ಭಾನುವಾರ, ಸೆಪ್ಟೆಂಬರ್ 22, 2019
22 °C

‘ಕಾಂಗ್ರೆಸ್‌ನಲ್ಲಿ ಪ್ರಧಾನಿಯ ಮಗ ಪ್ರಧಾನಿ’

Published:
Updated:

ಅಲಿರಾಜ್‌ಪುರ (ಮಧ್ಯಪ್ರದೇಶ): ಜನರ ಸಮಸ್ಯೆಗಳನ್ನು ಪರಿಹರಿಸುವುದು ಬಿಜೆಪಿಯ ಕಾಳಜಿ. ಆದರೆ, ತಮ್ಮ ಮಗ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯನ್ನು ಪ್ರಧಾನಿಯಾಗಿಸುವುದು ಮಾತ್ರ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕಾಳಜಿಯಾಗಿದೆ ಎಂದು ಬಿಜೆಪಿ ಮುಖಂಡ ನಿತಿನ್‌ ಗಡ್ಕರಿ ಹೇಳಿದ್ದಾರೆ.

‘ಜನರಿಗೆ ವಿದ್ಯುತ್‌ ಸಂಪರ್ಕ ಕೊಡುವುದು, ರೈತರ ಬೆಳೆಗೆ ಸರಿಯಾದ ಬೆಲೆ ಒದಗಿಸುವುದು ನಮ್ಮ ಕಳಕಳಿ. ಆದರೆ, ರಾಹುಲ್‌ ಪ್ರಧಾನಿಯಾಗಲಿ ಎಂಬುದು ಮಾತ್ರ ಸೋನಿಯಾ ಅವರ ಕಳಕಳಿ’ ಎಂದು ಗಡ್ಕರಿ ಆರೋಪಿಸಿದರು. 

ಕಾಂಗ್ರೆಸ್‌ನಲ್ಲಿ ಪ್ರಧಾನಿಯ ಮಕ್ಕಳು ಪ್ರಧಾನಿಯಾಗುತ್ತಾರೆ, ಮುಖ್ಯಮಂತ್ರಿಯ ಮಕ್ಕಳು ಮುಖ್ಯಮಂತ್ರಿಯಾಗುತ್ತಾರೆ, ಸಂಸದರ ಮಕ್ಕಳು ಸಂಸದರಾಗುತ್ತಾರೆ ಮತ್ತು ಶಾಸಕರ ಮಕ್ಕಳು ಶಾಸಕರಾಗುತ್ತಾರೆ. ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಕಾಂಗ್ರೆಸ್‌ನಲ್ಲಿ ಸ್ಥಾನವೇ ಇಲ್ಲ’ ಎಂದು ಗಡ್ಕರಿ ಹೇಳಿದರು. 

ಗಂಗಾ ನದಿ ಶುದ್ಧೀಕರಣ ಕೆಲಸ ಶೇ 30ರಷ್ಟು ಮಾತ್ರ ಆಗಿದೆ. ಹಾಗಿದ್ದರೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ಗಂಗಾ ಸ್ನಾನ ಮಾಡುವುದು ಸಾಧ್ಯವಾಗಿದೆ ಎಂದರು. 

‘ನಾವು ರೂಪಿಸಿದ ಜಲ ಮಾರ್ಗದಲ್ಲಿ ಪ್ರಿಯಾಂಕಾ ಅವರು ಅಲಹಾಬಾದ್‌ನಿಂದ ವಾರಾಣಸಿಗೆ ಹೋದರು. ಆದರೆ, ಅವರು ನಮ್ಮ ವಿರುದ್ಧವೇ ಆರೋಪ ಮಾಡಿದರು. ನಾವು ಈ ಮಾರ್ಗವನ್ನು ಅಭಿವೃದ್ಧಿ ಮಾಡದೇ ಇದ್ದಿದ್ದರೆ ಅವರು ಹೇಗೆ ಪ್ರಯಾಣಿಸುತ್ತಿದ್ದರು ಎಂದು ನಾನು ಕೇಳಲು ಬಯಸುತ್ತೇನೆ’ ಎಂದರು.

Post Comments (+)