ಪಶ್ಚಿಮ ಬಂಗಾಳದ ವಿದ್ಯಮಾನ ಆಯೋಗ ಕಲಿಯಬೇಕಿರುವುದು ಬಹಳಷ್ಟು

ಶುಕ್ರವಾರ, ಮೇ 24, 2019
23 °C
ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಯುತ್ತಿದೆ ಎಂಬ ಭಾವನೆ ರಾಜಕೀಯ ಪಕ್ಷಗಳಲ್ಲಿ ಮತ್ತು ಜನರಲ್ಲಿ ಮೂಡುವಂತೆ ಆಯೋಗ ನೋಡಿಕೊಳ್ಳಬೇಕು

ಪಶ್ಚಿಮ ಬಂಗಾಳದ ವಿದ್ಯಮಾನ ಆಯೋಗ ಕಲಿಯಬೇಕಿರುವುದು ಬಹಳಷ್ಟು

Published:
Updated:
Prajavani

ಈ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗದ ನಿರ್ಧಾರಗಳು ಅತಿಹೆಚ್ಚು ಚರ್ಚೆಗೆ ಮತ್ತು ಟೀಕೆಗೆ ಒಳಗಾಗಿವೆ. ಚುನಾವಣಾ ದಿನಾಂಕ ಘೋಷಣೆಯನ್ನು ಆಯೋಗ ವಿಳಂಬ ಮಾಡಿ ಆಡಳಿತ ಪಕ್ಷ ಬಿಜೆಪಿಗೆ ನೆರವು ನೀಡಿದೆ ಎಂಬ ಆರೋಪ ಕೇಳಿಬಂತು. ಚುನಾವಣಾ ಪ್ರಕ್ರಿಯೆಯ ಉದ್ದಕ್ಕೂ ಆಯೋಗದ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ. ಮತದಾನದ ಪ್ರಕ್ರಿಯೆ ಈಗ ಕೊನೆಯ ಹಂತದಲ್ಲಿದೆ. ಪಶ್ಚಿಮ ಬಂಗಾಳದ ಒಂಬತ್ತು ಕ್ಷೇತ್ರಗಳು ಸೇರಿ 59 ಕ್ಷೇತ್ರಗಳಲ್ಲಿ ಇದೇ ಭಾನುವಾರ ಮತದಾನ ನಡೆಯಲಿದೆ. ಆದರೆ, ಮತದಾನಕ್ಕೆ ಕೆಲವೇ ದಿನಗಳಿರುವಾಗ ಆಯೋಗವು ಕೈಗೊಂಡ ನಿರ್ಧಾರವು ಮತ್ತೆ ವಿವಾದಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಹಿರಂಗ ಪ್ರಚಾರವನ್ನು ಶುಕ್ರವಾರ ಸಂಜೆಯ ಬದಲಿಗೆ, ಗುರುವಾರ ರಾತ್ರಿ 10 ಗಂಟೆಗೇ ಕೊನೆಗೊಳಿಸಬೇಕು ಎಂದು ಆಯೋಗ ಆದೇಶಿಸಿದೆ.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಕೋಲ್ಕತ್ತದಲ್ಲಿ ಮಂಗಳವಾರ ನಡೆಸಿದ ರೋಡ್ ಷೋ ಸಂದರ್ಭದಲ್ಲಿ ನಡೆದ ಗಲಭೆ ಇದಕ್ಕೆ ಕಾರಣ. ‘ಚುನಾವಣಾ ಪ್ರಚಾರ ಸಂದರ್ಭದಲ್ಲಿನ ಹಿಂಸಾಚಾರದಿಂದ ಜನರ ಮನದಲ್ಲಿ ಭೀತಿ ಮನೆ ಮಾಡಿದೆ. ಮತದಾನಕ್ಕೆ ಮೊದಲು ಎಲ್ಲವೂ ಶಾಂತವಾಗಲಿ ಎಂಬ ಕಾರಣಕ್ಕೆ ಬಹಿರಂಗ ಪ್ರಚಾರದ ಅವಧಿಯನ್ನು ಕಡಿತ ಮಾಡಲಾಗಿದೆ’ ಎಂದು ಆಯೋಗವು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ‘ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಸುವುದಕ್ಕೆ ಜಿಲ್ಲಾಡಳಿತಗಳಿಂದ ಸಹಕಾರ ದೊರೆಯುತ್ತಿಲ್ಲ, ಬದಲಿಗೆ ಪ್ರತಿರೋಧವೇ ಕಂಡು ಬರುತ್ತಿದೆ’ ಎಂದೂ ಚುನಾವಣಾ ಆಯೋಗದ ಉಪಆಯುಕ್ತರು ವರದಿ ಕೊಟ್ಟಿದ್ದಾರೆ. 

