆಸಿದ ಪಕ್ಷಕ್ಕೆ ದ್ರೋಹ ಬಗೆದು, ಬಚ್ಚೇಗೌಡರ ಬೆನ್ನಿಗೆ ಚೂರಿ ಹಾಕಿದ್ದಕ್ಕೆ ಮತದಾರರು ತಕ್ಕ ಪಾಠವನ್ನೇ ಕಲಿಸಿದ್ದಾರೆ’ ಎಂದರು.

ಮುಖಂಡ ಲಾಯರ್ ನಾರಾಯಣಸ್ವಾಮಿ, ‘ಈ ಚುನಾವಣೆ ಕೌರವರು ಮತ್ತು ಪಾಂಡವರ ನಡುವಿನ ಧರ್ಮಯುದ್ಧವಾಗಿತ್ತು. ಇದರಲ್ಲಿ ಪಾಂಡವರಾದ ನಮಗೆ ಗೆಲುವು ದೊರೆತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ತೊಡೆ ತಟ್ಟಿದ್ದ ಶಾಸಕ ಸುಧಾಕರ್ ಅವರಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ’ ಎಂದು ಹೇಳಿದರು.

‘ಈ ಫಲಿತಾಂಶದಿಂದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಬಂದಂತಾಗಿದೆ. ಹೀಗಾಗಿ ಮುಂಬರುವ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳ ಚುನಾವಣೆಗಳಲ್ಲಿ ಜೆಡಿಎಸ್‌ ಎಲ್ಲೆಡೆ ಗೆಲುವು ಸಾಧಿಸುವ ನಿಟ್ಟಿನಲ್ಲಿ ನಾವು ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕಿದೆ’ ಎಂದು ತಿಳಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್, ಮುಖಂಡರಾದ ಮುನೇಗೌಡ, ಅಂಗರೇಖನಹಳ್ಳಿ ರವಿ, ಆವಲಕೊಂಡರಾಯಪ್ಪ, ಕಾಕಲಚಿಂತೆ ರಾಜಣ್ಣ ಹಾಜರಿದ್ದರು.

 

Post Comments (+)