ಭಾನುವಾರ, ಸೆಪ್ಟೆಂಬರ್ 22, 2019
22 °C
ಬಿಡುಗಡೆಯಲ್ಲಿ ವಿಳಂಬ; ಕೋರ್ಟ್‌ ಆಕ್ಷೇಪ

ಮಮತಾ ಬ್ಯಾನರ್ಜಿ ಚಿತ್ರ ತಿರುಚಿದ್ದ ಪ್ರಕರಣ: ಕ್ಷಮೆ ಕೇಳಲ್ಲ ಎಂದ ಪ್ರಿಯಾಂಕಾ

Published:
Updated:
Prajavani

ಕೋಲ್ಕತ್ತ: ಮಮತಾ ಬ್ಯಾನರ್ಜಿ ಅವರ ಭಾವಚಿತ್ರವನ್ನು ತಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾದ್ದ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾ ಬುಧವಾರ ಬಿಡುಗಡೆಯಾಗಿದ್ದಾರೆ.

ಬಿಡುಗಡೆಯ ಬಳಿಕ ಮಮತಾ ಅವರಲ್ಲಿ ಲಿಖಿತ ಕ್ಷಮೆ ಯಾಚಿಸುವಂತೆ ಅವರಿಗೆ ಕೋರ್ಟ್ ಸೂಚನೆ ನೀಡಿತ್ತು. ಆದರೆ, ಕ್ಷಮೆ ಯಾಚಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೋಲ್ಕತ್ತದ ಅಲಿಪೋರ್‌ ಜೈಲಿನಲ್ಲಿದ್ದ ಪ್ರಿಯಾಂಕಾ ಅವರನ್ನು ಬುಧವಾರ ಬೆಳಿಗ್ಗೆ 9.40ಕ್ಕೆ ಬಿಡುಗಡೆ ಮಾಡಲಾಗಿತ್ತು. ಜೈಲಿನಿಂದ ಹೊರಬಂದ ಸ್ವಲ್ಪ ಸಮಯದಲ್ಲೇ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಒಂದು ಸಾಮಾನ್ಯ ಚಿತ್ರವನ್ನು ಪೋಸ್ಟ್‌ ಮಾಡಿದ ಕಾರಣಕ್ಕೆ ಮಮತಾ ಅವರು ನನ್ನನ್ನು ಐದು ರಾತ್ರಿಗಳ ಕಾಲ ಜೈಲಿನಲ್ಲಿಟ್ಟರು. ಇದು ಸರಿಯಾದ ನಡವಳಿಕೆಯೇ? ನಾನು ಕ್ಷಮೆ ಕೇಳುವುದಿಲ್ಲ, ಕ್ಷಮೆ ಕೇಳಬೇಕಾದ ತಪ್ಪನ್ನು ನಾನು ಮಾಡಿಲ್ಲ. ಬದಲಿಗೆ ಹೋರಾಟವನ್ನು ಮುಂದುವರಿಸುತ್ತೇನೆ’ ಎಂದಿದ್ದಾರೆ.

‘ಜೈಲಿನಲ್ಲಿ ನನಗೆ ಹಿಂಸೆ ನೀಡಿದ್ದಾರೆ. ಕ್ಷಮಾಪಣಾ ಪತ್ರಕ್ಕೆ ಸಹಿಹಾಕುವಂತೆ ಜೈಲು ಸಿಬ್ಬಂದಿ ನನ್ನ ಮೇಲೆ ಒತ್ತಡ ಹೇರಿದ್ದಾರೆ. ಮಂಗಳವಾರವೇ ಜಾಮೀನು ಕೊಟ್ಟಿದ್ದರೂ ನನ್ನನ್ನು ಬಿಡುಗಡೆ ಮಾಡಲಿಲ್ಲ. ನನ್ನ ಕುಟುಂಬದವರು ಮತ್ತು ವಕೀಲರನ್ನು ಭೇಟಿ ಮಾಡಬೇಕು ಎಂದು ಅವರನ್ನು ಕೇಳಿಕೊಂಡೆ. ಆದರೆ ನನ್ನ ಮನವಿಗೆ ಅವರು (ಜೈಲು ಸಿಬ್ಬಂದಿ) ಸ್ಪಂದಿಸಲಿಲ್ಲ. ಬದಲಿಗೆ ಕ್ಷಮಾಪಣಾ ಪತ್ರಕ್ಕೆ ಸಹಿ ಹಾಕುವಂತೆ ಒತ್ತಾಯಿಸಿ ಹಿಂಸಿಸಿದರು’ ಎಂದು ಪ್ರಿಯಾಂಕಾ ಅರೋಪಿಸಿದರು.

‘ಜೈಲು ಸಿಬ್ಬಂದಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿದ್ದಾರೆ’ ಎಂದು ಪ್ರಿಯಾಂಕಾ ಅವರ ಸಹೋದರ ರಾಜೀವ್‌ ಆರೋಪಿಸಿದರು.

‘ಮಂಗಳವಾರ ಸಂಜೆ ನಾನು ಜೈಲಿಗೆ ಹೋಗಿ ಮನವಿ ಮಾಡಿದರೂ ಅವರು ಪ್ರಿಯಾಂಕಾಳನ್ನು ಬಿಡುಗಡೆ ಮಾಡಲಿಲ್ಲ. ನ್ಯಾಯಾಲಯದ ಆದೇಶದ ಪ್ರತಿ ನಮ್ಮ ಕೈಸೇರುವವರೆಗೆ ಅವರನ್ನು ಬಿಡುವುದಿಲ್ಲ ಎಂದು ಅವರು ವಾದಿಸಿದರು. ಕಾರಣಾಂತರದಿಂದ ಆದೇಶದ ಪ್ರತಿ ನನ್ನ ಕೈಸೇರುವುದು ವಿಳಂಬವಾಯಿತು’ ಎಂದು ರಾಜೀವ್‌ ಹೇಳಿದ್ದಾರೆ.

ಕೋರ್ಟ್‌ ಆಕ್ಷೇಪ: ಪ್ರಿಯಾಂಕಾ ಅವರಿಗೆ ಮಂಗಳವಾರವೇ ಜಾಮೀನು ನೀಡಿದ್ದರೂ ಅವರನ್ನು ಬಿಡುಗಡೆ ಮಾಡದಿರುವುದಕ್ಕೆ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಿಯಾಂಕಾ ಅವರ ಸಹೋದರ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಸಂಜೀವ್‌ ಖನ್ನಾ ಅವರನ್ನೊಳಗೊಂಡ ರಜಾಕಾಲದ ಪೀಠವು, ‘ಪ್ರಿಯಾಂಕಾ ಅವರನ್ನು ಮಂಗಳವಾರವೇ ಬಿಡುಗಡೆ ಮಾಡಿಲ್ಲ ಎಂಬುದು ನಿಜವೇ’ ಎಂದು ರಾಜ್ಯದ ಪರ ಹಾಜರಾಗಿದ್ದ ವಕೀಲರನ್ನು ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ವಕೀಲರು ‘ಇಂದು ಮುಂಜಾನೆ 9.40ಕ್ಕೆ ಬಿಡುಗಡೆ ಮಾಡಲಾಗಿದೆ’ ಎಂದರು.

‘ನಿನ್ನೆ ನಿಮ್ಮ ಸಮ್ಮುಖದಲ್ಲಿಯೇ ಜಾಮೀನು ನೀಡಿದ್ದರೂ ಬಿಡುಗಡೆ ಮಾಡಿಲ್ಲವೇಕೆ’ ಎಂದು ನ್ಯಾಯಾಲಯ ಪ್ರಶ್ನಿಸಿದ್ದಕ್ಕೆ, ವಕೀಲರು ಜೈಲಿನ ಕೈಪಿಡಿಯನ್ನು ನ್ಯಾಯಮೂರ್ತಿಗಳ ಮುಂದಿಟ್ಟರು. ಇದರಿಂದ ಕುಪಿತಗೊಂಡ ನ್ಯಾಯಮೂರ್ತಿಗಳು, ‘ಜೈಲು ಕೈಪಿಡಿ ಕೋರ್ಟ್‌ ಆದೇಶಕ್ಕಿಂತ ದೊಡ್ಡದಲ್ಲ. ಮೊದಲನೆಯದಾಗಿ ಅವರನ್ನು ಬಂಧಿಸಿದ್ದೇ ತಪ್ಪು, ನ್ಯಾಯಾಲಯದ ಆದೇಶದ ಹೊರತಾಗಿಯೂ ಅವರನ್ನು ಇನ್ನೊಂದು ರಾತ್ರಿ ಜೈಲಿನಲ್ಲಿರಿಸಿದ್ದು ಇನ್ನೊಂದು ತಪ್ಪು’ ಎಂದಿತು.

‘ಜಾಮೀನು ನೀಡಿದ ಅರ್ಧ ಗಂಟೆಯೊಳಗೆ ಪ್ರಿಯಾಂಕಾ ಅವರನ್ನು ಬಿಡುಗಡೆ ಮಾಡಬೇಕಾಗಿತ್ತು. ಆಕೆಯನ್ನು ಮಂಗಳವಾರ ಬಿಡುಗಡೆ ಮಾಡಿಲ್ಲ ಎಂಬುದು ನಿಜವಾಗಿದ್ದಲ್ಲಿ, ಸಂಬಂಧಪಟ್ಟವರ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕರಣ ದಾಖಲಿಸಬೇಕಾಗುತ್ತದೆ. ಅವರು ತಕ್ಕ ಶಾಸ್ತಿ ಅನುಭವಿಸಬೇಕು’ ಎಂದು ನ್ಯಾಯಪೀಠ ಹೇಳಿದೆ.

ಮುಂದಿನ ವಾರವೇ ಈ ಪ್ರಕರಣದ ವಿಚಾರಣೆಯನ್ನು ನಡೆಸಬೇಕು ಎಂದು ಪ್ರಿಯಾಂಕಾ ಪರ ವಕೀಲ ಕೌಲ್‌ ಅವರು ಮನವಿ ಮಾಡಿದರು. ಆದರೆ, ಪ್ರಿಯಾಂಕಾ ಈಗಾಗಲೇ ಬಿಡುಗಡೆ ಆಗಿರುವುದರಿಂದ ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ, ರಜಾಕಾಲ ಮುಗಿದ ಬಳಿಕ, ಜುಲೈ ತಿಂಗಳಲ್ಲಿ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ಕೋರ್ಟ್‌ ತಿಳಿಸಿತು.

Post Comments (+)