ಅಪಘಾತ ತಪ್ಪಿಸಲು ರಸ್ತೆ ಉಬ್ಬುಗಳಿಗೆ ಬಣ್ಣ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ರಸ್ತೆ ಸುರಕ್ಷತೆಗೆ ಮುಂದಾದ ಹೊಸನಗರ ತಾಲ್ಲೂಕಿನ ಬಾಲಕ ದಿನೇಶ್

ಅಪಘಾತ ತಪ್ಪಿಸಲು ರಸ್ತೆ ಉಬ್ಬುಗಳಿಗೆ ಬಣ್ಣ

Published:
Updated:
Prajavani

ಶಿವಮೊಗ್ಗ: ಹೊಸನಗರ ತಾಲ್ಲೂಕು ಸೂಡೂರಿನ ಬಾಲಕನೊಬ್ಬ ಏಕಾಂಗಿಯಾಗಿ ರಸ್ತೆ ಸುರಕ್ಷತೆಗೆ ಟೊಂಕಕಟ್ಟಿ ನಿಂತ ವಿಚಾರ ಸಾರ್ವಜನಿಕರ ಪ್ರಶಂಸೆಗೆ ಒಳಗಾಗಿದೆ.

ಆಯನೂರಿನಿಂದ ರಿಪ್ಪನ್‌ಪೇಟೆಗೆ ಹೋಗುವ ಮಾರ್ಗದ ಸೂಡೂರು ಗೇಟ್ ಬಳಿ ರೈಲ್ವೆ ಕ್ರಾಸಿಂಗ್ ಇದೆ. ಕ್ರಾಸಿಂಗ್‌ನ ಎರಡೂ ಬದಿಯ ರಸ್ತೆಗೆ ದೊಡ್ಡ ಉಬ್ಬುಗಳನ್ನು ಹಾಕಲಾಗಿದೆ. ಆದರೆ, ಈ ಉಬ್ಬುಗಳಿರುವ ಕುರಿತು ರಸ್ತೆ ಬದಿ ಯಾವುದೇ ಸೂಚನಾ ಫಲಕಗಳನ್ನು ಹಾಕಿಲ್ಲ. ಉಬ್ಬುಗಳಿಗೆ ರಿಫ್ಲೆಕ್ಟರ್ ಅಳವಡಿಸಿಲ್ಲ. ಕೊನೆ ಪಕ್ಷ ಬಿಳಿಬಣ್ಣದ ಪಟ್ಟಿಯನ್ನೂ ಬಳಿದಿಲ್ಲ. ಇದರಿಂದ ಆ ಮಾರ್ಗದಲ್ಲಿ ಸಂಚರಿಸುವ ವಾಹನ ಚಾಲಕರು, ಬೈಕ್‌ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬಿದ್ದ ಬೈಕ್‌ಗಳಿಗೆ ಲೆಕ್ಕವಿಲ್ಲ. ಐದು ವರ್ಷಗಳಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.

ಮೇ 13ರಂದು ಸೂಡೂರಿನ ಮದುವೆ ಸಮಾರಂಭಕ್ಕೆ ಬಂದಿದ್ದ ಅಡುಗೆ ಭಟ್ಟರು ರಾತ್ರಿ ಮನೆಗೆ ಮರಳುವಾಗ ಅವೈಜ್ಞಾನಿಕ ರಸ್ತೆ ಉಬ್ಬಿನ ಮೇಲೆ ಸಾಗಿ ಕೆಳಗೆ ಬಿದ್ದರು. ರೈಲು ಮಾರ್ಗದ ತಡೆಗೋಡೆಗೆ ಬಡಿದು ಮೃತಪಟ್ಟಿದ್ದರು. ಈ ಅವಘಡ ಅಲ್ಲೇ ಸಮೀಪದಲ್ಲಿ ಇರುವ 9ನೇ ತರಗತಿಯ ವಿದ್ಯಾರ್ಥಿ ಎಸ್‌.ಎನ್‌.ದಿನೇಶ್‌ ಮನಸ್ಸನ್ನು ಕದಡಿತು. ಎರಡು ದಿನ ತಲೆ ಕೆಡಿಸಿಕೊಂಡಿದ್ದ ಆತ ಬಿಳಿ ಬಣ್ಣ ಖರೀದಿಸಿ ತಂದು ರಸ್ತೆಯ ಎಲ್ಲ ಉಬ್ಬುಗಳಿಗೆ ಬಳಿದಿದ್ದಾನೆ. ರಸ್ತೆ ಸವಾರರಿಗೆ ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಶ್ರಮಿಸಿದ್ದಾನೆ. ದಿನೇಶನ ಏಕಾಂಗಿ ಕಾರ್ಯದ ಸುದ್ದಿ ಸುತ್ತಲ ಗ್ರಾಮಗಳಿಗೆ ಹರಡಿದೆ. ಆತನ ಕಾರ್ಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

‘ನಾನು 4ನೇ ತರಗತಿಯಲ್ಲಿದ್ದಾಗ ಈ ಮಾರ್ಗದಲ್ಲಿ ರಸ್ತೆ ಉಬ್ಬು ಅಳವಡಿಸಿದ್ದರು. ಅಂದಿನಿಂದಲೂ ವಾರಕ್ಕೆ ಒಬ್ಬರಾದರೂ ಬೈಕ್‌ನಿಂದ ಬಿದ್ದಿದ್ದಾರೆ. ಗಾಯಗೊಂಡಿದ್ದಾರೆ. ಜೀವ ಕಳೆದುಕೊಂಡಿದ್ದಾರೆ. ಮೇ 13ರ ಘಟನೆಯಿಂದ ಮನಸ್ಸಿಗೆ ಗಾಸಿ ಆಯಿತು. ಅಪ್ಪ, ಅಣ್ಣನಿಗೆ ಗೊತ್ತಾಗದಂತೆ ಬಣ್ಣ ತಂದು ಉಬ್ಬುಗಳಿಗೆ ಬಳಿದೆ. ಸೈಕಲ್‌ ಏರಿ ಎಲ್ಲೆಡೆ ಇದೇ ರೀತಿ ಬಣ್ಣ ಬಳಿಯುವ ಆಸೆ ಇದೆ. ಜನರ ಜೀವ ಉಳಿಯಬೇಕು’ ಎನ್ನುತ್ತಾನೆ ರಿಪ್ಪನ್‌ಪೇಟೆ ಮೇರಿ ಮಾತಾ ಶಾಲೆಯ ವಿದ್ಯಾರ್ಥಿಯೂ ಆದ ದಿನೇಶ್.

ದಿನೇಶ್ ತಂದೆ ನಾಗಭೂಷಣ್ ಸಾಮಾನ್ಯ ಕೃಷಿಕರು. ಅವರ ಮೂವರು ಮಕ್ಕಳಲ್ಲಿ ದಿನೇಶ್ ಕೊನೆಯ ಪುತ್ರ. ಅವನ ಭವಿಷ್ಯದ ಬಗ್ಗೆ ಯಾವುದೇ ಕನಸು ಇಟ್ಟುಕೊಂಡಿಲ್ಲ. ಜನರಿಗೆ ಒಂದಷ್ಟು ನೆರವಾಗಲಿ ಎನ್ನುವ ಹಂಬಲ ಇದೆಯಷ್ಟೆ ಎನ್ನುತ್ತಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !