ಶುಕ್ರವಾರ, ಸೆಪ್ಟೆಂಬರ್ 20, 2019
29 °C
ವಂಟಮುರಿ ಸೇರಿ 4 ಗ್ರಾಮಗಳಲ್ಲಿ ನೀರಿಗೆ ಪರದಾಟ

7 ಸಾವಿರ ಜನರಿಗೆ ಒಂದೇ ಬಾವಿ!

Published:
Updated:
Prajavani

ಬೆಳಗಾವಿ: ಪಕ್ಕದಲ್ಲೇ ಮಾರ್ಕಂಡೇಯ ಜಲಾಶಯ, ಘಟಪ್ರಭಾ ನದಿಗಳಿವೆ. ಇವು ಬತ್ತಿರುವುದರಿಂದಾಗಿ ತಾಲ್ಲೂಕಿನ ವಂಟಮುರಿ, ಪರಗುಟ್ಟಿ, ಜಾರಕಿಹೊಳಿ, ಮುಳ್ಳೊಳ್ಳಿ ಗ್ರಾಮಗಳ ಏಳು ಸಾವಿರಕ್ಕೂ ಹೆಚ್ಚಿನ ಜನ ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಅರಣ್ಯ ಸಚಿವ ಸತೀಶ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಈ ಹಳ್ಳಿಗಳ ಜನರಿಗೆ ಇರುವ ಏಕೈಕ ಜಲಮೂಲವಿದು. ಮಹಿಳೆಯರು, ಮಕ್ಕಳು, ಮನೆಗಳಿಂದ ಒಂದೂವರೆ ಕಿಲೊಮೀಟರ್‌ ದೂರದ ಬಾವಿಯಿಂದ ನೀರು ಹೊತ್ತುಕೊಂಡು ಹೋಗಬೇಕಾದ ಸ್ಥಿತಿ ಇದೆ.

ಹರಸಾಹಸ: ಅಲ್ಲಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಬಾವಿಯೂ ಪಾಚಿ ಕಟ್ಟಿಕೊಂಡಿದೆ. ಆದರೂ ಆ ನೀರನ್ನೇ ಸೇದಿಕೊಂಡು ಹೋಗಬೇಕಾದ ದುಃಸ್ಥಿತಿ ಅಲ್ಲಿನವರದು. ಕೆಲವರು ಎತ್ತಿನಗಾಡಿಗಳಲ್ಲಿ ಡ್ರಮ್‌ಗಳು, ಬಿಂದಿಗೆಗಳೊಂದಿಗೆ ಬಂದು ನೀರು ತೆಗೆದು
ಕೊಂಡು ಹೋಗುತ್ತಾರೆ. ನೀರು ಸೇದುವ ಕೆಲಸಕ್ಕಾಗಿಯೇ ಮೂರ್ನಾಲ್ಕು ಮಂದಿ ಬಂದಿರುತ್ತಾರೆ. ಕೆಲವರು ಬೈಕ್‌ಗಳಲ್ಲಿ, ಬೈಸಿಕಲ್‌ಗಳಲ್ಲಿ ನಾಲ್ಕೈದು ಬಿಂದಿಗೆಗಳನ್ನು ಕಟ್ಟಿಕೊಂಡು ಸಾಗಿಸುತ್ತಾರೆ.

ಗುಡ್ಡವನ್ನೇರಬೇಕು: ಗ್ರಾಮದ ಹೊರವಲಯದ ತಗ್ಗಿನಲ್ಲಿ ಈ ಬಾವಿ ಇದೆ. ಹೀಗಾಗಿ, ಬಹುತೇಕರು ನೀರನ್ನು ಹೊತ್ತುಕೊಂಡು ಗುಡ್ಡವನ್ನೇರಿ ಮನೆ ತಲುಪಬೇಕು. ಹೀಗೆ ಮಾಡುವ ಮಹಿಳೆಯರ ಸಂಕಷ್ಟ ಹೇಳತೀರದು. ಮನೆಯ ಬಳಿ ನೀರು ದೊರೆಯದೇ ಇರುವು
ದರಿಂದಾಗಿ ಮಹಿಳೆಯರು ಬಟ್ಟೆಗಳನ್ನು ಹೊತ್ತುಕೊಂಡು ಹೋಗಿ ಅಲ್ಲಿಯೇ ಶುಚಿ ಮಾಡುತ್ತಾರೆ. ಆ ಬಾವಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲು ಗ್ರಾಮ ಪಂಚಾಯ್ತಿ ಮುಂದಾಗಿಲ್ಲ. ಹೀಗಾಗಿ, ಅಲ್ಲೆಲ್ಲ ಕೆಸರುಮಯ.

ಘಟಪ್ರಭಾದಲ್ಲಿ ನೀರಿದ್ದಾಗ ತೊಂದರೆ ಇರುವುದಿಲ್ಲ. ಪೈಪ್‌ಲೈನ್‌ ಮೂಲಕ ಪೂರೈಸಲಾಗುತ್ತದೆ. ನದಿ ಬತ್ತಿದಾಗ ಸಂಕಷ್ಟ ತಪ್ಪಿಲ್ಲ.

ಟ್ಯಾಂಕರ್‌ ನೀರು ಸಾಲದು: ಜಿಲ್ಲಾ ಪಂಚಾಯ್ತಿಯಿಂದ ಆಗಾಗ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಅದು ಸಾಲು
ತ್ತಿಲ್ಲ ಎನ್ನುವ ದೂರು ಗ್ರಾಮಸ್ಥರದು.

ಹಲವು ವರ್ಷಗಳಿಂದಲೂ ನೀರಿನ ಸಮಸ್ಯೆ ಇದೆ. ಆದರೆ, ಶಾಶ್ವತ ಪರಿಹಾರ ಕಲ್ಪಿಸಲಾಗಿಲ್ಲ. ‘ಬಾವಿಯಲ್ಲಿ ವರ್ಷದ ಎಲ್ಲ ದಿನಗಳಲ್ಲೂ ನೀರಿರುತ್ತದೆ. ನದಿಯಲ್ಲಿ ನೀರಿದ್ದಾಗ ಬಾವಿ ಮೇಲಿನ ಅವಲಂಬನೆ ಕಡಿಮೆ ಇರುತ್ತದೆ. ಆದರೆ, ಬೇಸಿಗೆ ಸಂದರ್ಭದಲ್ಲಿ ಎಲ್ಲರೂ ಇಲ್ಲಿಗೇ ಬರಬೇಕು. ಕೆಲವು ಮಹಿಳೆಯರು ನೀರಿನ ಕೊಡ ಹೊತ್ತುಕೊಂಡು ಒಂದು ಕಿಲೊಮೀಟರ್‌ ನಡೆದುಕೊಂಡೇ ಹೋಗುತ್ತಾರೆ’ ಎಂದು ಎತ್ತಿನಗಾಡಿ ತಂದಿದ್ದ ಮಹಾನಿಂಗ ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)