ಡ್ರಮ್‌ ನೀರಿಗೆ ₹50: ಖಾಸಗಿಯವರಿಂದ ಖರೀದಿ

ಸೋಮವಾರ, ಮೇ 20, 2019
32 °C
ಹಿರೇಗೌಜ ಗ್ರಾಮದಲ್ಲಿ ನೀರಿಗೆ ಪರದಾಟ: ನಾಲ್ಕೈದು ದಿನಕ್ಕೊಮ್ಮೆ ಸ್ನಾನ, ಬಹಿರ್ದೆಸೆಗೆ ಬಯಲೇ ಗತಿ

ಡ್ರಮ್‌ ನೀರಿಗೆ ₹50: ಖಾಸಗಿಯವರಿಂದ ಖರೀದಿ

Published:
Updated:
Prajavani

ಚಿಕ್ಕಮಗಳೂರು: ತಾಲ್ಲೂಕಿನ ಹಿರೇಗೌಜದಲ್ಲಿ ಡ್ರಮ್‌ ನೀರಿಗೆ (16 ಬಿಂದಿಗೆ ಸಾಮರ್ಥ್ಯ) ₹50 ಪಾವತಿಸಿ ಖಾಸಗಿಯವರಿಂದ ಖರೀದಿಸಬೇಕಾದ ಸ್ಥಿತಿ ಇದೆ. ಪಂಚಾಯಿತಿಯಿಂದ ಟ್ಯಾಂಕರ್‌ನಲ್ಲಿ 8ರಿಂದ 10 ದಿನಗಳಿಗೊಮ್ಮೆ ಪ್ರತಿ ಮನೆಗೆ ಎರಡು ಡ್ರಮ್‌ ನೀರು ಪೂರೈಸುತ್ತಿದ್ದು, ಇದು ಎರಡು ದಿನಕ್ಕೂ ಸಾಕಾಗುತ್ತಿಲ್ಲ.

ಮನೆಗಳಲ್ಲಿ ಶೌಚಾಲಯ ಇದ್ದರೂ ನೀರಿನ ಅಭಾವದಿಂದಾಗಿ ಬಹಿರ್ದೆಸೆಗೆ ಬಯಲನ್ನು ಆಶ್ರಯಿಸುವಂತಾಗಿದೆ. ನಾಲ್ಕೈದು ದಿನಕ್ಕೊಮ್ಮೆ ಸ್ನಾನ ಮಾಡಬೇಕಾದ ಸ್ಥಿತಿ ಇದೆ. ಪ್ರತಿ ಮನೆ ಮುಂದೆ ಡ್ರಮ್‌ಗಳ ಸಾಲು. ಕೆರೆಕಟ್ಟೆಗಳು ಬರಿದಾಗಿದ್ದು, ಜಾನುವಾರುಗಳನ್ನು ಸಂಭಾಳಿಸುವುದು ಕಷ್ಟವಾಗಿದೆ.

‘ನೀರಿನ ಸಮಸ್ಯೆ ಶುರುವಾಗಿ ಆರು ತಿಂಗಳಾಯಿತು. ಏಳೆಂಟು ಮಂದಿ ಇರುವ ಕುಟುಂಬಕ್ಕೆ ಎರಡು ಡ್ರಮ್‌ ನೀರು 10 ದಿನಕ್ಕೆ ಸಾಕಾಗಾತ್ತಾ... ಮನೆಯಲ್ಲಿ ಬಾಣಂತಿ, ಮಕ್ಕಳು ಇದ್ದಾರೆ. ಒಂದು ಡ್ರಮ್‌ ನೀರಿಗೆ ₹ 50 ಕೊಟ್ಟು ಖರೀದಿಸುತ್ತೇವೆ. ಕೂಲಿ ಮಾಡಿ ಜೀವನ ಸವೆಸುವವರು ನಾವು. ದುಡಿದದ್ದನ್ನು ನೀರಿಗಾಗಿ ಖರ್ಚು ಮಾಡುವಂತಾಗಿದೆ’ ಎಂದು ಗ್ರಾಮದ ದಲಿತ ಕಾಲೊನಿಯ ಸುಜಾತಾ ಗೋಳು ತೋಡಿಕೊಂಡರು.

‘ಮನೆಗಳಲ್ಲಿ ಶೌಚಾಲಯ ಬಳಸು ತ್ತಿಲ್ಲ. ಶೌಚಾಲಯ ಬಳಕೆ ಸಮೀಕ್ಷೆಗೆಂದು ಈಚೆಗೆ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಬಂದಿದ್ದರು. ಶೌಚಾಲಯ ಬಳಕೆಗೆ ನೀರು ಕೊಡಿ ಎಂದು ಕೇಳಿದ್ದಕ್ಕೆ ಅವರು ವಾಪಸಾದರು. ಕೈಪಂಪಿನಲ್ಲಿ ದಾರದಂತೆ ನೀರು ಬರುತ್ತದೆ. ಒಂದು ಬಿಂದಿ ನೀರು ಜಗ್ಗಿದರೆ ಎದೆನೋವಿನಿಂದ ಸುಸ್ತಾಗಿ ಬಿಡುತ್ತೇವೆ. ಪಾತ್ರೆ, ಬಟ್ಟೆ, ಸ್ನಾನ, ಬಳಕೆಗೆ ನೀರು ಹೊಂದಿಸಲು ಹರಸಾಹಪಡಬೇಕಾಗಿದೆ’ ಎಂದು ಗ್ರಾಮದ ಶಿವಮ್ಮ ಅಲವತ್ತುಕೊಂಡರು.

ನೀರಿನ ಸಮಸ್ಯೆ ದಿನೇದಿನೇ ಬಿಗಡಾಯಿಸುತ್ತಿದೆ. ಗ್ರಾಮದ ಕೊಳವೆಬಾವಿಗಳು ಬರಿದಾಗಿವೆ. ಹೊಸದಾಗಿ ಕೊರೆಸಿದವುಗಳಲ್ಲಿ ನೀರು ಬಂದಿಲ್ಲ. ಸಖರಾಯಪಟ್ಟಣ, ಸುತ್ತಲಿನ ಪ್ರದೇಶಗಳಲ್ಲಿನ ಕೊಳವೆ ಬಾವಿಗಳಿಂದ ಟ್ಯಾಂಕರ್‌ನಲ್ಲಿ ಗ್ರಾಮಕ್ಕೆ ನೀರು ತರಲಾಗುತ್ತಿದೆ.

ತೋಟಗಳಲ್ಲಿ ಅಡಿಕೆ, ತೆಂಗಿನ ಮರಳು ಸುಳಿ ಒಣಗಿವೆ. ರೈತರು ನೀರು ಖರೀದಿಸಿ ಟ್ಯಾಂಕರುಗಳಲ್ಲಿ ತಂದು ಜಮೀನುಗಳಲ್ಲಿ ಟೊಮೆಟೊ, ಮೆಣಸಿನ ಸಸಿ ಸಾಲುಗಳಿಗೆ ಹಾಯಿಸಿ ಕಾಪಾಡಿಕೊಳ್ಳಬೇಕಾಗಿದೆ. ಗ್ರಾಮದಲ್ಲಿ ಗೋಕಟ್ಟೆಗಳಿಗೆ ಆಗೊಮ್ಮೆ, ಈಗೊಮ್ಮೆ ತುಂಬಿಸುವ ನೀರು ಜಾನುವಾರುಗೆ ಸಾಲುತ್ತಿಲ್ಲ. ಬಾಯಾರಿ ಬಂದ ಜಾನುವಾರು ಗೋಕಟ್ಟೆಯ ತಳವನ್ನೇ ನೆಕ್ಕುತ್ತವೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !