ಅನುಕಂಪದ ಅಲೆ ಮೇಲೆ ನಡಿಗೆ

ಭಾನುವಾರ, ಮೇ 26, 2019
27 °C
ಕುಂದಗೋಳ: ಸ್ಥಾನ ಉಳಿಸಿಕೊಳ್ಳಲು ದೋಸ್ತಿ ಪಣ l ಬಿಜೆಪಿಗೆ ಗೆಲ್ಲುವ ವಿಶ್ವಾಸ

ಅನುಕಂಪದ ಅಲೆ ಮೇಲೆ ನಡಿಗೆ

Published:
Updated:
Prajavani

ಕುಂದಗೋಳ (ಹುಬ್ಬಳ್ಳಿ): ಕುಂದಗೋಳ ಉಪ ಚುನಾವಣೆಯು ಸಮ್ಮಿಶ್ರ ಸರ್ಕಾರದ ದೋಸ್ತಿಗಳಾದ ಜೆಡಿಎಸ್‌–ಕಾಂಗ್ರೆಸ್‌ ಪಕ್ಷಗಳಿಗೆ ಪ್ರತಿಷ್ಠೆಯಾಗಿದ್ದರೆ, ಮತ್ತೆ ಅಧಿಕಾರ ಹಿಡಿಯಲು ಈ ಕ್ಷೇತ್ರವನ್ನು ಮೆಟ್ಟಿಲಾಗಿಸಿಕೊಳ್ಳುವ ತವಕದಲ್ಲಿ ಬಿಜೆಪಿ ಇದೆ.

ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ಅವರ ಹಠಾತ್‌ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಅನುಕಂಪದ ಲಾಭ ಪಡೆಯಲು ಶಿವಳ್ಳಿ ಅವರ ಪತ್ನಿ ಕುಸುಮಾವತಿ ಅವರಿಗೇ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಬಿಜೆಪಿಯು ಯಡಿಯೂರಪ್ಪ ಸಂಬಂಧಿಯಾದ ಎಸ್‌.ಐ.ಚಿಕ್ಕನಗೌಡ್ರ ಅವರನ್ನು ಕಣಕ್ಕೆ ಇಳಿಸಿದೆ.

‘ಶಿವಳ್ಳಿ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಕುಸುಮಾವತಿ ಅವರ ಕೈ ಹಿಡಿಯತ್ತವೆ’ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ಇದೆ. ಸತತ ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತ ಅನುಕಂಪದ ಬೀಜವನ್ನು ಬಿಜೆಪಿ ಬಿತ್ತಿದೆ. ಜತೆಗೆ, ಇಲ್ಲಿ ಗೆದ್ದರೆ ರಾಜ್ಯದ ಸಮ್ಮಿಶ್ರ ಸರ್ಕಾರ ಬಿದ್ದು, ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದೂ ಯಡಿಯೂರಪ್ಪ ಸೇರಿದಂತೆ ಆ ಪಕ್ಷದ ಎಲ್ಲಾ ನಾಯಕರು ಆಸೆ ಹುಟ್ಟಿಸುತ್ತಿದ್ದಾರೆ.

ಕುಂದಗೋಳವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಬಾರದು ಎನ್ನುವ ಕಾರಣಕ್ಕಾಗಿ ಹೈಕಮಾಂಡ್ ಚುನಾವಣಾ ಉಸ್ತುವಾರಿಯನ್ನು ಸಚಿವ ಡಿ.ಕೆ. ಶಿವಕುಮಾರ್‌ಗೆ ವಹಿಸಿದೆ. ಕ್ಷೇತ್ರದಲ್ಲೇ ಬೀಡುಬಿಟ್ಟಿರುವ ಅವರು, ಕುಸುಮಾವತಿ ಗೆಲುವಿಗೆ ಬಿಡುವಿಲ್ಲದ ತಂತ್ರಗಳನ್ನು ರೂಪಿಸುತ್ತಲೇ ಇದ್ದಾರೆ. ಜತೆಗೆ, ಮುಕ್ತ ಆಹ್ವಾನ ನೀಡುವ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಶಿವಕುಮಾರ್‌ ಜೊತೆಗೆ ಅರ್ಧ ಡಜನ್‌ಗೂ ಹೆಚ್ಚು ಸಚಿವರು, 20ಕ್ಕೂ ಹೆಚ್ಚು ಶಾಸಕರು, ಮಾಜಿ ಶಾಸಕರು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೊಂದಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ ಮುಖಂಡರಾದ ಸಿದ್ದ
ರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್‌, ದಿನೇಶ್‌ ಗುಂಡೂರಾವ್, ಎಚ್.ಕೆ.ಪಾಟೀಲ್ ಸೇರಿದಂತೆ ಇತರರೂ ಭರ್ಜರಿ ಪ್ರಚಾರ ಮಾಡಿದ್ದಾರೆ.

ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮತಗಳು ಚದುರದಂತೆ ತಡೆಯಲು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದ
ರಾಮಯ್ಯ, ಸಚಿವರಾದ ಸತೀಶ ಜಾರಕಿಹೊಳಿ, ಜಮೀರ್ ಅಹ್ಮದ್ ಸೇರಿದಂತೆ ಆಯಾ ಸಮುದಾಯಗಳ ನಾಯಕರನ್ನು ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್‌ ಪ್ರಚಾರಕ್ಕೆ ನಿಯೋಜಿಸಿದೆ. ಇದೇ ತಂತ್ರವನ್ನೂ ಬಿಜೆಪಿ ಕೂಡ ಮಾಡಿದ್ದು, ಎಲ್ಲರೂ ‘ತಮ್ಮವರ’ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.

ಬಿಜೆಪಿಯೂ ಕ್ಷೇತ್ರದ ಮೂಲೆಮೂಲೆಗೆ ಉಸ್ತುವಾರಿಗಳನ್ನು ನೇಮಿಸಿದೆ. ಬಿ.ಎಸ್‌. ಡಿಯೂರಪ್ಪ, ಕೆ.ಎಸ್‌. ಈಶ್ವರಪ್ಪ, ಜಗದೀಶ ಶೆಟ್ಟರ್, ಶ್ರೀರಾಮುಲು, ಅರವಿಂದ ಲಿಂಬಾವಳಿ, ಬಸವರಾಜ ಬೊಮ್ಮಾಯಿ, ಕಳಕಪ್ಪ ಬಂಡಿ ಸೇರಿದಂತೆ ನಾಯಕರ ದೊಡ್ಡ ದಂಡೇ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದು, ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿದೆ.

ಕ್ಷೇತ್ರದ ಬಹುಸಂಖ್ಯಾತ ಕುರುಬ ಸಮುದಾಯದ ಮತಗಳನ್ನು ಚದುರಿಸಲು ಪ್ರತಿತಂತ್ರಕ್ಕೆ ಮೊರೆ ಹೋಗಿರುವ ಬಿಜೆಪಿ, ಆ ಸಮುದಾಯದ ನಾಯಕ ಕೆ.ಎಸ್. ಈಶ್ವರಪ್ಪ ಅವರನ್ನು ಹಳ್ಳಿಹಳ್ಳಿಗಳಿಗೂ ಕಳುಹಿಸಿ ಪ್ರಚಾರ ಮಾಡಿಸುತ್ತಿದೆ. ಜತೆಗೆ, ಎಸ್‌.ಟಿ ಸಮುದಾಯದ ಶ್ರೀರಾಮುಲು ಸಹ ಗ್ರಾಮೀಣ ಭಾಗದಲ್ಲಿ ನಾಲ್ಕೈದು ದಿನ ಪ್ರಚಾರ ಮಾಡಿದ್ದಾರೆ.

ಬೂದಿ ಮುಚ್ಚಿದ ಕೆಂಡ: ಎರಡೂ ಪಕ್ಷಗಳಲ್ಲಿರುವ ಭಿನ್ನಮತವು ಮೇಲ್ನೋಟಕ್ಕೆ ಶಮನವಾಗಿದ್ದರೂ ಬೂದಿಮುಚ್ಚಿದ ಕೆಂಡದಂತಿದೆ. ಚಿಕ್ಕನಗೌಡ್ರ ಬದಲಾಗಿ ತಮಗೇ ಟಿಕೆಟ್‌ ನೀಡಬೇಕು ಎಂದು ಮುಖಂಡ ಎಂ.ಆರ್‌. ಪಾಟೀಲ ಪಟ್ಟು ಹಿಡಿದಿದ್ದರು. ಪಾಟೀಲ ಪರ
ವಾಗಿ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ ಲಾಬಿ ಮಾಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಟಿಕೆಟ್‌ ಚಿಕ್ಕನಗೌಡ್ರ ಪಾಲಾಗಿದ್ದು, ಕೆಲವರ ಅಸಮಾಧಾನಕ್ಕೂ ಕಾರಣವಾಗಿದೆ.

ಕಾಂಗ್ರೆಸ್‌ನ ಕುಸುಮಾವತಿ ಅವರಿಗೆ ಟಿಕೆಟ್‌ ನೀಡಿದ್ದಕ್ಕೆ ಆರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು. ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಆರು ಮಂದಿಯನ್ನೂ ಸಿದ್ದರಾಮಯ್ಯ, ಜಮೀರ್ ಅಹ್ಮದ್‌ ಮನವೊಲಿಸಿ ನಾಮಪತ್ರ ವಾಪಸ್‌ ತೆಗೆಸಿದರು. ಕೆಲವರು ಬಿಜೆಪಿ ಸೇರಿದ್ದೂ ಕಾಂಗ್ರೆಸ್‌ಗೆ ತಲೆನೋವಾಗಿದೆ.

ಅನುಕಂಪ–ಅಭಿವೃದ್ಧಿ ಮತ್ತು ಹೊಸ ಸರ್ಕಾರದ ಕನಸೇ ಚುನಾವಣೆಯ ಸರಕಾಗಿದೆ. ಕ್ಷೇತ್ರದ ಕುಡಿಯುವ ನೀರಿನ ತೀವ್ರ ಕೊರತೆ ಸೇರಿದಂತೆ ಮೂಲಸೌಕರ್ಯದ ಸಮಸ್ಯೆಗಳು ನಾಯಕರಿಗೆ ಕಾಣುತ್ತಿಲ್ಲ.

ಎರಡೂ ಪಕ್ಷಗಳು ಗೆಲುವಿಗಾಗಿ ನಡೆಸುತ್ತಿರುವ ಯತ್ನಗಳು ಎಲ್ಲೇ ಮೀರಿವೆ. ಯಾರೇ ಗೆದ್ದರೂ ಅಂತರ ಕಡಿಮೆ ಇರುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !