ಬುಧವಾರ, ಡಿಸೆಂಬರ್ 2, 2020
25 °C
ನಿಯಮ ಉಲ್ಲಂಘಿಸಿದರೆ ಮಾನ್ಯತೆ ರದ್ದು

ಪಿಯು ಜತೆ ಜೆಇಇ, ನೀಟ್‌, ಸಿಇಟಿ ಕೋಚಿಂಗ್‌ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ಪಿಯು ಕೋರ್ಸ್‌ಗಳ ಜತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ಸಂಯೋಜಿತ (ಇಂಟಿಗ್ರೇಟೆಡ್‌) ಕೋಚಿಂಗ್‌ ನಡೆಸುವುದನ್ನು ನಿಷೇಧಿಸಲಾಗಿದೆ.

ಪದವಿಪೂರ್ವ ಶಿಕ್ಷಣ ಇಲಾಖೆ ಗುರುವಾರ ಕಾಲೇಜುಗಳಿಗೆ ಪ್ರವೇಶದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಅಂಶವನ್ನು ಸ್ಪಷ್ಟವಾಗಿ ನಮೂದಿಸಿದೆ.

ಯಾವುದೇ ಪದವಿ ಪೂರ್ವ ಕಾಲೇಜುಗಳು ಜೆಇಇ/ನೀಟ್‌/ಸಿಇಟಿ ಅಥವಾ ಇನ್ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್‌ ತರಗತಿಗಳನ್ನು ನಡೆಸುವುದು ಕಂಡು ಬಂದರೆ ಅಂತಹ ಕಾಲೇಜುಗಳ ಮಾನ್ಯತೆ ರದ್ದುಪಡಿಸಲಾಗುತ್ತದೆ. ಸರ್ಕಾರ ನಿಗದಿ ಮಾಡದ ಪಠ್ಯವನ್ನು ಬಳಸಿ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವಂತಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ ಬಹುತೇಕ ಪಿಯು ಕಾಲೇಜುಗಳು ಪಿಯು ತರಗತಿಗಳ ಜತೆಗೆ ಸಂಯೋಜಿತ ಕೋಚಿಂಗ್‌ ತರಗತಿಗಳನ್ನು ನಡೆಸುತ್ತಿವೆ. ಇದಕ್ಕಾಗಿ ಕಾಲೇಜುಗಳು ಹೆಚ್ಚುವರಿ ಶುಲ್ಕವನ್ನು ನಿಗದಿ ಮಾಡುತ್ತಿವೆ. ‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೊರಗಿನಿಂದ ಹಣ ಪಡೆದು ಸಂಯೋಜಿತ ತರಗತಿಗಳನ್ನು ನಡೆಸುವುದು, ಎಲೆಕ್ಟ್ರಾನಿಕ್‌ ಮಾಧ್ಯಮ ಬಳಸಿ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವುದು ಅಕ್ರಮ. ಇಂತಹ ಚಟುವಟಿಕೆಗಳನ್ನು ನಡೆಸುವ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಮಾರ್ಗಸೂಚಿ ತಿಳಿಸಿದೆ.

‘ಈ ಸಂಬಂಧ ಸಾಕಷ್ಟು ದೂರುಗಳು ಇಲಾಖೆಗೆ ಬಂದಿವೆ. ಬಹಳಷ್ಟು ಕಾಲೇಜುಗಳು ಸಂಯೋಜಿತ ಕೋರ್ಸ್‌, ಬ್ರಿಡ್ಜ್‌ ಕೋರ್ಸ್‌ಗಳನ್ನು ಕಾಲೇಜುಗಳ ಆವರಣದಲ್ಲೇ ನಡೆಸುತ್ತವೆ. ಈ ವರ್ಷವೂ ಮುಂದುವರಿಸಿದರೆ, ಕಾಲೇಜುಗಳ ಮಾನ್ಯತೆ ಅಪಾಯಕ್ಕೆ ಸಿಲುಕುತ್ತದೆ’ ಎಂದು ಅಧಿಕಾರಿ ತಿಳಿಸಿದರು.

ಕಳೆದ ಮೂರು ವರ್ಷಗಳಿಂದ ಪ.ಪೂ. ಶಿಕ್ಷಣ ಇಲಾಖೆ ಎಚ್ಚರಿಕೆ ನೀಡುತ್ತಲೇ ಬಂದಿದ್ದರೂ, ಖಾಸಗಿ ಕಾಲೇಜುಗಳು ತಲೆ ಕೆಡಿಸಿಕೊಳ್ಳದೇ ತಮ್ಮ ಕಾರ್ಯವನ್ನು ಮುಂದುವರಿಸಿವೆ. ಆದರೆ, ಈ ಬಾರಿ ಸುಮ್ಮನಿರುವುದಿಲ್ಲ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು