ಒಂದು ಚೈತನ್ಯ-ಬಹುಪಾತ್ರ

ಮಂಗಳವಾರ, ಮೇ 21, 2019
23 °C

ಒಂದು ಚೈತನ್ಯ-ಬಹುಪಾತ್ರ

Published:
Updated:

ಬಹಿರಂತರಗಳೊಂದು ಭೂತಭವ್ಯಗಳೊಂದು |
ಇಹಪರಂಗಳುವೊಂದು ಚೈತನ್ಯವೊಂದು ||
ಬಹುಪಾತ್ರನಾಟಕದಿ ಮಾಯೆ ಶತವೇಷಗಳ |
ವಹಿಸಲೀವಳು ಪತಿಗೆ – ಮಂಕುತಿಮ್ಮ || 133 ||

ಪದ-ಅರ್ಥ: ಬಹಿರಂತರಗಳೊಂದು=ಬಹಿರ್(ಹೊರಗೆ)+ಅಂತರ(ಒಳಗೆ)+ಒಂದು, ಭೂತಭವ್ಯಗಳೊಂದು=ಭೂತ(ಹಿಂದಿನದು) +ಭವ್ಯ(ಮುಂದಾಗುವುದು)+ಒಂದು.

ವಾಚ್ಯಾರ್ಥ: ಹೊರಗೆ, ಒಳಗೆ ಎನ್ನುವುದೆಲ್ಲ ಒಂದೇ. ಭೂತ, ಭವಿಷ್ಯಗಳೂ ಒಂದೇ. ಇಹ (ಈಗಿರುವ ಲೋಕ) ಮತ್ತು ಪರ (ಇದಕ್ಕಿಂತ ಮೇಲಾದ ಲೋಕ) ಎರಡೂ ಒಂದೇ. ಇವುಗಳನ್ನು ನಡೆಯಿಸುವ ಚೈತನ್ಯ ಕೂಡ ಒಂದೇ. ಮಾಯೆ ಸೂತ್ರಧಾರಿಯಾಗಿ ಅನೇಕ ಪಾತ್ರಗಳಿರುವ ಈ ನಾಟಕದಲ್ಲಿ ತನ್ನ ಪತಿಯಾದ ಬ್ರಹ್ಮನಿಗೆ ನೂರಾರು ವೇಷಗಳನ್ನು ತೊಡಲು ನೀಡುತ್ತಾಳೆ.

ವಿವರಣೆ: ಒಳಗೆ ಮತ್ತು ಹೊರಗೆ ಎನ್ನುವುದು ಒಂದು ವ್ಯವಸ್ಥೆಯನ್ನು ಕಲ್ಪಿಸಿಕೊಂಡಾಗ. ವ್ಯಕ್ತಿ ಮನೆಯೊಳಗಿದ್ದಾರೋ, ಹೊರಗಿದ್ದಾರೋ ಎಂಬ ಜಿಜ್ಞಾಸೆ ಬರುವುದು ಮನೆಯನ್ನು ಕಲ್ಪಿಸಿಕೊಂಡಾಗ. ದೇಶದಲ್ಲಿ ಇದ್ದಾರೆಯೇ, ಇಲ್ಲವೋ ಎಂಬ ಪ್ರಶ್ನೆ ದೇಶವನ್ನು ಕಲ್ಪಿಸಿಕೊಂಡಾಗ ಬರುವಂಥದ್ದು. ಇಡೀ ವಿಶ್ವವನ್ನೇ ಕಲ್ಪಿಸಿದರೆ? ಪ್ರಪಂಚದ ಹೊರಗೆ ಎನ್ನುವುದು ಯಾವುದೂ ಇಲ್ಲ. ಇಡೀ ಜಗತ್ತೇ ಬ್ರಹ್ಮ ವಸ್ತುವಿನಿಂದ ಸೃಷ್ಟಿಯಾಯಿತು ಎನ್ನುತ್ತೇವೆ. ಗೀತೆಯಲ್ಲಿ 'ಮತ್‍ಸ್ಥಾನಿ ಸರ್ವಭೂತಾನಿ' ಎಂಬ ಮಾತು ಬರುತ್ತದೆ. ಹಾಗೆಂದರೆ ಇರುವುದಕ್ಕೆಲ್ಲ ಬ್ರಹ್ಮವೇ ಮೂಲ. ಎಲ್ಲವನ್ನೂ ಬ್ರಹ್ಮವೇ ಆವರಿಸಿಕೊಂಡಿದೆ. ಇದನ್ನೇ ಈಶಾವಾಸ್ಯ ಉಪನಿಷತ್ತು, 'ಈಶಾವಾಸ್ಯಮಿದಗ್‍ಂ ಸರ್ವಂ' ಎನ್ನುತ್ತದೆ. ಬ್ರಹ್ಮವನ್ನು ಬಿಟ್ಟಿದ್ದು, ಬ್ರಹ್ಮದಿಂದ ಹೊರಗೆ ಇರುವುದು ಯಾವುದೂ ಇಲ್ಲ. ಎಲ್ಲಕ್ಕೂ ಒಳಗೂ, ಹೊರಗೂ, ಮೇಲೂ, ಕೆಳಗೂ, ಸುತ್ತಮುತ್ತಲೂ ಬ್ರಹ್ಮವೊಂದೇ ಅಖಂಡವಾಗಿ ವ್ಯಾಪಿಸಿರುವುದರಿಂದ ಹೊರಗೆ, ಒಳಗೆ ಎನ್ನುವುದೆಲ್ಲ ಒಂದೇ.

ಇದನ್ನೇ ಬಸವಣ್ಣನವರು, ವರ್ಣಿಸುವುದು ಹೀಗೆ :

ಎತ್ತೆತ್ತ ನೋಡಿದಡತ್ತತ್ತ ನೀನೆ ದೇವಾ,
ಸಕಲ ವಿಸ್ತಾರದ ರೂಹು ನೀನೆ ದೇವಾ,
‘ವಿಶ್ವತಶ್ಚಕ್ಷು’ ನೀನೆ ದೇವಾ,
‘ವಿಶ್ವತೋಮುಖ’ ನೀನೆ ದೇವಾ,
‘ವಿಶ್ವತೋಬಾಹು’ ನೀನೆ ದೇವಾ,
‘ವಿಶ್ವತ:ಪಾದ’ ನೀನೆ ದೇವಾ, ಕೂಡಲಸಂಗಮದೇವಾ.

ಅಂದರೆ ಇಡೀ ಪ್ರಪಂಚದ ಒಳಹೊರಗಾಗಿ, ತಾನೇ ಅದರ ಸೃಷ್ಟಿಕರ್ತನಾಗಿ, ನಿಯಾಮಕನಾಗಿ ಬ್ರಹ್ಮವಸ್ತು – ಆ ಚೈತನ್ಯ ಒಂದೇ ಆಗಿರುವುದು. ಎಲ್ಲವೂ ಒಂದೇ ಆಗಿರುವಾಗ, ಇಹ ಬೇರೆ ಅಲ್ಲ. ಪರ ಬೇರೆ ಅಲ್ಲ. ಕಾಲಗಳಿಗೆ ಯಾವ ಅರ್ಥವೂ ಇಲ್ಲ, ಯಾಕೆಂದರೆ ಅನಂತತೆಯ ವಿಭಿನ್ನ ಬಿಂದುಗಳವು.

ಈ ಪ್ರಪಂಚದಲ್ಲಿ ಅದೆಷ್ಟು ಪಾತ್ರಗಳು! ಇವುಗಳನ್ನೆಲ್ಲ ಸೂತ್ರದ ಬೊಂಬೆಗಳಂತೆ ಆಡಿಸುವವಳು ಮಾಯೆ. ಆ ಮಾಯೆಯೂ ಬ್ರಹ್ಮವಸ್ತುವಿನ ಸೃಷ್ಟಿಯೇ. ಆದ್ದರಿಂದ ಕಗ್ಗ ಬ್ರಹ್ಮವನ್ನು ಮಾಯೆಯ ಪತಿ ಎಂದು ಕರೆಯುತ್ತದೆ. ಈ ಮಾಯೆ ಪ್ರಪಂಚದ ಹಲವಾರು ಪಾತ್ರಗಳನ್ನು ನಿರ್ವಹಿಸಲು ಅವನಿಗೆ ವಹಿಸುತ್ತಾಳಂತೆ. ಅವನೇ ಬೇರೆ ಬೇರೆ ಪಾತ್ರಗಳಾಗಿ, ತನ್ನ ನಾಟಕದಲ್ಲೇ ಅಭಿನಯಿಸಿ ಪ್ರಪಂಚವನ್ನು ಅದ್ಭುತವಾದ ರಂಗಭೂಮಿಯನ್ನಾಗಿ ಮಾಡಿದ್ದಾನೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !