ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕಡ್ಡಾಯ

ಗುರುವಾರ , ಜೂನ್ 27, 2019
29 °C
ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪೊಲೀಸ್‌ ಕಮಿಷನರ್‌ ಹೇಳಿಕೆ

ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕಡ್ಡಾಯ

Published:
Updated:
Prajavani

ಮಂಗಳೂರು: ನಗರದ ಎಲ್ಲ ಪ್ರಮುಖ ರಸ್ತೆಗಳು ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ತಿಳಿಸಿದರು.

ನೇರ ಫೋನ್‌– ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಅವರು, ‘ನಗರದ ವ್ಯಾಪ್ತಿಗೆ ಅನುಸಾರವಾಗಿ 2,000ದಿಂದ 3,000ದಷ್ಟು ಸಿಸಿಟಿವಿ ಕ್ಯಾಮೆರಾಗಳ ಅಗತ್ಯವಿದೆ. ಆದರೆ, ಸದ್ಯ ಪೊಲೀಸ್‌ ಇಲಾಖೆ ಅಳವಡಿಸಿರುವ 200 ಮತ್ತು ಖಾಸಗಿಯವರು ಅಳವಡಿಸಿರುವ 950 ಸಿಸಿಟಿವಿ ಕ್ಯಾಮೆರಾಗಳು ಮಾತ್ರ ಇವೆ’ ಎಂದರು.

ಎಲ್ಲ ಪ್ರಮುಖ ರಸ್ತೆಗಳು ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆಯೇ ಎಂಬುದನ್ನು ಆಯಾ ಪೊಲೀಸ್‌ ಠಾಣೆಗಳ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುವುದು. ಸಿಸಿಟಿವಿ ಹೊಂದಿರದ ಕಟ್ಟಡಗಳಿಗೆ ತಕ್ಷಣವೇ ಅಳವಡಿಸಿಕೊಳ್ಳುವಂತೆ ಕಟ್ಟಡಗಳ ಮಾಲೀಕರು ಮತ್ತು ವ್ಯವಸ್ಥಾಪಕರಿಗೆ ನೋಟಿಸ್ ಜಾರಿಗೊಳಿಸಲಾಗುವುದು. ಅದನ್ನು ಪಾಲಿಸದಿದ್ದರೆ ₹ 5,000 ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

500ಕ್ಕೂ ಹೆಚ್ಚು ಜನರು ಭೇಟಿ ನೀಡುವ ಕಟ್ಟಡಗಳಲ್ಲಿ ಕನಿಷ್ಠ ಎರಡು ಸಿಸಿಟಿವಿ ಕ್ಯಾಮೆರಾ ಮತ್ತು ಮುಖ್ಯ ದ್ವಾರಗಳಿಗೆ ಲೋಹ ಶೋಧಕ ಅಳವಡಿಸುವುದನ್ನು ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕಾಯ್ದೆಯಲ್ಲಿ ಕಡ್ಡಾಯಗೊಳಿಸಲಾಗಿದೆ. ಶ್ರೀಲಂಕಾದಲ್ಲಿ ನಡೆದ ಬಾಂಬ್‌ ಸ್ಫೋಟದ ಬಳಿಕ ಸಭೆ ನಡೆಸಿ ಈ ಕುರಿತು ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ ಎಂದರು.

ಫಾಸ್ಟ್‌ ಪುಡ್‌ ಸಮಸ್ಯೆ:

ಬಿಜೈ ಕಾವೂರು ತಿರುವು ಬಳಿಯ ಪಾದಚಾರಿ ಮಾರ್ಗ ಮತ್ತು ರಸ್ತೆ ಬದಿಗಳಲ್ಲಿ ಫಾಸ್ಟ್‌ ಫುಡ್‌ ಮಳಿಗೆಯವರು ತ್ಯಾಜ್ಯವನ್ನು ಎಸೆಯುವುದರಿಂದ ಶುಚಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂಬ ದೂರು ಬಂತು. ಫಾಸ್ಟ್‌ ಫುಡ್‌ ಮಳಿಗೆಯವರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸುವ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಕಮಿಷನರ್ ಭರವಸೆ ನೀಡಿದರು.

ಮೀನು ಸಾಗಿಸುವ ವಾಹನಗಳಿಂದ ನೀರು ಚೆಲ್ಲುವ ಸಮಸ್ಯೆ ಅರ್ಧದಷ್ಟು ಕಡಿಮೆಯಾಗಿದೆ. ಇನ್ನೂ ಶೇಕಡ 50ರಷ್ಟು ಸಮಸ್ಯೆ ಇದೆ ಎಂದು ಜಪ್ಪು ನಿವಾಸಿಯೊಬ್ಬರು ದೂರಿದರು. ಮೀನು ಸಾಗಣೆ ವಾಹನಗಳು ಬಂದರು ಪ್ರದೇಶದಿಂದ ಗೂಡ್‌ಶೆಡ್‌ ರಸ್ತೆಯಲ್ಲಿ ಮಾತ್ರ ಸಂಚರಿಸುವ ವ್ಯವಸ್ಥೆ ಮಾಡಲಾಗುವುದು. ಗೂಡ್‌ ಶೆಡ್ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಮುಗಿದ ಬಳಿಕ ಈ ಕ್ರಮ ಜಾರಿಯಾಗಲಿದೆ ಎಂದು ಸಂದೀಪ್‌ ಪಾಟೀಲ್‌ ಉತ್ತರಿಸಿದರು.

ಶಾಲೆ ಮತ್ತು ಕಾಲೇಜುಗಳ ಬಳಿ ಬೀಡಿ, ಸಿಗರೇಟು ಮಾರಾಟ ಹೆಚ್ಚುತ್ತಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಕಮಿಷನರ್‌, ‘ಅಂತಹ ಅಂಗಡಿ ಮಾಲೀಕರ ವಿರುದ್ಧ ಕೋಟ್ಪಾ ಕಾಯ್ದೆಯಡಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಲಾಗುವುದು’ ಎಂದರು.

ಮೀನುಗಾರಿಕಾ ಕಾಲೇಜು– ಸೂಟರ್‌ಪೇಟೆ ರಸ್ತೆಯಲ್ಲಿ ಗಾಂಜಾ ಮಾರಾಟ, ಕೂಳೂರು ಸಫಾ ನಗರದಲ್ಲಿ ಯುವಕರು ಗಾಂಜಾ ಸೇವಿಸಿ, ಟ್ಯಾಬ್‌ನಲ್ಲಿ ಗೇಮ್‌ ಆಡುತ್ತಾ ರಸ್ತೆಯಲ್ಲಿ ಸಂಚರಿಸುವವರಿಗೆ ಕಿರುಕುಳ ನೀಡುತ್ತಿರುವುದು, ಉಳ್ಳಾಲದ ಕೆಲವೆಡೆ ಅಪ್ರಾಪ್ತ ವಯಸ್ಕರಿಂದ ದ್ವಿಚಕ್ರ ವಾಹನ ಚಾಲನೆ, ಯೆಯ್ಯಾಡಿಯಲ್ಲಿ ಸಂಚಾರ ದಟ್ಟಣೆ, ಸರಕು ಸಾಗಣೆ ವಾಹನಗಳು ಮತ್ತು ಘನ ತ್ಯಾಜ್ಯ ಸಾಗಣೆ ವಾಹನಗಳಲ್ಲಿ ಜನರು ನೇತಾಡಿಕೊಂಡು ಹೋಗುತ್ತಿರುವುದು, ಜೋಕಟ್ಟೆ ರೈಲ್ವೆ ಗೇಟ್‌ ಬಳಿ ಲಾರಿ ಮತ್ತು ಟಿಪ್ಪರ್‌ಗಳಿಂದ ಸಮಸ್ಯೆ ಸೇರಿದಂತೆ ಹಲವು ದೂರುಗಳು ಬಂದವು.

ಒಟ್ಟು 23 ಮಂದಿ ಕರೆಮಾಡಿ ಅಹವಾಲು ಹೇಳಿದರು. ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್, ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌ಗಳಾದ ಸಿ.ಎನ್. ದಿವಾಕರ್, ಹರೀಶ್ ಕೆ. ಪಟೇಲ್, ಅಶೋಕ್, ಎಎಸ್‍ಐ ಪಿ. ಯೋಗೇಶ್ವರನ್, ಹೆಡ್‍ ಕಾನ್‌ಸ್ಟೆಬಲ್‌ ಪುರುಷೋತ್ತಮ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !