ಶುಕ್ರವಾರ, ಸೆಪ್ಟೆಂಬರ್ 20, 2019
28 °C

ವಂಚನೆ: ಐಎಎಸ್ ಅಧಿಕಾರಿ ದೂರು

Published:
Updated:

ಬೆಂಗಳೂರು: ನಕಲಿ ಅಂಕಪಟ್ಟಿ ಸಲ್ಲಿಸಿ ಸರ್ಕಾರಿ ನೌಕರಿ ಪಡೆದಿದ್ದ ಆರೋಪದಡಿ ಡಿ.ಎನ್.ಯಶೋದಮ್ಮ ಎಂಬುವರ ವಿರುದ್ಧ ಭೂಮಾಪನ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್ ಹಲಸೂರು ಗೇಟ್ ಠಾಣೆಗೆ ದೂರು ಕೊಟ್ಟಿದ್ದಾರೆ.

‘ಯಶೋದಮ್ಮ ಅವರು 1999ರಿಂದ ಭೂದಾಖಲಾತಿಗಳ ಜಂಟಿ ನಿರ್ದೇಶಕರ ಅಧಿಕೃತ ಜ್ಞಾಪನಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ದ್ವಿತೀಯ ಪಿಯುಸಿ ನಕಲಿ ಅಂಕಪಟ್ಟಿ ಸಲ್ಲಿಸಿ ಹುದ್ದೆ ಪಡೆದಿರುವುದಾಗಿ ರಾಮಕೃಷ್ಣ ಎಂಬ ವಕೀಲರೊಬ್ಬರು ಇತ್ತೀಚೆಗೆ ಆರೋಪ ಮಾಡಿದ್ದರು. ಹೀಗಾಗಿ, ಅಂಕಪಟ್ಟಿಯನ್ನು ಪರಿಶೀಲನೆಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಕಳುಹಿಸಲಾಗಿತ್ತು’ ಎಂದು ಮೌದ್ಗಿಲ್ ದೂರಿನಲ್ಲಿ ವಿವರಿಸಿದ್ದಾರೆ.

‘ಇದೀಗ ಪರಿಶೀಲನಾ ವರದಿ ಕಳುಹಿಸಿರುವ ಇಲಾಖೆ ನಿರ್ದೇಶಕರು, ‘ಅದು ನಕಲಿ ಅಂಕಪಟ್ಟಿ’ ಎಂದು ದೃಢಪಡಿಸಿದ್ದಾರೆ. ಹೀಗಾಗಿ, ಸುಳ್ಳು ದಾಖಲೆಗಳನ್ನು ಸಲ್ಲಿಸಿ ಸರ್ಕಾರಕ್ಕೆ ವಂಚಿಸಿರುವ ಯಶೋದಮ್ಮ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.ಯಶೋದಮ್ಮ ವಿದ್ಯಾರಣ್ಯಪುರ ನಿವಾಸಿಯಾಗಿದ್ದು, ಕರೆ ಮಾಡಿ ವಿಚಾರಣೆಗೆ ಕರೆದಿರುವುದಾಗಿ ಪೊಲೀಸರು ಹೇಳಿದ್ದಾರೆ.

Post Comments (+)