ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಬೀದಿ ನಾಯಿ ಸಮೀಕ್ಷೆಗೆ ಪಾಲಿಕೆ ಅಸ್ತು

Published:
Updated:

ಬೆಂಗಳೂರು: ಬೀದಿ ನಾಯಿಗಳ ಹಾವಳಿಯಿಂದ ಬೇಸತ್ತಿದ್ದ ಬೆಂಗಳೂರಿನ ನಿವಾಸಿಗಳಿಗೆ ಪಾಲಿಕೆ ಸಿಹಿ ಸುದ್ದಿ ನೀಡಿದೆ. ಜನರ ದೂರುಗಳಿಗೆ ಸ್ಪಂದಿಸಿ ಕೊನೆಗೂ ಬೀದಿ ನಾಯಿಗಳ ಸಮೀಕ್ಷೆಗೆ ಮುಂದಾಗಿದೆ.

ನಾಯಿಗಳ ಮುಖ ಚಹರೆ ಹಾಗೂ ಚರ್ಮವನ್ನು ಗುರುತಿಸುವ ತಂತ್ರಜ್ಞಾನದ ಮೂಲಕ ಈ ಬಾರಿಯ ಸಮೀಕ್ಷೆ ವೈಜ್ಞಾನಿಕವಾಗಿ ನಡೆಯಲಿದೆ. ಸಮೀಕ್ಷೆಯಿಂದ ಪ್ರಾಣಿ ಜನ್ಮ ತಡೆ (ಎಬಿಸಿ) ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ. ಇಂತಹ ಕಾರ್ಯಕ್ರಮಗಳು ದೆಹಲಿ, ಮುಂಬೈ ಹಾಗೂ ಪುಣೆಯಲ್ಲಿ ಚಾಲ್ತಿಯಲ್ಲಿವೆ.

ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. 2012ರಲ್ಲಿ ಪಾಲಿಕೆ ನಡೆಸಿದ ಸಮೀಕ್ಷೆಗೆ ₹34 ಲಕ್ಷ ರೂಪಾಯಿ ವೆಚ್ಚ ತಗುಲಿತ್ತು. ಈ ಸಮೀಕ್ಷೆಗೆ ಪ್ರತಿ ವಲಯಕ್ಕೆ ₹50ಲಕ್ಷ ಖರ್ಚಾಗಲಿದೆ ಎಂದು ಬಿಬಿಎಂಪಿಯ ಪಶು ಸಂಗೋಪನಾ ವಲಯದ ಉಪನಿರ್ದೇಶಕ ಜಿ.ಆನಂದ್‌ ಮಾಹಿತಿ ನೀಡಿದರು.

ಹರಾಜಿನಲ್ಲಿ ಪ್ರತಿ ಬೀದಿಯಲ್ಲಿ ಇರುವ ನಾಯಿಗಳ ಫೊಟೋ ಒಮ್ಮೆ ಸೆರೆ ಹಿಡಿಯಲಾಗುವುದು. ಸಮೀಕ್ಷೆ ವೇಳೆ ನಾಯಿ ಮತ್ತೊಮ್ಮೆ ಕಂಡರೆ ಸೆನ್ಸರ್‌ನಲ್ಲಿ ತಿಳಿಯುತ್ತದೆ. ಇದರಿಂದ ಸಮೀಕ್ಷೆ ನಿಖರವಾಗಿ ನಡೆಯಲಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 2007ರ ಸಮೀಕ್ಷೆಯ ಪ್ರಕಾರ 1.8ಲಕ್ಷ ನಾಯಿಗಳಿರುವುದಾಗಿ ವರದಿಯಾಗಿತ್ತು. 2012ರಲ್ಲಿ 2.9 ಲಕ್ಷ ಬೀದಿನಾಯಿಗಳಿದ್ದವು.

Post Comments (+)