ಪಶ್ಚಿಮ ಬಂಗಾಳದ ವಿದ್ಯಮಾನಕ್ಕೆ ಸಂಬಂಧಿಸಿ ಎರಡು ಅಂಶಗಳನ್ನು ಗಮನಿಸಬೇಕು. 42 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಈ ರಾಜ್ಯದಲ್ಲಿ ಮತದಾನಕ್ಕೆ ಬಾಕಿ ಇರುವುದು ಒಂಬತ್ತು ಕ್ಷೇತ್ರಗಳು ಮಾತ್ರ. ಈ ಎಲ್ಲವೂ ಅಲ್ಲಿನ ಆಡಳಿತಾರೂಢ ಟಿಎಂಸಿ ಸಂಸದರು ಇರುವ ಕ್ಷೇತ್ರಗಳು. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಇಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಹುರುಪಿನಲ್ಲಿದೆ. ಅಲ್ಲಿನ ಇನ್ನೊಂದು ಪ್ರಮುಖ ಪಕ್ಷ ಸಿಪಿಎಂ. ಈ ಮೂರೂ ಪಕ್ಷಗಳು ಬದ್ಧ ಕಾರ್ಯಕರ್ತರ ಪಡೆಯನ್ನು ಹೊಂದಿವೆ. ದೊಡ್ಡದೊಂದು ಜ್ವಾಲೆ ಸೃಷ್ಟಿಸಲು ಸಣ್ಣದೊಂದು ಕಿಡಿಗಾಗಿ ಈ ಪಡೆಗಳು ಕಾಯುತ್ತಿರುವಂತೆ ವರ್ತಿಸುತ್ತಿವೆ. ಈ ರಾಜ್ಯದಲ್ಲಿ ಕಳೆದ ಆರು ಹಂತಗಳ ಮತದಾನದಲ್ಲಿಯೂ ಹಿಂಸಾಚಾರ ಮಾಮೂಲು ಎಂಬಂತೆ ಘಟಿಸಿದೆ. ಇದೇ ರೀತಿಯ ಪರಿಸ್ಥಿತಿ, ಚುನಾವಣೆಗೂ ತುಸು ಮೊದಲು ಕೇರಳದಲ್ಲಿಯೂ ಉಂಟಾಗಿತ್ತು. ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕೊಡಬೇಕು ಎಂಬ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ವ್ಯತಿರಿಕ್ತವಾದ ನಿಲುವನ್ನು ಬಿಜೆಪಿ ತಳೆದಿತ್ತು. ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕು ಎಂಬ ಉತ್ಸಾಹದಲ್ಲಿ ಬಿಜೆಪಿಯ ಕಾರ್ಯಕರ್ತರು ಕೇರಳದಲ್ಲಿ ಬೀದಿಗಿಳಿದಿದ್ದರು. ಕೇರಳದ ಆಡಳಿತಾರೂಢ ಸಿಪಿಎಂಗೂ ಬದ್ಧ ಕಾರ್ಯಕರ್ತರ ಪಡೆ ಇದೆ. ನ್ಯಾಯಾಲಯದ ತೀರ್ಪು ಜಾರಿ ಮಾಡುವುದಕ್ಕಾಗಿ ಬಿಜೆಪಿಯ ಪಡೆಯ ವಿರುದ್ಧ ಸಿಪಿಎಂ ಪಡೆ ಬೀದಿಗಿಳಿದಿತ್ತು. ಸಹಜವಾಗಿಯೇ, ಎರಡೂ ಪಡೆಗಳು ಸೇರಿ ಕಿಡಿಯನ್ನು ಜ್ವಾಲೆಯಾಗಿಸಿದ್ದವು.

ರಾಜಕೀಯ ಪಕ್ಷಗಳ ಹಿಂಸಾಪ್ರವೃತ್ತಿ ನೋಡಿದರೆ ಅವುಗಳಿಗೆ ನೈಜ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಕುಸಿದಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಇನ್ನೊಂದು ಅಂಶ, ಆಯೋಗದ ವಿಶ್ವಾಸಾರ್ಹತೆಯ ಪ್ರಶ್ನೆ. ನಿಯಮಗಳ ಅನ್ವಯದಲ್ಲಿ ಆಯೋಗಕ್ಕೆ ಆಯ್ಕೆ ಇಲ್ಲ. ಆದರೆ, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಆಯೋಗವು ನಿಭಾಯಿಸಿದ ರೀತಿ ಇದನ್ನು ಧ್ವನಿಸಲಿಲ್ಲ. ಮೋದಿಯವರ ವಿರುದ್ಧ ಹತ್ತಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದವು. ಅವುಗಳ ವಿಚಾರಣೆಯಲ್ಲಿ ವಿಳಂಬವಾಗಿತ್ತು; ಯಾವುದೇ ಪ್ರಕರಣದಲ್ಲಿಯೂ ಅವರು ನೀತಿ ಸಂಹಿತೆ ಉಲ್ಲಂಘಿಸಿಲ್ಲ ಎಂಬ  ತೀರ್ಪನ್ನು ಆಯೋಗ ನೀಡಿದೆ. ಪ್ರಚಾರದ ಅವಧಿ ಕಡಿತದ ವಿಚಾರದಲ್ಲಿಯೂ ಪಕ್ಷಪಾತಿ ಧೋರಣೆಯ ಆರೋಪ ಇದೆ. ಮೋದಿಯವರ ಎರಡು ರ‍್ಯಾಲಿಗಳು ಪಶ್ಚಿಮ ಬಂಗಾಳದಲ್ಲಿ ಗುರುವಾರಕ್ಕೆ ನಿಗದಿಯಾದ್ದವು. ಹಾಗಾಗಿಯೇ ಅವಧಿ ಕಡಿತವನ್ನು ಗುರುವಾರಕ್ಕೆ ಮುಂದೂಡಲಾಯಿತು ಎಂಬ ವಾದವೂ ಇದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು ಆಯೋಗದ ಹೊಣೆ. ಅದಷ್ಟೇ ಅಲ್ಲ, ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಯುತ್ತಿದೆ ಎಂಬ ಭಾವನೆ ರಾಜಕೀಯ ಪಕ್ಷಗಳಲ್ಲಿ ಮತ್ತು ಜನರಲ್ಲಿ ಮೂಡುವಂತೆಯೂ ನೋಡಿಕೊಳ್ಳಬೇಕು.

ಈ ವಿಚಾರದಲ್ಲಿ ಆಯೋಗವು ವಿಫಲವಾದಂತೆ ಭಾಸವಾಗುತ್ತಿದೆ. ಆಯೋಗವೇ ಹೇಳಿದಂತೆ ಪಶ್ಚಿಮ ಬಂಗಾಳದ ಅಧಿಕಾರಿಗಳಿಂದ ಪ್ರತಿರೋಧ ಎದುರಾಗಿದೆ. ಆಯೋಗದ ಹಲವು ನಿರ್ಧಾರಗಳನ್ನು ಎನ್‌ಡಿಎಯಿಂದ ಹೊರಗೆ ಇರುವ ಬಹುತೇಕ ಪಕ್ಷಗಳು ಟೀಕಿಸಿವೆ. ಎಲ್ಲರಿಗೂ ಸಂತೃಪ್ತಿಯಾಗುವಂತೆ ಕಾರ್ಯನಿರ್ವಹಿಸುವುದು ಕಷ್ಟಸಾಧ್ಯ. ಆದರೆ, ಒಂದು ರಾಜಕೀಯ ಗುಂಪಿಗೆ ಬೇಕಾದಂತೆ ಕೆಲಸ ಮಾಡುತ್ತಿದೆ ಎಂಬ ಅನುಮಾನ ಬಂದಾಗ ಪ್ರತಿರೋಧ ಬರುವುದು ಸಹಜ. ಹಾಗಾಗಿ, ಈ ಬಾರಿಯ ಚುನಾವಣೆಯಿಂದ ಆಯೋಗ ಕಲಿಯುವ ಪಾಠ ಬಹಳಷ್ಟಿದೆ. 

ಬರಹ ಇಷ್ಟವಾಯಿತೆ?

 • 33

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !