ಬುಧವಾರ, ಡಿಸೆಂಬರ್ 2, 2020
17 °C

ವರ್ಷದಲ್ಲಿ 100 ಕೆ.ಜಿ ಚಿನ್ನ ಅಕ್ರಮ ಸಾಗಣೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿನ್ನ ಅಕ್ರಮ ಸಾಗಣೆ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿದ್ದು, ಬೆಂಗಳೂರಿನಲ್ಲಿ  ಸಕ್ರಿಯವಾಗಿರುವ ಕಳ್ಳಸಾಗಣೆದಾರರ ಜಾಲ 2018ರ ಜೂನ್‌ನಿಂದ ಇಲ್ಲಿವರೆಗೆ 100ಕೆ.ಜಿಗೂ ಅಧಿಕ ಚಿನ್ನ ಕಳ್ಳಸಾಗಣೆ ಮಾಡಿದೆ ಎಂದು ಅಂದಾಜಿಸಲಾಗಿದೆ.

ಕೇಂದ್ರ ತನಿಖಾ ದಳವು (ಸಿಬಿಐ) ಇತ್ತೀಚೆಗೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೂಪರಿಂಟೆಂಡೆಂಟ್‌ ರಜನೀಶ್‌ ಕುಮಾರ್‌ ಮತ್ತು ಇಬ್ಬರು ಕಸ್ಟಮ್ಸ್‌ ಅಧಿಕಾರಿಗಳ ವಿರುದ್ಧ ದಾಖಲಿಸಿರುವ ಪ್ರಕರಣದ ಪ್ರಮುಖ ಆರೋಪಿ, ಕೇರಳ ನಿವಾಸಿ ಶಿಹಬುದ್ದೀನ್‌ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾನೆ. ಈತ ಭಾರತ ಹಾಗೂ ದುಬೈನಲ್ಲಿ ಬಹು ಉದ್ಯಮ ಹೊಂದಿದ್ದಾನೆ ಎಂದು ರೆವಿನ್ಯೂ ಇಂಟಲಿಜೆನ್ಸ್‌ ನಿರ್ದೇಶನಾಲಯದ (ಡಿಆರ್‌ಐ) ಮೂಲಗಳು ತಿಳಿಸಿವೆ.

ಚಿನ್ನ ಅಕ್ರಮ ಸಾಗಣೆ ಸಂಬಂಧ ಡಿಆರ್‌ಐ ಈವರೆಗೆ 16 ಆರೋಪಿಗಳನ್ನು ಬಂಧಿಸಿದ್ದು ಮೂವರು ಚಿನ್ನ ಅಕ್ರಮ ಸಾಗಣೆಯಲ್ಲಿ ಪರಿಣತರು. ಕಳೆದ ಅಕ್ಟೋಬರ್‌ 14 ರಂದು ಬೆಳಗಿನ ಜಾವ ಮೂರು ವಿಮಾನಗಳಲ್ಲಿ ದುಬೈ ಮತ್ತಿತರ ಮಧ್ಯಪ್ರಾಚ್ಯ ದೇಶಗಳಿಂದ ಬಂದ ಆರು ಆರೋಪಿಗಳನ್ನು ಬಂಧಿಸಲಾಗಿದೆ. ನಗರದ ಎಚ್‌ಎಎಲ್‌ ಬಳಿಯ ಉದ್ಯಮಿ ಜಮ್‌ಶೀರ್‌ ಎಂಬಾತನ ಜೊತೆ ಇವರು ಸಂಪರ್ಕ ಹೊಂದಿದ್ದಾರೆ.

ಈ ಆರೋಪಿಗಳು ಸೊಂಟದ ಬೆಲ್ಟ್‌ ನಲ್ಲಿ 11 ಕೆ.ಜಿ ಚಿನ್ನದ ಪೇಸ್ಟ್‌ ಕಟ್ಟಿಕೊಂಡು ಬಂದಿದ್ದರು. ಇವರು ಕಸ್ಟಮ್ಸ್‌ ತಪಾಸಣೆಯಿಂದ ಪಾರಾಗಲು ಸಹಕರಿಸಿದ ಆರೋಪಕ್ಕೆ ಮೂವರು ಅಧಿಕಾರಿಗಳು ಒಳಗಾಗಿದ್ದಾರೆ.

ಇದರ ಹಿಂದೆಯೇ ಕೆಐಎ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಸಿಂಗಪುರದಿಂದ ಬಂದಿದ್ದ ಮುಂಬೈ ಮೂಲದ ಚಿನ್ನ ಹಾಗೂ ಕರೆನ್ಸಿ ಅಕ್ರಮ ಸಾಗಣೆದಾರರ ತಂಡದ ಸ‌ದಸ್ಯ ಡೇನಿಯಲ್‌ ಬಾಮ್‌ಬನಿ (41) ಎಂಬಾತನನ್ನು ಬಂಧಿಸಿ 2.5 ಕೆ.ಜಿ ಚಿನ್ನ ವಶಪಡಿಸಿಕೊಂಡಿದ್ದರು. ಸಿಂಗಪುರದಿಂದ ಬೆಂಗಳೂರಿಗೆ ಬಂದ ವಿಮಾನ ಅಹಮದಾಬಾದ್‌ನಲ್ಲಿ ದೇಶಿ ಪ್ರಯಾಣಿಕರನ್ನು ಹತ್ತಿಸಿಕೊಂಡಿತ್ತು. ಈ ವಿಮಾನದಲ್ಲಿ ಪ್ರಯಾಣಿಸಿದ ಡೇನಿಯಲ್‌ ವಿಮಾನ ತಂತ್ರಜ್ಞಾನಕ್ಕೆ ಬಳಸುವ ಸ್ಕ್ರೂ ಡ್ರೈವರ್ ಬಳಸಿ ‘ಶೌಚಾಲಯದ ಪ್ಯಾನಲ್‌’ ಬಿಚ್ಚಿ ₹ 1.5 ಕೋಟಿ (2 ಲಕ್ಷ ಡಾಲರ್‌) ಅಡಗಿಸಿ ಇಟ್ಟಿದ್ದ. ವಿಮಾನ ನಿಲ್ದಾಣ ಸಭಾಂಗಣದಲ್ಲಿ ಅದೇ ವಿಮಾನದಲ್ಲಿ ಪ್ರಯಾಣಿಸಲು ಕಾಯುತ್ತಿದ್ದ ಈತನ ಸಹಚರ ಪಂಕಜ್‌ (45) ಎಂಬಾತನನ್ನು ಬಂಧಿಸಲಾಗಿದೆ.

 ಶೌಚಾಲಯದಲ್ಲಿ ಅಡಗಿಸಿಟ್ಟ ಹಣವನ್ನು ತೆಗೆದುಕೊಂಡು ಪ್ರಯಾಣಿಸುವ ಉದ್ದೇಶವನ್ನು ಪಂಕಜ್‌ ಹೊಂದಿದ್ದ ಎಂದೂ ಮೂಲಗಳು ವಿವರಿಸಿವೆ. ವಿಮಾನ ಹಾರಾಟ ನಡೆಸುವಾಗ ಪ್ಯಾನಲ್‌ ಬಿಚ್ಚುವುದು ಅತ್ಯಂತ ಅಪಾಯಕಾರಿ. ಈ ಕೆಲಸವನ್ನು ಅಕ್ರಮ ಚಿನ್ನ ಹಾಗೂ ಕರೆನ್ಸಿ ಕಳ್ಳಸಾಗಣೆದಾರರು ಮಾಡುತ್ತಿದ್ದರು ಎಂದೂ ಡಿಆರ್‌ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿಯುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು