ತಲೆಕೆಟ್ಟವರ್‍ಯಾರು?

ಸೋಮವಾರ, ಮೇ 20, 2019
30 °C

ತಲೆಕೆಟ್ಟವರ್‍ಯಾರು?

Published:
Updated:
Prajavani

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಪರಿಚಯದವರೊಬ್ಬರನ್ನು ನೋಡಲು ತೆಪರೇಸಿ ಆಸ್ಪತ್ರೆಗೆ ಹೋದಾಗ, ಅಲ್ಲಿ ಒಳಗೆ ಆಟವಾಡುತ್ತಿದ್ದ ಅಸ್ವಸ್ಥರ ಗುಂಪೊಂದು ‘ಬರಬೇಕು ಬರಬೇಕು, ಚಮಚಾ ಸಾಹೇಬರು’ ಎಂದು ಸ್ವಾಗತಿಸಿ ನಕ್ಕಿತು.

ತೆಪರೇಸಿಗೆ ಗಾಬರಿಯಾಯಿತು. ತಕ್ಷಣ ಅಲ್ಲಿನ ಸಿಬ್ಬಂದಿಯೊಬ್ಬರು ‘ಏನೂ ಮಾತಾಡಬೇಡಿ, ಸುಮ್ಮನೆ ನಿಮ್ಮ ಪಾಡಿಗೆ ನೀವು ಹೋಗಿ’ ಎಂದು ಕಿವಿಯಲ್ಲಿ ಹೇಳಿ ಎಚ್ಚರಿಸಿದರು.

ತೆಪರೇಸಿ ತುಟಿಪಿಟಕ್ಕೆನ್ನದೆ ಸುಮ್ಮನೆ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತ ಮುನ್ನಡೆದ.

ಒಬ್ಬ: ‘ಲೇ... ನೀನು ಅಯೋಗ್ಯ, ಸರ್ವಾಧಿಕಾರಿ, ವಿಶ್ವಾಸಘಾತುಕ, ಸ್ವಾರ್ಥಿ...’

ಇನ್ನೊಬ್ಬ: ‘ಲೇ... ನಾನು ಆನೆ, ನೀನು ನಾಯಿ... ನಾಮರ್ದ, ತಲೆತಿರುಕ...’ ಮತ್ತೊಬ್ಬ: ‘ನೀವಿಬ್ರೂ ಒಂದೇ ಬಿಡ್ರಲೇ, ಕಿಡಿಗೇಡಿಗಳು, ಚಮಚಾಗಿರಿ ಮಾಡೋರು... ನಿಮ್ಮಿಬ್ರನ್ನೂ ಹುಚ್ಚಾಸ್ಪತ್ರೆಗೆ ಸೇರಿಸಬೇಕು...’

ಅವರ ಮಾತು, ಪರಸ್ಪರ ಬೈಗುಳ ಕೇಳಿಸಿಕೊಳ್ಳುತ್ತ ಮುನ್ನಡೆದ ತೆಪರೇಸಿಗೆ ಮೂಲೆಯಲ್ಲೊಬ್ಬ ‘ನೂರಾ ನಾಕು, ನೂರಾ ಆರು, ನೂರಾ ಒಂಬತ್ತು, ಮೇ ಇಪ್ಪತ್ಮೂರು...’ ಎಂದು ಸಂಖ್ಯೆಗಳನ್ನು ಎಡೆಬಿಡದೆ ಪದೇ ಪದೇ ಎಣಿಸುತ್ತಿದ್ದುದು ಕಂಡಿತು. ಇನ್ನೊಂದು ಕಡೆ, ಒಬ್ಬ ಒಂದೇ ಸಮನೆ ಅಳುತ್ತಿದ್ದರೆ ಮತ್ತೊಬ್ಬ ಗಹಗಹಿಸಿ ನಗುತ್ತಿದ್ದ... ಇನ್ನೊಬ್ಬ ‘ಎಲ್ಲಿದ್ದೀಯಪ್ಪಾ?’ ಎಂದು ಕೂಗಿ ಅಣಕಿಸುತ್ತಿದ್ದ.

‘ಒಳ್ಳೆ ತಲೆಕೆಟ್ಟವರ ಕೈಗೆ ಸಿಕ್ಕಾಕೊಂಡೆನಲ್ಲ’ ಎಂದು ಆತಂಕಗೊಂಡ ತೆಪರೇಸಿ, ಬೇಗ ಬೇಗ ಹೆಜ್ಜೆ ಹಾಕಿ ತನ್ನ ಪರಿಚಯದವರ ವಾರ್ಡ್‌ಗೆ ಬಂದು ನಿಟ್ಟುಸಿರುಬಿಟ್ಟ. ಅಲ್ಲಿ ವೈದ್ಯರು ಸಿಕ್ಕರು. ‘ಏನ್ಸಾರ್ ಇದೂ... ಸಂತೆ. ಬಾಯಿಗೆ ಬಂದಂಗೆ ಮಾತಾಡ್ತಾರೆ? ಅವರ ಕೈಗೆ ಸಿಕ್ರೆ ಮುಗೀತು’ ಎಂದು ಬೆವರೊರೆಸಿಕೊಂಡ.

ತೆಪರೇಸಿ ಮಾತು ಕೇಳಿ ವೈದ್ಯರು ನಕ್ಕರು. ‘ನೋಡಿ ಇವರೆ, ಟಿ.ವಿ ನೋಡಿ ನೋಡಿ ಇವರು ಆ ಮಾತುಗಳನ್ನೆಲ್ಲ ಕಲ್ತಿದಾರೆ. ಟಿ.ವಿ ಹಾಕದಿದ್ರೆ ಗಲಾಟೆ ಮಾಡ್ತಾರೆ. ಇವರು ಮಾನಸಿಕ ಅಸ್ವಸ್ಥರಿರಬಹುದು. ಆದ್ರೆ ನಿಜವಾದ ಹುಚ್ಚರು ಹೊರಗಿದಾರೆ. ಇವರ ಅಸ್ವಸ್ಥತೆ ಇವತ್ತಿಲ್ಲ ನಾಳೆ ವಾಸಿಯಾಗಬಹುದು, ಆದ್ರೆ ಹೊರಗಿರೋರ ಹುಚ್ಚು ವಾಸಿಯಾಗೋದು ಕಷ್ಟ...!’

ತೆಪರೇಸಿಗೆ ‘ಅರೆ ಹೌದಲ್ಲ...’ ಎನ್ನಿಸಿತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !