ಭಾನುವಾರ, ಸೆಪ್ಟೆಂಬರ್ 22, 2019
22 °C

ಇಟಾಲಿಯನ್‌ ಓಪನ್‌ ಟೆನಿಸ್‌ : ಜ್ವರೆವ್‌, ಸ್ವಿಟೋಲಿನಾಗೆ ಆಘಾತ

Published:
Updated:
Prajavani

ರೋಮ್‌ (ಎಎಫ್‌ಪಿ): ಎರಡು ಬಾರಿಯ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ಎಲಿನಾ ಸ್ವಿಟೋಲಿನಾ ಹಾಗೂ ಯುವ ಆಟಗಾರ ಅಲೆಕ್ಸಾಂಡರ್‌ ಜ್ವೆರೆವ್‌ ಅವರು ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಆಘಾತ ಅನುಭವಿಸಿದ್ದಾರೆ.  ಇವರಿಬ್ಬರೂ ಮಂಗಳವಾರ ತಮ್ಮ ಪಂದ್ಯಗಳಲ್ಲಿ ಸೋತರು.

ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸ್ವಿಟೋಲಿನಾ ಎರಡನೇ ಸುತ್ತಿನ ಪಂದ್ಯದಲ್ಲಿ ಬೆಲಾರಸ್‌ನ ವಿಕ್ಟೊರಿಯಾ ಅಜರೆಂಕಾ ಎದುರು 4–6, 6–1, 5–7 ಸೆಟ್‌ಗಳಿಂದ ಸೋಲು ಅನುಭವಿಸಿದರು. ಎರಡು ಬಾರಿ ಸುರಿದ ಮಳೆಯಿಂದಾಗಿ ಆಟಕ್ಕೆ ವ್ಯತ್ಯಯವಾಯಿತು.

ಅಮೆರಿಕಾದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮೊಣಕಾಲು ನೋವಿನ ಕಾರಣ ಟೂರ್ನಿಯಿಂದ ಹಿಂದೆ ಸರಿದಿದ್ದು, ಅವರ ಎದುರಾಳಿ, ಸಹೋದರಿ ವೀನಸ್‌ ವಿಲಿಯಮ್ಸ್ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಜೆಕ್‌ ಆಟಗಾರ್ತಿ ಕರೋಲಿನಾ ಪ್ಲಿಸ್ಕೊವಾ ಹಾಗೂ ಆಶ್ಲೆ ಬಾರ್ಟಿ ಕೂಡ ಮೂರನೇ ಸುತ್ತಿಗೆ ಪ್ರವೇಶ ಪಡೆದರು.

ಇನ್ನು ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಜರ್ಮನಿಯ ಜ್ವರೆವ್‌ ಅವರು ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದ ಆಟಗಾರ ಇಟಲಿಯ ಮ್ಯಾಟೆಯೊ ಬೆರೆನೆಟ್ಟಿ ವಿರುದ್ಧ 5–7, 5–7 ಸೆಟ್‌ಗಳಿಂದ ಮಣಿದು ಭಾರೀ ನಿರಾಸೆಗೆ ಒಳಗಾದರು.

ಬೆಲ್ಜಿಯಂನ ಡೇವಿಡ್‌ ಗಾಫಿನ್‌, ಕ್ರೊವೇಷ್ಯಾದ ಮರಿನ್‌ ಸಿಲಿಕ್‌ ಮತ್ತಿತರ ಆಟಗಾರರು ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.

 

Post Comments (+)