ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಐದು ಕಡೆ ಧರೆಗುರುಳಿದ ಮರಗಳು *ಮುರಿದು ಬಿದ್ದ ಸೆಂಟ್ರಿಂಗ್‌

ನಗರದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ

Published:
Updated:
Prajavani

ಬೆಂಗಳೂರು: ಮೇಲ್ಮೈ ಸುಳಿಗಾಳಿಯ ಪರಿಣಾಮ ನಗರದಲ್ಲಿ ಬುಧವಾರ ಗುಡುಗು ಸಹಿತ ಮುಗಾರು ಪೂರ್ವ ಮಳೆ ಸುರಿಯಿತು. ಐದು ಕಡೆ ಮರಗಳು ಧರೆಗೆ ಉರುಳಿದ್ದು, ಟ್ರಿನಿಟಿ ವೃತ್ತದ ಬಳಿ ಏಳು ಮಹಡಿಗಳ ಲಿಡೊ ಮಾಲ್ ಕಟ್ಟಡದ ಕಾಮಗಾರಿ ಸಲುವಾಗಿ ಜೋಡಿಸಿದ್ದ ಕಬ್ಬಿಣದ ಸಲಕರಣೆಗಳು ಮುರಿದು ಬಿದ್ದವು.

ಲಿಡೋ ಮಾಲ್‌ ಕಟ್ಟಡದ ನವೀಕರಣ ಕೆಲಸ ನಡೆಯುತ್ತಿತ್ತು. ಕಾಮಗಾರಿ ಸಲುವಾಗಿ ಜೋಡಿಸಿದ್ದ ಕಬ್ಬಿಣದ ಸಲಕರಣೆಗಳು ಮುರಿದು ಬಿದ್ದ ಪರಿಣಾಮ, ಮಾಲ್‌ ಮುಂದೆ ನಿಲ್ಲಿಸಿದ್ದ ಕಾರಿಗೆ ಹಾಗೂ ಪಕ್ಕದ ಮಾಲ್‌ಗೆ ಹಾನಿ ಉಂಟಾಗಿದೆ. ಹಲಸೂರು ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.

ನಗರದಲ್ಲಿ ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಮಳೆ ಹನಿಯಿತು. ಕಮ್ಮನಹಳ್ಳಿ, ಹೆಬ್ಬಾಳ, ಹಲಸೂರು, ಅರಮನೆ ರಸ್ತೆ, ಮಲ್ಲೇಶ್ವರ, ಬಸವನಗುಡಿ, ಶಾಂತಿನಗರ, ವಿಲ್ಸನ್‌ ಗಾರ್ಡನ್‌, ಯಶವಂತಪುರ, ಯಲಹಂಕ ಹಾಗೂ ಮೆಜೆಸ್ಟಿಕ್‌ನಲ್ಲಿ ಜೋರು ಮಳೆ ಸುರಿಯಿತು. ಮತ್ತಿಕೆರೆ ಸೇರಿದಂತೆ ವಿವಿಧ ಪ್ರದೇಶದ ಕೆಳಸೇತುವೆಗಳ ಒಳಗೆ ನೀರು ನಿಂತಿದ್ದು, ಕಂಡುಬಂತು.

ಗಾಳಿ ಮಳೆಯ ಜೊತೆಗೆ ಗುಡುಗಿನ ಆರ್ಭಟವೂ ಜೋರಾಗಿತ್ತು. ಸಂಜೆ  ವೇಳೆ ಮಳೆ ಜೋರಾಗಿದ್ದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಅಂಗಡಿ–ಮುಂಗಟ್ಟುಗಳು ಹಾಗೂ ಮೆಟ್ರೊ ನಿಲ್ದಾಣಗಳ ಮುಂದೆ ಜನ ಆಶ್ರಯ ಪಡೆದಿರುವುದು ಕಂಡುಬಂದಿತು.

ಮರಗಳು ಧರೆಗೆ: ಹಲಸೂರು, ಜಯಮಾಲ, ವಿವೇಕನಗರ ಹಾಗೂ ಮೈಕೊ ಲೇಔಟ್‌ ಹಾಗೂ ಮತ್ತಿಕೆರೆಯಲ್ಲಿ ಮರಗಳು ಧರೆಗೆ ಉರುಳಿದವು. ರಸ್ತೆಗೆ ಮರ ಬಿದ್ದಿದ್ದರಿಂದ ಕೆಲಕಾಲ ವಾಹನ ದಟ್ಟಣೆ ಉಂಟಾಯಿತು. ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರಗಳನ್ನು ತೆರವುಗೊಳಿಸಿದರು. 

15 ಪಕ್ಷಿಗಳ ಸಾವು: ಶ್ರಿನಗರದಲ್ಲಿ ಬೀಸಿದ ಗಾಳಿಗೆ ಮೈನಾ ಸೇರಿದಂತೆ ವಿವಿಧ ಜಾತಿಯ 15 ಪಕ್ಷಿಗಳು ನೆಲಕ್ಕೆ ಬಿದ್ದು ಸಾವನ್ನಪ್ಪಿವೆ. 

Post Comments (+)