ಶುಕ್ರವಾರ, ಸೆಪ್ಟೆಂಬರ್ 20, 2019
27 °C
ವಿಶ್ವಕಪ್ ಹೆಜ್ಜೆ ಗುರುತು 37

ವಿಶ್ವಕಪ್ 2003: ಭಾರತಕ್ಕೆ ಕೈಕೊಟ್ಟ ಲೆಕ್ಕಾಚಾರ; ಆಸ್ಟ್ರೇಲಿಯಾ ಪಾಲಾದ ವಿಶ್ವಕಪ್‌

Published:
Updated:
Prajavani

1983ರ ವಿಶ್ವಕಪ್‌ ಟೂರ್ನಿ ಬಳಿಕ ಫೈನಲ್ ಪ್ರವೇಶಿಸಿದ್ದ ಭಾರತ ತಂಡ ಮತ್ತೊಂದು ಟ್ರೋಫಿ ಎತ್ತಿ ಹಿಡಿಯಬಹುದು ಎನ್ನುವ ನಿರೀಕ್ಷೆ 2003ರಲ್ಲಿ ಬಲವಾಗಿತ್ತು. ಇದಕ್ಕಾಗಿ ಫೈನಲ್‌ನಲ್ಲಿ ಭಾರಿ ಲೆಕ್ಕಾಚಾರದೊಂದಿಗೆ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದರ ಲಾಭ ಆಸ್ಟ್ರೇಲಿಯಾ ಪಾಲಾಯಿತು.

*  2003ರ ಮಾರ್ಚ್‌ 23ರಂದು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಫೈನಲ್‌ ಪಂದ್ಯ ನಡೆದಿತ್ತು. ಭಾರತ ತಂಡವನ್ನು ಸೌರವ್‌ ಗಂಗೂಲಿ, ಆಸ್ಟ್ರೇಲಿಯಾವನ್ನು ರಿಕಿ ಪಾಂಟಿಂಗ್‌ ಮುನ್ನಡೆಸಿದ್ದರು.

* ಪಂದ್ಯ ಆರಂಭಕ್ಕೂ ಮೊದಲು ಕೆಲ ಹೊತ್ತು ಮಳೆ ಸುರಿದ ಕಾರಣ ಒದ್ದೆಯಾದ ಅಂಗಳದ ಲಾಭ ಪಡೆಯುವ ಲೆಕ್ಕಾಚಾರದೊಂದಿಗೆ ಭಾರತ ತಂಡ ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಫೈನಲ್‌ ಪಂದ್ಯದಲ್ಲಿ ಕರ್ನಾಟಕದ ರಾಹುಲ್‌ ದ್ರಾವಿಡ್ ಮತ್ತು ಜಾವಗಲ್‌ ಶ್ರೀನಾಥ್‌ ಅಂತಿಮ ಹನ್ನೊಂದರ ತಂಡದಲ್ಲಿದ್ದರು.

* ಆಸ್ಟ್ರೇಲಿಯಾದ ಆರಂಭಿಕ ಜೋಡಿ ಆ್ಯಡಮ್‌ ಗಿಲ್‌ಕ್ರಿಸ್ಟ್‌ ಮತ್ತು ಮ್ಯಾಥ್ಯೂ ಹೇಡನ್‌ ಮೊದಲ ವಿಕೆಟ್‌ಗೆ 14 ಓವರ್‌ಗಳಲ್ಲಿ 105 ರನ್ ಜೊತೆಯಾಟವಾಡಿದ್ದರು. ಮೂರನೇ ವಿಕೆಟ್‌ ಜೊತೆಯಾಟದಲ್ಲಿ ರಿಕಿ ಪಾಂಟಿಂಗ್‌ ಹಾಗೂ ಡೆಮಿಯನ್ ಮಾರ್ಟಿನ್‌ 234 ರನ್‌ ಕಲೆಹಾಕಿ ಭಾರತಕ್ಕೆ 360 ರನ್‌ಗಳ ಗುರಿ ನೀಡಿದ್ದರು.

* ಟೂರ್ನಿಯುದ್ದಕ್ಕೂ ಉತ್ತಮವಾಗಿ ಆಡಿದ್ದ ಸಚಿನ್‌ ತೆಂಡೂಲ್ಕರ್‌ ಫೈನಲ್‌ನಲ್ಲಿ ನಾಲ್ಕು ರನ್ ಗಳಿಸಿ ಮೊದಲ ಓವರ್‌ನಲ್ಲಿಯೇ ಔಟಾಗಿದ್ದರು. ಗ್ಲೆನ್‌ ಮೆಕ್‌ ಗ್ರಾ ಬೌಲಿಂಗ್‌ನ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸಿದ್ದರು. ನಂತರದ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದರು. 82 ರನ್‌ ಗಳಿಸಿ ಭರವಸೆ ಮೂಡಿಸಿದ್ದ ವೀರೇಂದ್ರ ಸೆಹ್ವಾಗ್‌ ರನ್‌ ಔಟ್ ಆದಾಗಲೇ ಭಾರತ ಟ್ರೋಫಿ ಗೆಲ್ಲುವ ಆಸೆ ಕಮರಿತ್ತು.

* ಭಾರತದ ಆರು ಬ್ಯಾಟ್ಸ್‌ಮನ್‌ಗಳು ಒಂದಂಕಿಯ ಮೊತ್ತ ಕೂಡ ದಾಟದೇ ಔಟಾಗಿದ್ದರು. ಇದರಿಂದ ಭಾರತ ತಂಡ 234 ರನ್‌ಗೆ ಆಲೌಟ್‌ ಆಗಿತ್ತು. ಆಸ್ಟ್ರೇಲಿಯಾ 123 ರನ್‌ಗಳ ಗೆಲುವು ಸಾಧಿಸಿತ್ತು. ಇದು ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಹೆಚ್ಚು ಅಂತರದ  ರನ್‌ಗಳ ಗೆಲುವು ಇದಾಗಿದೆ.

* ಮೂರು ವಿಶ್ವಕಪ್‌ ಟ್ರೋಫಿ ಗೆದ್ದ ಮೊದಲ ತಂಡ ಎನ್ನುವ ಕೀರ್ತಿ ಆಸ್ಟ್ರೇಲಿಯಾ ಪಾಲಾಯಿತು. ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ ಸತತ 17 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ ಸಾಧನೆ ಮಾಡಿತು.

* ಒದ್ದೆಯಾಗಿದ್ದ ಪಿಚ್‌ನಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಸೌರವ್‌ ಗಂಗೂಲಿ ಅವರ ನಿರ್ಧಾರಕ್ಕೆ ಫಲಿತಾಂಶದ ಬಳಿಕ ಟೀಕೆ ವ್ಯಕ್ತವಾಯಿತು.

Post Comments (+)