ಸೋಮವಾರ, ಸೆಪ್ಟೆಂಬರ್ 16, 2019
24 °C
ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿ: ಮೂರನೇ ಸುತ್ತಿಗೆ ಜೊಕೊವಿಚ್‌

ಟೆನಿಸ್‌: ಪ್ರಿಕ್ವಾರ್ಟರ್‌ಗೆ ನಡಾಲ್‌

Published:
Updated:
Prajavani

ರೋಮ್‌ (ರಾಯಿಟರ್ಸ್‌): ಟೆನಿಸ್‌ ದಿಗ್ಗಜರಾದ ರೋಜರ್‌ ಫೆಡರರ್‌, ರಫೆಲ್‌ ನಡಾಲ್‌ ಹಾಗೂ ನವೊಮಿ ಒಸಾಕಾ ಅವರು ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯ ಗುರುವಾರ ಹದಿನಾರರ ಘಟ್ಟಕ್ಕೆ ಲಗ್ಗೆಯಿಟ್ಟರು.

ಎರಡನೇ ಸುತ್ತಿನ ಆಟವಾಡಿದ ಫೆಡರರ್‌ ಅವರು ಜೋವಾ ಸೌಸಾ ಅವರ ವಿರುದ್ಧ 6–4, 6–3 ಸೆಟ್‌ಗಳಿಂದ ಜಯದ ತೋರಣ ಕಟ್ಟಿದರು. 2016ರ ಬಳಿಕ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಫೆಡರರ್‌ ಆಡುತ್ತಿದ್ದಾರೆ. ಫೆಡರರ್‌ ಮುಂದಿನ ಪಂದ್ಯದಲ್ಲಿ ಕ್ರೊವೇಷ್ಯಾದ ಬಾರ್ನಾ ಕೊರಿಕ್‌ ಅವರನ್ನು ಎದುರಿಸುವರು. 

ದಿನದ ಆರಂಭದಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಫ್ರೆಂಚ್‌ ಆಟಗಾರ ಜೆರೆಮಿ ಚಾರ್ಡಿ ವಿರುದ್ಧ 6–0, 6–1 ಸೆಟ್‌ಗಳಿಂದ ಗೆದ್ದರು.

ನಡಾಲ್‌ ಅವರು ಮುಂದಿನ ಪಂದ್ಯದಲ್ಲಿ ಜಾರ್ಜಿಯಾ ನಿಕೊಲಾಜ್‌ ಬಾಸಿಲ್‌ಶ್ವಿಲಿ ಅವರ ಸವಾಲಿಗೆ
ಸಜ್ಜಾಗಲಿದ್ದಾರೆ. 

ಮಹಿಳಾ ಸಿಂಗಲ್ಸ್‌ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಜಪಾನ್‌ನ ನವೊಮಿ ಒಸಾಕಾ ಅವರು ಸ್ಲೋವೆಕಿಯಾದ ಡೊಮಿನಿಕಾ ಸಿಬುಲ್ಕೊವಾ ಎದುರು ಜಯದ ನಗೆ ಬೀರಿದರು.

ಮೂರನೇ ಸುತ್ತಿಗೆ ಜೊಕೊವಿಚ್‌: ಪುರುಷರ ಟೆನಿಸ್‌ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್‌ ಜೊಕೊವಿಚ್‌ ಅವರು ಬಲಿಷ್ಠ ಎದುರಾಳಿ ಕೆನಡಾದ ಡೆನಿಸ್‌ ಶಪೊವಾಲೊವ್‌ ಅವರನ್ನು ನೇರ ಸೆಟ್‌ಗಳಿಂದ ಮಣಿಸಿ
ಸಂಭ್ರಮಪಟ್ಟರು. 66 ನಿಮಿಷಗಳಲ್ಲಿ ಕೊನೆಗೊಂಡ ಎರಡನೇ ಸುತ್ತಿನ ಪಂದ್ಯದಲ್ಲಿ 6–1, 6–3 ಸೆಟ್‌ಗಳ ಅಂತರದಿಂದ ಗೆದ್ದರು. 

ತೃತೀಯ ಸುತ್ತಿನ ಪಂದ್ಯದಲ್ಲಿ ಜೊಕೊವಿಚ್‌ ಅವರು ಜರ್ಮನಿಯ ಫಿಲಿಪ್‌ ಕೋಲ್‌ಸ್ಕ್ರೆಬರ್‌ ಅಥವಾ ಇಟಲಿಯ ಮಾರ್ಕೊ ಚೆಚಿನಾಟೊ ಅವರನ್ನು ಎದುರಿಸಲಿದ್ದಾರೆ.

Post Comments (+)