ಗುರುವಾರ , ಸೆಪ್ಟೆಂಬರ್ 19, 2019
26 °C
ಮಹಾರಾಷ್ಟ್ರದ ಕಂಜರಭಾಟ್ ಸಮುದಾಯದಲ್ಲಿ ಕೀಳು ಪದ್ಧತಿ

ಕನ್ಯತ್ವ ಪರೀಕ್ಷೆ ವಿರೋಧಿಸಿದ್ದಕ್ಕೆ ಬಹಿಷ್ಕಾರ

Published:
Updated:

ಠಾಣೆ: ಮಹಿಳೆಯರ ಕನ್ಯತ್ವ ಪರೀಕ್ಷೆ ಪದ್ಧತಿ ವಿರೋಧಿಸಿದ್ದಕ್ಕಾಗಿ ಮಹಾರಾಷ್ಟ್ರದ ಠಾಣೆಯ ಕಂಜರಭಾಟ್ ಸಮುದಾಯದ ಕುಟುಂಬವೊಂದು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದೆ. 

ಈ ಸಂಬಂಧ ಕುಟುಂಬ ದೂರು ಸಲ್ಲಿಸಿದ್ದು, ಮಹಾರಾಷ್ಟ್ರ ಸಾಮಾಜಿಕ ಬಹಿಷ್ಕಾರ ನಿರ್ಬಂಧ (ತಡೆ, ನಿರ್ಬಂಧ ಮತ್ತು ಪರಿಹಾರ) ಕಾಯ್ದೆ ಅಡಿ ಅಂಬರ್‌ನಾಥ್ ಪಟ್ಟಣದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

‘ವಿವಾಹಕ್ಕೂ ಮೊದಲು ಕನ್ಯೆಯಾಗಿದ್ದೆ ಎಂದು ಹೊಸದಾಗಿ ವಿವಾಹವಾದ ಮಹಿಳೆ ಸಾಬೀತುಪಡಿಸಬೇಕಾದ ಪದ್ಧತಿ ಇದೆ. ಇದನ್ನು ವಿರೋಧಿಸಿದೆವು. ಆದ್ದರಿಂದ ಕಳೆದ ಒಂದು ವರ್ಷದಿಂದ ನಮ್ಮ ಜಾತಿಯ ಪಂಚಾಯ್ತಿ, ಕುಟುಂಬಕ್ಕೆ ಬಹಿಷ್ಕಾರ ಹೇರಿದೆ’ ಎಂದು ವಿವೇಕ್ ತಮೈಚಿಕರ್ ಎನ್ನುವವರು ದೂರು ನೀಡಿದ್ದಾರೆ. 

‘ಸಮುದಾಯದ ಜನರು ನಮ್ಮ ಕುಟುಂಬದ ಜತೆ ಯಾವುದೇ ಸಂಪರ್ಕ ಹೊಂದಬಾರದು ಎಂದು ಪಂಚಾಯ್ತಿ ಸೂಚನೆ ನೀಡಿತು. ಸೋಮವಾರ ನನ್ನ ಅಜ್ಜಿ ಮೃತಪಟ್ಟಾಗಲೂ ಸಮುದಾಯದ ಜನರು ಅಂತ್ಯಸಂಸ್ಕಾರಕ್ಕೆ ಬರಲಿಲ್ಲ. ಬದಲಿಗೆ ಅದೇ ವೇಳೆ, ನಮ್ಮ ಮನೆಯ ಸಮೀಪದಲ್ಲಿಯೇ ನಡೆಯುತ್ತಿದ್ದ ವಿವಾಹಪೂರ್ವ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು’ ಎಂದು ವಿವೇಕ್ ತಿಳಿಸಿದ್ದಾರೆ. 

‘ಮಹಿಳೆಯನ್ನು ಕನ್ಯತ್ವ ಪರೀಕ್ಷೆಗೆ ಒಳಪಡಿಸುವುದುನ್ನು ಲೈಂಗಿಕ ಶೋಷಣೆ ಎಂದು ಪರಿಗಣಿಸಲಾಗುವುದು. ಕಾನೂನು ಮತ್ತು ನ್ಯಾಯಾಂಗಇಲಾಖೆ ಜತೆ ಚರ್ಚಿಸಿದ ಬಳಿಕ, ಈ ಪರೀಕ್ಷೆಗೆ ಒತ್ತಾಯಿಸುವುದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿ ಆದೇಶ ಹೊರಡಿಸಲಾಗುತ್ತದೆ’ ಎಂದು ಮಹಾರಾಷ್ಟ್ರದ ಗೃಹ ಸಚಿವ ರಂಜೀತ್ ಪಾಟೀಲ್ ಫೆಬ್ರುವರಿಯಲ್ಲಿ ಹೇಳಿದ್ದರು. 

 

Post Comments (+)