ಗುರುವಾರ , ಸೆಪ್ಟೆಂಬರ್ 19, 2019
29 °C

‘ವಾಟರ್ ಗ್ರಿಡ್’ ಯೋಜನೆಗೆ ಸಿದ್ಧತೆ

Published:
Updated:

ಬೆಂಗಳೂರು: ವಿದ್ಯುತ್ ಗ್ರಿಡ್ ಮಾದರಿಯಲ್ಲಿ ‘ವಾಟರ್ ಗ್ರಿಡ್’ ಯೋಜನೆ ರೂಪಿಸುವ ಮೂಲಕ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಕುಡಿಯುವ ನೀರಿಗೆ ಪ್ರತ್ಯೇಕ ಪೈಪ್‌ಲೈನ್ ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಬೃಹತ್ ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಜಂಟಿಯಾಗಿ ಕಾರ್ಯ ಯೋಜನೆ ರೂಪಿಸಲಿವೆ ಎಂದು ಮೂಲಗಳು ತಿಳಿಸಿವೆ.

ಜಲಾಶಯಗಳು, ನದಿ ಪಾತ್ರ ಹಾಗೂ ಇತರ ಜಲಮೂಲಗಳಿಂದ ಸಾಕಷ್ಟು ಕಡೆಗಳಲ್ಲಿ ಕಾಲುವೆಗಳಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದ ನೀರು ಪೋಲಾಗುತ್ತದೆ. ಜತೆಗೆ ಮಧ್ಯದಲ್ಲಿ ಕೃಷಿ ಚಟುವಟಿಕೆಗಳಿಗೆ ಬಳಸುವುದು, ಆವಿಯಾಗುವುದು, ಕಳ್ಳತನ ತಡೆಯುವ ಸಲುವಾಗಿ ಪೈಪ್‌ಲೈನ್ ಮೂಲಕ ನೀರು ಸರಬರಾಜಿಗೆ ಉದ್ದೇಶಿಸಲಾಗಿದೆ.

ನೀರು ಹರಿಸಬೇಕಿರುವ ನಗರ, ಪಟ್ಟಣ, ಹಳ್ಳಿ ಪ್ರದೇಶಕ್ಕೆ ಸಮೀಪದ ಅಲ್ಲಲ್ಲಿ ಜಲಸಂಗ್ರಹಾಗಾರ ನಿರ್ಮಿಸಿ, ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು. ಬರ ಹಾಗೂ ಬೇಸಿಗೆ ಸಮಯದಲ್ಲಿ ಪೈಪ್‌ಲೈನ್‌ನಲ್ಲಿ ಹರಿಸಿದರೆ ನೀರು ಪೋಲಾಗುವುದು ತಡೆದು, ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ. ತೀವ್ರ ಬರದ ಸಮಯದಲ್ಲಿ ಕುಡಿಯುವ ನೀರು ಕೊಡಲು ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಕೊಳವೆಬಾವಿಗಳು ಬರಿದಾಗುತ್ತವೆ, ಜಲ ಮೂಲಗಳಲ್ಲೂ ನೀರು ಸಿಗುವುದಿಲ್ಲ. ಟ್ಯಾಂಕರ್‌ಗಳ ಮೂಲಕ ನೀರು ಕೊಟ್ಟು, ಪರಿಸ್ಥಿತಿ ನಿಬಾಯಿಸುವುದು ಕಷ್ಟಕರ. ನೀರು ಸಂಗ್ರಹಿಸಿ ಇಟ್ಟುಕೊಂಡಿದ್ದರೆ ಸಂಕಷ್ಟದಲ್ಲಿ ಪೈಪ್‌ಲೈನ್ ಮೂಲಕ ಸರಬರಾಜು ಮಾಡಬಹುದು ಎಂಬ ಚಿಂತನೆ ನಡೆದಿದೆ.

‘ಬರ ಪರಿಸ್ಥಿತಿ ಕುರಿತು ಚರ್ಚಿಸಲು ಸೇರಿದ್ದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಕುಡಿಯುವ ನೀರು ಸರಬರಾಜಿಗೆ ಪ್ರತ್ಯೇಕ ಪೈಪ್‌ಲೈನ್ ನಿರ್ಮಿಸುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಮ್ಮತಿ ಸೂಚಿಸಿದ್ದಾರೆ. ತಕ್ಷಣವೇ ಕ್ರಿಯಾ ಯೋಜನೆ ರೂಪಿಸಿ, ಮುಂದಿನ ಸೆಪ್ಟೆಂಬರ್‌ನಿಂದಲೇ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ನೀರಿನ ಕಾಲುವೆಗಳ ಮೇಲೆ ಸೋಲಾರ್ ಪ್ಯಾನಲ್‌ ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ರೂಪಿಸುವ ಬಗ್ಗೆ ಚರ್ಚಿಸ
ಲಾಯಿತು ಎಂದು ಮೂಲಗಳು ಹೇಳಿವೆ.

Post Comments (+)