ಗುರುವಾರ , ಸೆಪ್ಟೆಂಬರ್ 19, 2019
26 °C

5 ತಿಂಗಳಲ್ಲಿ 383 ಮಂದಿಗೆ ಡೆಂಗಿ, ಸಾರ್ವಜನಿಕರಲ್ಲಿ ಆತಂಕ

Published:
Updated:
Prajavani

ಬೆಂಗಳೂರು: ‌ಮುಂಗಾರು ಮಳೆ ಪ್ರವೇಶಕ್ಕೂ ಮೊದಲೇ ನಗರದಲ್ಲಿ ಈ ವರ್ಷ 383 ಮಂದಿ ಡೆಂಗಿ ಜ್ವರದಿಂದ ಬಳಲಿದ್ದಾರೆ. ಸೋಂಕು ಹರಡುವ ಸೊಳ್ಳೆಯ ನಿಯಂತ್ರಣ ಬಿಬಿಎಂಪಿ ಪಾಲಿಗೆ ಸವಾಲಾಗಿದೆ. 

ತಗ್ಗು ಪ್ರದೇಶದಲ್ಲಿ ನೀರು ನಿಲ್ಲುವುದರಿಂದ ಹಾಗೂ ಕಸದ ಸಮಸ್ಯೆಯಿಂದ ‘ಈಡೀಸ್’ ಜಾತಿಯ ಸೊಳ್ಳೆ ಕಾಟ ಹೆಚ್ಚಲಾರಂಭಿಸಿದೆ. ಅದೇ ರೀತಿ, ನಗರಕ್ಕೆ ಬರುವ ವಲಸಿಗರು ಹೆಚ್ಚಾಗಿ ನೆಲೆಸಿರುವ ತಾಣಗಳಲ್ಲೂ ಹೆಚ್ಚು ಡೆಂಗಿ ಪ್ರಕರಣಗಳು ವರದಿಯಾಗುತ್ತಿವೆ. ಮಳೆಗಾಲದಲ್ಲಿ ಮನೆಯ ಚಾವಣಿ, ಖಾಲಿ ನಿವೇಶನದಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಯ ಉತ್ಪತ್ತಿ ಅಧಿಕವಾಗುವ ಆತಂಕ ಉಂಟಾಗಿದೆ. 

ಸಾಮಾನ್ಯವಾಗಿ ಜೂನ್ ಬಳಿಕ ನಗರದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತವೆ. ಆದರೆ, ಈ ವರ್ಷ ಬೇಸಿಗೆಯಲ್ಲಿ ಸುರಿದ ಮಳೆಯಿಂದಾಗಿ ಮುಂಗಾರು ಪೂರ್ವವೇ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಈ ಅವಧಿಯಲ್ಲಿ 342 ಮಂದಿ ಸೋಂಕಿಗೆ ಬಳಲಿ, ಚಿಕಿತ್ಸೆ ಪಡೆದಿದ್ದರು. ಈ ಸಂಖ್ಯೆ 2019ರಲ್ಲಿ 383 ದಾಟಿದೆ. ರಾಜ್ಯದಲ್ಲಿ ವರದಿಯಾದ ಒಟ್ಟು ಡೆಂಗಿ ಪ್ರಕರಣಗಳಲ್ಲಿ ನಗರದ ಪಾಲೇ ಶೇ 26ರಷ್ಟು ಇದೆ.

ನಗರದ ಪೂರ್ವ ವಲಯದಲ್ಲಿ ಅಧಿಕ ಡೆಂಗಿ ಪ್ರಕರಣಗಳು ವರದಿಯಾಗಿವೆ. ಹೆಚ್ಚು ಸೊಳ್ಳೆ ಉತ್ಪತ್ತಿಯಾಗುವ ಪ್ರದೇಶಗಳನ್ನು ಗುರುತಿಸಿ, ಧೂಮೀಕರಣ ಮಾಡಲಾಗುತ್ತಿದ್ದರೂ ಲಾರ್ವಾ ನಿಯಂತ್ರಣಕ್ಕೆ ಬರುತ್ತಿಲ್ಲ. ಅವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಕೂಡ ಇದಕ್ಕೆ ಪ್ರಮುಖ ಕಾರಣ. ದಾಸರಹಳ್ಳಿ ವಲಯದಲ್ಲಿ ಡೆಂಗಿ ಪ್ರಮಾಣ ಕಡಿಮೆ ಇದೆ.

‘ಪಾಲಿಕೆಯ ಹಳೆಯ ವಲಯಗಳಲ್ಲಿ ಪ್ರತಿ ವಾರ್ಡ್‌ಗೆ ಮೂವರು ಹಾಗೂ ಹೊಸ ವಲಯಗಳಲ್ಲಿ ಪ್ರತಿ ವಾರ್ಡ್‌ಗೆ  ನಾಲ್ವರು ಸಿಬ್ಬಂದಿಯನ್ನು ಸೊಳ್ಳೆ ನಿಯಂತ್ರಣ ಔಷಧ ಸಿಂಪಡಿಸಲು ನಿಯೋಜಿಸಲಾಗಿದೆ. ದೊಡ್ಡ ಮೋರಿಗಳಲ್ಲಿ ಔಷಧ ಸಿಂಪಡಿಸಲು ಪ್ರತಿ ಉಪವಿಭಾಗವಾರು ಒಂದು ವಾಹನವನ್ನು ನಿಯೋಜಿಸಲಾಗಿದೆ. ಡೆಂಗಿ, ಚಿಕೂನ್‌ ಗುನ್ಯ ಪ್ರಕರಣಗಳು ಕಂಡುಬಂದ ಸ್ಥಳದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಧೂಮೀಕರಣ ಮಾಡಲಾಗುತ್ತಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು. 

Post Comments (+)