ಗುರುವಾರ , ಸೆಪ್ಟೆಂಬರ್ 19, 2019
26 °C
ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅಭಿಮತ

ಭಾರತಕ್ಕೆ ಬೌಲರ್‌ಗಳೇ ಗೆಲುವು ತರಬಲ್ಲರು: ರಾಹುಲ್ ದ್ರಾವಿಡ್

Published:
Updated:
Prajavani

ಮುಂಬೈ (ಪಿಟಿಐ): ಇನಿಂಗ್ಸ್‌ನ ಮಧ್ಯದ ಓವರ್‌ಗಳಲ್ಲಿ ವಿಕೆಟ್ ಗಳಿಸುವ ಬೌಲರ್‌ಗಳು ಭಾರತ ತಂಡದ ಜಯಕ್ಕೆ ಕಾರಣರಾಗುತ್ತಾರೆ. ಏಕೆಂದರೆ ಈ ವಿಶ್ವಕಪ್‌ ಟೂರ್ನಿಯ ಪಂದ್ಯಗಳಲ್ಲಿ ದೊಡ್ಡ ಮೊತ್ತಗಳು ದಾಖಲಾಗುವ ಸಾಧ್ಯತೆ ಹೆಚ್ಚಿದೆ ಎಂದು ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಶುಕ್ರವಾರ ಸ್ಟಾರ್‌ ಸ್ಪೋರ್ಟ್ಸ್‌ ಆಯೋಜಿಸಿದ್ದ ಸ್ಟಾರ್ ರಿ ಇಮಾಜಿನ್ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ‘ಹೋದ ವರ್ಷ ಇಂಗ್ಲೆಂಡ್‌ಗೆ ಪ್ರವಾಸ ತೆರಳಿದ್ದ ತಂಡದಲ್ಲಿರುವ ಕೆಲವು ಆಟಗಾರರು ವಿಶ್ವಕಪ್ ಟೂರ್ನಿಯಲ್ಲಿ ಆಡಲಿದ್ದಾರೆ. ಅವರಿಗೆ ಅಲ್ಲಿಯ ವಾತಾವರಣ ಮತ್ತು ಪರಿಸ್ಥಿತಿಗಳ ಅರಿವು ಇರುತ್ತದೆ. ಈ ವಿಶ್ವಕಪ್‌ನಲ್ಲಿ ರನ್‌ಗಳ ಹೊಳೆ ಹರಿಯಲಿದೆ. ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಬೌಲರ್‌ಗಳು ತಮ್ಮ ಸಂಪೂರ್ಣ ಸಾಮರ್ಥ್ಯ ಒರೆಗೆ ಹಚ್ಚಬೇಕು. ಅಂತಹ ಬೌಲರ್‌ಗಳೇ ಭಾರತ ತಂಡಕ್ಕೆ ಪ್ರಮುಖ ತಿರುವು ನೀಡಬಲ್ಲರು’ ಎಂದರು.

‘ಭಾರತ ತಂಡದಲ್ಲಿ ಅಂತಹ ಬೌಲರ್‌ಗಳು ಇದ್ದಾರೆ. ಜಸ್‌ಪ್ರೀತ್ ಬೂಮ್ರಾ, ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರು ಪ್ರಮುಖ ಹಂತದಲ್ಲಿ ವಿಕೆಟ್ ಪಡೆಯಬಲ್ಲರು. ಜೊತೆಯಾಟಗಳನ್ನು ಮುರಿಯಬಲ್ಲರು. ಇನಿಂಗ್ಸ್‌ನ ಮಧ್ಯದ ಓವರ್‌ಗಳಲ್ಲಿ ಬೌಲರ್‌ಗಳು ಯಶಸ್ವಿಯಾದರೆ, ಎದುರಾಳಿ ತಂಡವು ದೊಡ್ಡ ಮೊತ್ತ ಪೇರಿಸುವುದನ್ನು ತಡೆಯಲು ಸಾಧ್ಯವಿದೆ’ ಎಂದು ರಾಹುಲ್ ಹೇಳಿದರು.

‘ಹೋದ ಎರಡು ವರ್ಷಗಳಲ್ಲಿ ವಿಶ್ವಕಪ್ ಟೂರ್ನಿಗಾಗಿ ಭಾರತವು ಉತ್ತಮ ಸಿದ್ಧತೆ ನಡೆಸಿದೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ ತಂಡವು ಎರಡನೇ ರ‍್ಯಾಂಕ್‌ನಲ್ಲಿದೆ. ಸ್ಥಿರ ಪ್ರದರ್ಶನ ನೀಡುತ್ತಿರುವುದರಿಂದ ಇದು ಸಾಧ್ಯವಾಗಿದೆ.  ಈ ಅವಧಿಯ ಯಶಸ್ಸನ್ನು ಪರಿಗಣಿಸಿದರೆ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಉತ್ತಮ ಸಾಧನೆಯ ಬಗ್ಗೆ ವಿಶ್ವಾಸ ಮೂಡುತ್ತದೆ’ ಎಂದು ನುಡಿದರು.

ಭಾರತ ತಂಡವು ಹೋದ ಮಾರ್ಚ್‌ 13ರಂದು ಅಂತರರಾಷ್ಟ್ರೀಯ ಏಕದಿನ ಪಂದ್ಯ ಆಡಿತ್ತು. ಅದರ ನಂತರ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿಲ್ಲ. ಐಪಿಎಲ್‌ನಲ್ಲಿ ಆಟಗಾರರು ಬೇರೆ ಬೇರೆ ತಂಡಗಳಲ್ಲಿ ಆಡಿದ್ದರು.

‘ಈ ಟೂರ್ನಿಯಲ್ಲಿ ಕಠಿಣ ಪೈಪೋಟಿ ಇರುವುದು ಖಚಿತ. ಎಲ್ಲ ತಂಡಗಳೂ ಉತ್ತಮ ಸಿದ್ಧತೆಯೊಂದಿಗೆ ಕಣಕ್ಕಿಳಿಯಲಿವೆ. ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ವಿನಿಯೋಗಿಸಲು ಪ್ರಯತ್ನಿಸಲಿವೆ. ಭಾರತ ತಂಡವು ಸೆಮಿಫೈನಲ್‌ ಪ್ರವೇಶಿಸಲಿದೆ. ಈ ಹಂತದಲ್ಲಿ ಟೂರ್ನಿಯ ಶ್ರೇಷ್ಠ ನಾಲ್ಕು ತಂಡಗಳು ಇರಲಿವೆ. ನಾಲ್ಕರ ಘಟ್ಟದ ಪೈಪೋಟಿಯು ಅತ್ಯಂತ ರೋಚಕವಾಗಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಭಾರತ ತಂಡದ ವಿರಾಟ್ ಕೊಹ್ಲಿ ಅವರಲ್ಲಿ ಒಂದು ವಿಶೇಷ ಗುಣವಿದೆ. ಅವರು ದಿನದಿಂದ ದಿನಕ್ಕೆ ತಮ್ಮ ಆಟವನ್ನು ಉತ್ಕೃಷ್ಠಗೊಳಿಸುತ್ತಾರೆ. ತಮ್ಮ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಾ ಸಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 49–50 ಶತಕಗಳನ್ನು ಬಾರಿಸಿದ್ದಾರೆ. ಇಷ್ಟು ಶತಕ ಗಳಿಸಲು ಬಹಳಷ್ಟು ಸಮಯ ಬೇಕು ಎಂದು ಅನಿಸುತ್ತಿತ್ತು. ಆದರೆ ಈಗ ನೋಡಿ. ವಿರಾಟ್ ಕೊಹ್ಲಿ ಅವರಿಗೆ ಸಚಿನ್ ದಾಖಲೆ ಸಮ ಮಾಡಲು ಇನ್ನು ಹತ್ತು ಶತಕಗಳು ಮಾತ್ರ ಬೇಕು’ ಎಂದು ಶ್ಲಾಘಿಸಿದರು.

‘ಮಹೇಂದ್ರಸಿಂಗ್ ಧೋನಿ ಅವರಿಗೆ ಇಂತಹ ದೊಡ್ಡ ಟೂರ್ನಿಗಳಲ್ಲಿ ಆಡಿದ ಅಪಾರ ಅನುಭವ ಇದೆ. ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯುವ ಸಾಮರ್ಥ್ಯ ಅವರಿಗೆ ಇದೆ. ತಂಡದ ಆಟಗಾರರನ್ನು ಹುರಿದುಂಬಿಸಿ ವಿಶ್ವಾಸ ತುಂಬಿ ದುಡಿಸಿಕೊಳ್ಳುವ ಪ್ರತಿಭೆ ಅವರಿಗೆ ಇದೆ‘ ಎಂದು ದ್ರಾವಿಡ್ ಮೆಚ್ಚುಗೆ ವ್ಯಕ್ತಪಡಿಸಿದರು.

Post Comments (+)