21ಕ್ಕೆ ಬಿಜೆಪಿ– ಜೆಡಿಎಸ್ ಪ್ರತ್ಯೇಕ ಸಭೆ

ಸೋಮವಾರ, ಮೇ 27, 2019
27 °C
ಶಾಸಕರನ್ನು ಹಿಡಿದಿಟ್ಟುಕೊಳ್ಳಲು ನಾಯಕರ ತಂತ್ರ

21ಕ್ಕೆ ಬಿಜೆಪಿ– ಜೆಡಿಎಸ್ ಪ್ರತ್ಯೇಕ ಸಭೆ

Published:
Updated:

ಬೆಂಗಳೂರು: ಲೋಕಸಭೆ ಚುನಾವಣೆಯ ಕೊನೆಯ ಆವೃತ್ತಿಯ ಮತದಾನ (ಮೇ 19) ಮುಗಿಯುತ್ತಿದ್ದಂತೆ ರಾಜಕೀಯ ಪಲ್ಲಟ ಶುರುವಾಗಬಹುದು ಎಂಬ ಲೆಕ್ಕಾಚಾರದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ತಮ್ಮ ಶಾಸಕಾಂಗ ಪಕ್ಷದ ಸಭೆಯನ್ನು ಇದೇ 21ರಂದು ಕರೆದಿದ್ದಾರೆ. 

‘23ಕ್ಕೆ ಲೋಕಸಭೆ ಫಲಿತಾಂಶ ಪ್ರಕಟವಾಗಲಿದೆ. 20ಕ್ಕೂ ಹೆಚ್ಚು ಜೆಡಿಎಸ್‌, ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡಲಿದ್ದಾರೆ. ಅದೇ ದಿನ ಕುಮಾರಸ್ವಾಮಿ ಸರ್ಕಾರ ಪತನವಾಗಲಿದೆ’ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಬಂದಿದ್ದಾರೆ. ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿರುವ ಗೋಕಾಕ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಕೂಡ ರಾಜೀನಾಮೆ ಕೊಡಬಹುದು ಎಂಬ ಮಾತುಗಳೂ ಇವೆ.

ಜೆಡಿಎಸ್ ಶಾಸಕರನ್ನು ಸೆಳೆಯಲು ಕಮಲ ಪಕ್ಷದ ನಾಯಕರು ಮುಂದಾಗಬಹುದು ಎಂಬ ಆತಂಕ ಆ ಪಕ್ಷದ ನಾಯಕರನ್ನು ಕಾಡುತ್ತಿದೆ. ಶಾಸಕರನ್ನು ಹಿಡಿದಿಟ್ಟುಕೊಂಡು, ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ ಎನ್ನಲಾಗಿದೆ.

‘ಲೋಕಸಭೆ ಫಲಿತಾಂಶವು ಮೈತ್ರಿ ಸರ್ಕಾರದ ಭಾಗೀದಾರ ಪಕ್ಷಗಳ ನಾಯಕರ ಮಧ್ಯೆ ವೈಮನಸ್ಸು ತರಲಿದ್ದು, ಸರ್ಕಾರ ಬೀಳುವುದು ಖಚಿತ’ ಎಂಬ ಆತ್ಮವಿಶ್ವಾಸದಲ್ಲಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು 21ರಂದೇ ಸಭೆ ಕರೆದಿದ್ದಾರೆ.

ಮೈತ್ರಿ ಮಧ್ಯೆ ಇರುವ ಕಗ್ಗಂಟು ಬಿಕ್ಕಟ್ಟಾಗಿ ಪರಿವರ್ತನೆಯಾದರೆ ‍ಪಕ್ಷದ ಮುಂದಿನ ನಡೆ ಏನಾಗಿರಬೇಕು ಎಂಬುದನ್ನು ಚರ್ಚಿಸುವ ಜತೆಗೆ, ಪಕ್ಷದ ಶಾಸಕರು ‘ಮೈತ್ರಿ ಆಪರೇಷನ್‌’ಗೆ ಒಳಗಾಗದಂತೆ ಎಚ್ಚರವಹಿಸುವುದು ಸಭೆಯ ಉದ್ದೇಶ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !