ಸೋಮವಾರ, ಸೆಪ್ಟೆಂಬರ್ 16, 2019
21 °C
ಹಸಿ ಕಸ– ಒಣ ಕಸ ಪ್ರತ್ಯೇಕ ಟೆಂಡರ್‌ ಕರೆದರೆ ಪಾಲಿಕೆಗೆ ನಷ್ಟ l

ಪಾಲಿಕೆಗೆ ₹ 1,121 ಕೋಟಿ ಹೆಚ್ಚುವರಿ ಹೊರೆ?

Published:
Updated:
Prajavani

ಬೆಂಗಳೂರು: ಪ್ರತಿ ವಾರ್ಡ್‌ನಲ್ಲಿ ಮನೆಮನೆಗಳಿಂದ ಹಸಿ ಕಸ ಮತ್ತು ಒಣ ಕಸ ಸಂಗ್ರಹಿಸುವುದಕ್ಕೆ ಒಟ್ಟಿಗೆ ಟೆಂಡರ್‌ ಕರೆದರೆ ಪಾಲಿಕೆಗೆ ₹ 1,121 ಕೋಟಿ ಹೆಚ್ಚುವರಿ ಹೊರೆ ಉಂಟಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಮನೆ ಮನೆಗಳಿಂದ ಹಸಿ ಕಸ ಸಂಗ್ರಹಿಸುವುದಕ್ಕೆ ಪ್ರತ್ಯೇಕ ಗುತ್ತಿಗೆ ನೀಡುವ ಸಲುವಾಗಿ ಬಿಬಿಎಂಪಿ ಕರೆದಿರುವ ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಪ್ರತಿ ವಾರ್ಡ್‌ನಲ್ಲಿ ಹಸಿ ಕಸ ಮತ್ತು ಒಣ ಕಸ ಸಂಗ್ರಹಿಸುವ ಟೆಂಡರ್‌ಗಳನ್ನು ಒಬ್ಬರೇ ಗುತ್ತಿಗೆದಾರರಿಗೆ ವಹಿಸಬೇಕು ಎಂದು ಪಾಲಿಕೆ ಸದಸ್ಯರು ಒತ್ತಾಯಿಸುವ ಮೂಲಕ ಕೊನೆಯ ಹಂತದಲ್ಲಿ ತಗಾದೆ ತೆಗೆದಿದ್ದಾರೆ.

ಟೆಂಡರ್‌ ಪ್ರಕ್ರಿಯೆಯ ಉಸ್ತುವಾರಿ ಸಲುವಾಗಿ ಮೇಯರ್‌ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯೂ ಹಸಿ ಕಸ ಸಂಗ್ರಹಕ್ಕೆ ಮಾತ್ರ ಟೆಂಡರ್‌ ಕರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದೆ.

ಒಂದು ವೇಳೆ ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿರುವಂತೆ ಹಸಿ ಕಸ, ಒಣ ಕಸ ಸಂಗ್ರಹ ಹಾಗೂ ಭಾರಿ ತ್ಯಾಜ್ಯ ಉತ್ಪಾದಕರಿಂದ ಕಸ ಸಂಗ್ರಹಿಸುವ ಹೊಣೆಯನ್ನೆಲ್ಲ ಒಬ್ಬರೇ ಗುತ್ತಿಗೆದಾರರಿಗೆ ವಹಿಸಿದರೆ ಪಾಲಿಕೆಗೆ ಎಷ್ಟು ಆರ್ಥಿಕ ಹೊರೆ ಉಂಟಾಗುತ್ತದೆ ಎಂಬುದನ್ನು ಪಾಲಿಕೆ ಘನತ್ಯಾಜ್ಯ ವಿಲೇವಾರಿ ವಿಭಾಗದ ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಅವರ ಪ್ರಕಾರ ಈ ನಿರ್ಧಾರವನ್ನು ಅನುಷ್ಠಾನಕ್ಕೆ ತರಬೇಕಾದರೆ ಪಾಲಿಕೆಗೆ ₹1,550.91 ಕೋಟಿ ಬೇಕಾಗುತ್ತದೆ.

ಈಗ ಟೆಂಡರ್‌ ಕರೆದಿರುವ ಪ್ರಕಾರ ಹಸಿ ಕಸವನ್ನು ಮಾತ್ರ ಸಂಗ್ರಹಿಸಿ ವಿಲೇವಾರಿ ಮಾಡುವುದಕ್ಕೆ ಪಾಲಿಕೆಗೆ ವರ್ಷಕ್ಕೆ ₹ 430 ಕೋಟಿ ಮಾತ್ರ ವೆಚ್ಚವಾಗಲಿದೆ.  

ಚಾಲ್ತಿಯಲ್ಲಿರುವ ವ್ಯವಸ್ಥೆಯ ಪ್ರಕಾರ, ಭಾರಿ ಪ್ರಮಾಣದಲ್ಲಿ ತ್ಯಾಜ್ಯ ನಿತ್ಯ ಉತ್ಪಾದಿಸುವವರು ಕಸವನ್ನು ಖಾಸಗಿ ಏಜೆನ್ಸಿಗೆ ನೀಡಬೇಕು ಹಾಗೂ ಅದರ ವಿಲೇವಾರಿಗೆ ತಗಲುವ ವೆಚ್ಚವನ್ನು ಅವರೇ ಭರಿಸಬೇಕು. ದಿನವೊಂದಕ್ಕೆ 10 ಕೆ.ಜಿ.ಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವ ವ್ಯಾಪಾರಿಗಳು, ಹೋಟೆಲ್‌ ಮತ್ತು ರೆಸ್ಟೊರೆಂಟ್‌ಗಳು, 50ಕ್ಕಿಂತ ಹೆಚ್ಚು ಫ್ಲ್ಯಾಟ್‌ಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯ
ಗಳು ಈ ವರ್ಗದಲ್ಲಿ ಬರುತ್ತವೆ. ಇವುಗಳಿಂದ ನಿತ್ಯ 2 ಸಾವಿರ ಟನ್‌ ಕಸ ಉತ್ಪಾದನೆಯಾಗುತ್ತದೆ.

‘ಭಾರಿ ಪ್ರಮಾಣದ ತ್ಯಾಜ್ಯ ವಿಲೇವಾರಿಯ ಹೊಣೆಯನ್ನೂ ಪಾಲಿಕೆಯೇ ನಿಭಾಯಿಸುವುದಾದರೆ ನಿತ್ಯ 500 ಟನ್‌ ಕಸ ವಿಲೇವಾರಿ ಮಾಡಲು ನಾಲ್ಕು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕಾಗುತ್ತದೆ. ಇದಕ್ಕೆ ₹ 500 ಕೋಟಿ ವೆಚ್ಚವಾಗುತ್ತದೆ. ಈ ಘಟಕಗಳ ಜಾಗ ಖರೀದಿಗೆ ₹ 50 ಕೋಟಿ ಬೇಕು. ಅವುಗಳ ಸುತ್ತಲಿನ ಮೂಲಸೌಕರ್ಯ ಅಭಿವೃದ್ಧಿಗೆ ₹ 100 ಕೋಟಿ ಬೇಕು. ಇವುಗಳಿಗೆ ಒಟ್ಟು ₹ 650 ಕೋಟಿಯನ್ನು ಏಕಕಾಲದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾರಿ ಪ್ರಮಾಣದ ತ್ಯಾಜ್ಯ ಉತ್ಪಾದಕರಿಂದ ತ್ಯಾಜ್ಯ ಸಂಗ್ರಹವನ್ನು ನಾವೇ ಮಾಡುವುದಾದರೆ 2000 ಆಟೋ ಟಿಪ್ಪರ್‌ಗಳು ಹೆಚ್ಚುವರಿಯಾಗಿ ಬೇಕಾಗುತ್ತವೆ. ಅವರಿಗೆ ತಿಂಗಳಿಗೆ ₹ 11 ಕೋಟಿಯಂತೆ (ಟಿಪ್ಪರ್‌ ಒಂದಕ್ಕೆ ತಿಂಗಳಿಗೆ ₹ 55 ಸಾವಿರ) ವರ್ಷಕ್ಕೆ ₹132 ಕೋಟಿ ನೀಡಬೇಕು. ಈ ತ್ಯಾಜ್ಯಗಳನ್ನು  ಸಂಸ್ಕರಣಾ ಘಟಕಗಳಿಗೆ ರವಾನಿಸಲು 300 ಕಾಂಪ್ಯಾಕ್ಟರ್‌ಗಳನ್ನು ಹೆಚ್ಚುವರಿಯಾಗಿ ಬೇಕಾಗುತ್ತವೆ. ಇವುಗಳಿಗೆ ತಿಂಗಳಿಗೆ ₹ 8.5 ಕೋಟಿಯಂತೆ (ಕಾಂಪ್ಯಾಕ್ಟರ್‌ ಒಂದಕ್ಕೆ ತಿಂಗಳಿಗೆ ₹ 2.86 ಲಕ್ಷ) ವರ್ಷಕ್ಕೆ ₹102.96 ಕೋಟಿ ತಗಲುತ್ತದೆ. ಇವುಗಳ ಸಂಸ್ಕರಣೆ ಮತ್ತು ಭೂಭರ್ತಿ ಶುಲ್ಕಗಳು ಸೇರಿದರೆ ತಿಂಗಳಿಗೆ ₹ 2.70 ಕೋಟಿಯಂತೆ ವರ್ಷಕ್ಕೆ ₹32.40 ಕೋಟಿ ವೆಚ್ಚವಾಗುತ್ತದೆ. ಭಾರಿ ಪ್ರಮಾಣದ ತ್ಯಾಜ್ಯ ಉತ್ಪಾದಕರಿಂದ ಪಡೆಯುವ ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ವರ್ಷಕ್ಕೆ ಒಟ್ಟು ₹ 267.36 ಕೋಟಿ ಹೊರೆ ಹೊರಬೇಕಾಗುತ್ತದೆ’ ಎಂದು ಅವರು ವಿವರಿಸಿದರು.

 

Post Comments (+)