ಸೋಮವಾರ, ನವೆಂಬರ್ 30, 2020
23 °C
ನಾಳೆಯಿಂದ ಬೇಸಿಗೆ ರೇಸ್ ಆರಂಭ

ಕುದುರೆ ರೇಸ್‌ ಚಟುವಟಿಕೆಗೆ ಜಿಎಸ್‌ಟಿ ಆತಂಕ: ಬಿಟಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೇ ಶನಿವಾರದಿಂದ ಬೆಂಗಳೂರು ಟರ್ಫ್‌ ಕ್ಲಬ್ ಆಶ್ರಯದಲ್ಲಿ ಬೇಸಿಗೆ ರೇಸ್‌ಗಳು ಆರಂಭವಾಗಲಿವೆ. ಆದರೆ ಈ ಬಾರಿಯೂ ಸರಕು ಮತ್ತು ಸೇವಾ ತೆರಿಗೆಯ ಹೊರೆಯ ಭೀತಿ ಕ್ಲಬ್‌ ಅನ್ನು ಕಾಡುತ್ತಿದೆ.

‘ಜಿಎಸ್‌ಟಿಯಿಂದಾಗಿ ರೇಸ್‌ ಚಟುವಟಿಕೆಗಳು ನಷ್ಟ ಅನುಭವಿಸುತ್ತಿವೆ. 2017–18ನೇ ಸಾಲಿನಲ್ಲಿ ಅಪಾರ ನಷ್ಟವಾಗಿದೆ. ಆದಾಯವು ₹ 2219 ಕೋಟಿಯಿಂದ ₹ 1917ಕೋಟಿಗೆ ಇಳಿದಿದೆ. ಕೇಂದ್ರದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಣಕಾಸು ಸಚಿವರನ್ನು ಭೇಟಿಯಾಗಲು ಸಿದ್ಧತೆ ಮಾಡಿಕೊಂಡಿದ್ದೇವೆ.ಸರ್ಕಾರವು ನಮ್ಮ ಬೇಡಿಕೆಯನ್ನು ಈಡೇರಿಸುವ ಭರವಸೆ ಇದೆ’ ಎಂದು ಬಿಟಿಸಿ ಮುಖ್ಯಸ್ಥ ಹರಿಮೋಹನ್ ನಾಯ್ಡು ಹೇಳಿದರು.

‘ಈಗಿನ ಸರ್ಕಾರದಲ್ಲಿ ಇದ್ದ ಸಚಿವರಿಗೂ ಮನವಿ ಸಲ್ಲಿಸಿದ್ದೆವು.  ಶೇ 28ರಷ್ಟು ತೆರಿಗೆಯು ಹೊರೆಯಾಗುತ್ತಿದೆ. ತೆರಿಗೆಯನ್ನು ಬೆಟ್ಟಿಂಗ್ ಸೇವೆಯ ಮತ್ತು ಕಮಿಷನ್ ಮೇಲೆ ವಿಧಿಸಬೇಕು. ಒಟ್ಟು ವಹಿವಾಟಿನ ಮೇಲೆ ವಿಧಿಸುವುದು ಸರಿಯಲ್ಲ. ಹಾಂಕಾಂಗ್, ಸಿಂಗಪುರ ಮತ್ತು ಆಸ್ಟ್ರೇಲಿಯಾ ಮಾದರಿ ಸೂಕ್ತವಾಗಿದೆ. ಭಾರತದಲ್ಲಿಯೂ ಜಿಎಸ್‌ಟಿಯನ್ನು ಅಂತರರಾಷ್ಟ್ರೀಯ ಮಾದರಿಯಲ್ಲಿಯೇ ಜಾರಿಗೊಳಿಸಬೇಕು’ ಎಂದರು.

‘ಈ ಸಮಸ್ಯೆಯ ಕುರಿತು ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆಯುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇವೆ. ಬೇರೆ ಬೇರೆ ರೇಸ್‌ ಕ್ಲಬ್‌ಗಳ ಬೆಂಬಲವನ್ನೂ ಪಡೆಯುತ್ತೇವೆ’ ಎಂದು ಹೇಳಿದರು.

ಜುಲೈ 21ರಂದು ಡರ್ಬಿ ರೇಸ್: ಮೇ 18ರಿಂದ ಬೇಸಿಗೆಯ ರೇಸ್‌ಗಳು ಆರಂಭವಾಗಲಿವೆ. ಆಗಸ್ಸ್‌ 9ರವರೆಗೂ ನಡೆಯಲಿದೆ. 26 ದಿನಗಳ ರೇಸ್‌ ಚಟುವಟಿಕೆಗಳು ನಡೆಯಲಿವೆ.

‘ಈ  ಋತುವಿನಲ್ಲಿ ಸುಮಾರು  208 ರೇಸ್‌ಗಳು ನಡೆಯುವ ನಿರೀಕ್ಷೆ ಇದೆ. ₹ 19.5 ಕೋಟಿಗಳ ನಗದು ಬಹುಮಾನ ಇರಲಿದೆ. ಹೊರಗಡೆಯ ಕ್ಲಬ್‌ಗಳ 98 ಕುದುರೆಗಳು ಸೇರಿದಂತೆ ಸುಮಾರು 800 ಕುದುರೆಗಳು ಸ್ಪರ್ಧಿಸುವ ನಿರೀಕ್ಷೆ ಇದೆ’ ಹರಿಮೋಹನ್‌ ನಾಯ್ಡು ತಿಳಿಸಿದರು.

‘ಜುಲೈ 21ರಂದು ಕಿಂಗ್‌ಫಿಷರ್‌ ಅಲ್ಟ್ರಾ ಡರ್ಬಿ ಬೆಂಗಳೂರು ರೇಸ್‌ ನಡೆಯಲಿದೆ. ಸತತವಾಗಿ 32ನೇ ಬಾರಿಗೆ ಯುನೈಟೆಡ್‌ ಬ್ರೂವರೀಸ್‌ ಸಂಸ್ಥೆಯು ಪ್ರಾಯೋಜಿಸುತ್ತಿದೆ.  ಬಿಟಿಸಿ ಕೊಡುಗೆ ₹ 75 ಲಕ್ಷ ಸೇರಿದಂತೆ ಒಟ್ಟು ಬಹುಮಾನದ ಮೊತ್ತವು ₹ 2.5 ಕೋಟಿ ಮೀರಬಹುದು’ ಎಂದರು.

ಜಾಕಿಗಳಿಗೆ ಸಾಯ್ ನೆರವು: ಇಲ್ಲಿಯ ಜಾಕಿಗಳಿಗೆ ಉತ್ತಮ ದೈಹಿಕ ಕ್ಷಮತೆ ಕಾಯ್ದುಕೊಳ್ಳಲು ಮತ್ತು ಆಹಾರ ಕ್ರಮಕ್ಕಾಗಿ ಭಾರತ ಕ್ರೀಡಾ ಪ್ರಾಧಿಕಾರದ(ಸಾಯ್) ತಜ್ಞರು ನೆರವು ನೀಡಲಿದ್ದಾರೆ .

‘ಈಚೆಗೆ ಜಾಕಿಗಳಿಗಾಗಿ ಸಾಯ್‌ ಫಿಟ್‌ನೆಸ್ ಪರೀಕ್ಷೆ ಏರ್ಪಡಿಸಿತ್ತು. ಸದ್ಯ ನೀಡಲಾಗುತ್ತಿರುವ ಆಹಾರ ಕ್ರಮವನ್ನು ಮತ್ತಷ್ಟು ಉತ್ತಮಗೊಳಿಸುವಂತೆ ಶಿಫಾರಸು ಮಾಡಿದ್ದಾರೆ’ ಎಂದು ತಿಳಿಸಿದರು.

‘ಈ ಬಾರಿ ಬೆಟ್ಟಿಂಗ್ ಟರ್ಮಿನಲ್ಸ್‌ನಲ್ಲಿ ಖರೀದಿಸಿದ ಆಧಿಕೃತ ಟಿಕೆಟ್‌ಗಳನ್ನು ಆಯಾ ರೇಸ್ ಆರಂಭಕ್ಕೂ ಮುನ್ನ ರದ್ದು ಮಾಡುವಂತಿಲ್ಲ. ಪಂಟರ್‌ಗಳಿಂದ ಬೆಟ್ಟಿಂಗ್ ವಿವರಗಳು ದೃಢಪಟ್ಟ ನಂತರವೇ ಬೆಟ್ಟಿಂಗ್ ಆಪರೇಟರ್‌ಗಳು ಟಿಕೆಟ್ ನೀಡಬೇಕಾಗುತ್ತದೆ. ಆದ್ದರಿಂದ ಅವುಗಳನ್ನು ರದ್ದುಪಡಿಸಲು ಸಾಧ್ಯವಿಲ್ಲ’ ಎಂದು ನಾಯ್ಡು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು