ಭಾನುವಾರ, ಸೆಪ್ಟೆಂಬರ್ 15, 2019
23 °C
ಹೆಚ್ಚುವರಿ ತೃತೀಯ ಹಂತದ ಚಿಕಿತ್ಸೆ

ಆಯುಷ್ಮಾನ್‌ ಭಾರತ್‌ ಜ್ಯೋತಿ ಸಂಜೀವಿನಿ ವಿಲೀನ

Published:
Updated:

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆರೋಗ್ಯ ಭದ್ರತೆ ಒದಗಿಸುತ್ತಿರುವ ‘ಜ್ಯೋತಿ ಸಂಜೀವಿನಿ’ ಯೋಜನೆಯನ್ನು ‘ಆಯುಷ್ಮಾನ್‌ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿ ಸಂಯೋಜನೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

2014–15ನೇ ಸಾಲಿನಲ್ಲಿ ಜಾರಿಯಾದ ‘ಜ್ಯೋತಿ ಸಂಜೀವಿನಿ’ ಯೋಜನೆಯಡಿ ಹೃದ್ರೋಗ, ಕ್ಯಾನ್ಸರ್, ಮೂತ್ರ ಪಿಂಡದ ಕಾಯಿಲೆ, ನರರೋಗ, ಸುಟ್ಟಗಾಯ, ಗಂಭೀರ ಸ್ವರೂಪದ ಅಪಘಾತಗಳಿಗೆ ಆಸ್ಪತ್ರೆಗಳಲ್ಲಿ  ನಗದು ರಹಿತ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ.

ಅದೇ ರೀತಿ, ಏಳು ಬಗೆಯ ಮಾರಣಾಂತಿಕ ಕಾಯಿಲೆಗಳಿಗೆ ಸಂಬಂಧಿಸಿದಂತೆ 450 ಚಿಕಿತ್ಸಾ ವಿಧಾನ ಮತ್ತು 50 ಮುಂದುವರಿದ ಚಿಕಿತ್ಸಾ ಸೌಲಭ್ಯಗಳು ನಗದುರಹಿತವಾಗಿ ದೊರೆಯುತ್ತಿದೆ. ಇದೀಗ 900 ತೃತೀಯ ಹಂತದ ಚಿಕಿತ್ಸಾ ವಿಧಾನ ಹಾಗೂ 169 ತುರ್ತು ಚಿಕಿತ್ಸಾ ವಿಧಾನಗಳು ಹೆಚ್ಚುವರಿಯಾಗಿ ಸಿಗಲಿವೆ. 

ರಾಜ್ಯ ಸರ್ಕಾರಿ ನೌಕರರ ಜತೆಗೆ ಅವಲಂಬಿತ ಕುಟುಂಬದ ಸದಸ್ಯರು ಕೂಡ ‘ಜ್ಯೋತಿ ಸಂಜೀವಿನಿ’ ಯೋಜನೆಯಡಿ ಸಿಗುವ ಹೆಚ್ಚುವರಿ ಚಿಕಿತ್ಸೆಯ ಲಾಭ ಪಡೆದುಕೊಳ್ಳಬಹುದಾಗಿದೆ. ಗಂಭೀರವಾದ ಏಳು ಚಿಕಿತ್ಸೆಗಳಿಗೂ ಪ್ರತ್ಯೇಕ ಪ್ಯಾಕೇಜ್ ದರವನ್ನು ಸರ್ಕಾರ ನಿಗದಿಪಡಿಸಿದೆ.

2018 ರ ಮಾರ್ಚ್‌ 2ರಂದು ರಾಜ್ಯದಲ್ಲಿ ‘ಆರೋಗ್ಯ ಕರ್ನಾಟಕ’ ಯೋಜನೆ ಜಾರಿಯಾಗಿದ್ದು, ನವೆಂಬರ್ 15, 2018ರಂದು ಕೇಂದ್ರ ಸರ್ಕಾರದ ‘ಆಯುಷ್ಮಾನ್ ಭಾರತ್’ ಯೋಜನೆಯೊಂದಿಗೆ ‘ಆರೋಗ್ಯ ಕರ್ನಾಟಕ’ ಯೋಜನೆ ವಿಲೀನಗೊಂಡು,‘ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ’ ಯೋಜನೆಯಾಗಿ ಬದಲಾಗಿದೆ. ಈ ಯೋಜನೆಯಲ್ಲಿ 1,614 ಪ್ರಥಮ ಹಾಗೂ ದ್ವಿತೀಯ ಹಂತದ ಚಿಕಿತ್ಸಾ ವಿಧಾನ, 900 ತೃತೀಯ ಹಂತದ ಚಿಕಿತ್ಸಾ ವಿಧಾನ, 169 ತುರ್ತು ಚಿಕಿತ್ಸಾ ವಿಧಾನ ಲಭ್ಯವಿದೆ.

Post Comments (+)