ಶನಿವಾರ, ಆಗಸ್ಟ್ 15, 2020
26 °C

ಮೋದಿ–ಮಹಾಮೈತ್ರಿಯಲ್ಲಿ ಯಾರಿಗೆ ಮೇಲುಗೈ?

ಆನಂದ್‌ ಮಿಶ್ರಾ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊನೆಯ ಹಂತದಲ್ಲಿ 59 ಕ್ಷೇತ್ರಗಳ ಜನರು ಹಕ್ಕು ಚಲಾಯಿಸುವುದರೊಂದಿಗೆ ಎರಡು ತಿಂಗಳ ಸುದೀರ್ಘ ಮತದಾನ ಪ್ರಕ್ರಿಯೆ ಭಾನುವಾರಕ್ಕೆ ಕೊನೆಯಾಗಿದೆ. ಮತ ಎಣಿಕೆ ಗುರುವಾರ ನಡೆಯಲಿದೆ. ಮೋದಿ ಮತ್ತು ಮಹಾಮೈತ್ರಿಯಲ್ಲಿ ಈ ಬಾರಿ ಜನರನ್ನು ಪ್ರಭಾವಿಸಿದ ಅಂಶ ಯಾವುದು ಎಂಬುದಕ್ಕೆ ಅಂದೇ ಉತ್ತರ ಸಿಗಲಿದೆ.

ಈತನಕದ ಅಂದಾಜಿನ ಪ್ರಕಾರ, ಯಾವುದೇ ಪಕ್ಷಕ್ಕೆ ಸರಳ ಬಹುಮತ ಸಿಗುವ ಸಾಧ್ಯತೆ ಇಲ್ಲ. ಹಾಗಾಗಿ, ಮುಂದಿನ ಸರ್ಕಾರದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಭಾವ ದಟ್ಟವಾಗಿ ಇರಲಿದೆ. 

ಉತ್ತರ ಪ್ರದೇಶ (80 ಕ್ಷೇತ್ರಗಳು), ಬಿಹಾರ (40), ಮಹಾರಾಷ್ಟ್ರ (48), ತಮಿಳುನಾಡು (39) ಮತ್ತು ಜಾರ್ಖಂಡ್‌ (14) ರಾಜ್ಯಗಳಲ್ಲಿ ಹಣಾಹಣಿ ಮೈತ್ರಿಕೂಟಗಳ ನಡುವೆಯೇ ಇದೆ. ಈ ರಾಜ್ಯಗಳಲ್ಲಿಯೇ 221 ಕ್ಷೇತ್ರಗಳಿವೆ. 

ಕೊನೆಯ ಹಂತದ ಮತದಾನ ಪೂರ್ಣಗೊಳ್ಳುವ ಮುನ್ನವೇ ವಿರೋಧ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ರಾಜ್ಯಗಳಿಂದ ರಾಜ್ಯಗಳಿಗೆ ಸುತ್ತಾಟ ಆರಂಭಿಸಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಹೊರಗೆ ಇರುವ ಪಕ್ಷಗಳ ಮುಖಂಡರ ಜತೆಗೆ ಮಾತುಕತೆ ನಡೆಸಿದ್ದಾರೆ. ಎನ್‌ಡಿಎಗೆ ಸ್ಪಷ್ಟ ಬಹುಮತ ಬಾರದೇ ಇದ್ದರೆ ಸರ್ಕಾರ ರಚಿಸುವ ಕಾರ್ಯತಂತ್ರ ರೂಪಿಸುವುದು ನಾಯ್ಡು ಭೇಟಿಗಳ ಹಿಂದಿನ ಉದ್ದೇಶ. 

ಬಿಜೆಪಿ ನಾಯಕರಲ್ಲಿ ಹೆಚ್ಚು ಆತ್ಮವಿಶ್ವಾಸ ಇದ್ದಂತೆ ತೋರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥ ಮತ್ತು ಬದರೀನಾಥಕ್ಕೆ ಎರಡು ದಿನಗಳ ತೀರ್ಥಯಾತ್ರೆ ಮಾಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ತವರು ರಾಜ್ಯ ಗುಜರಾತ್‌ನ ಸೋಮನಾಥ ದೇವಾಲಯಕ್ಕೆ ಹೋಗಿದ್ದಾರೆ. ಆದರೆ, ವಿರೋಧ ಪಕ್ಷಗಳ ಮುಖಂಡರು ಮಾತ್ರ ಬೆನ್ನುಬೆನ್ನಿಗೆ ಸಭೆಗಳನ್ನು ನಡೆಸುತ್ತಿದ್ದಾರೆ. 

2014ರ ಫಲಿತಾಂಶದ ಪುನರಾವರ್ತನೆಯಾದರೆ ದೇಶದಲ್ಲಿ ಮೋದಿ ಅಲೆ ಇದೆ ಎಂಬುದು ಸಾಬೀತಾಗುತ್ತದೆ. ಮೋದಿ ಮತ್ತು ಹಿಂದುತ್ವದ ಸಂಯೋಜನೆಯಾದ ‘ಮೋದಿತ್ವ’ಕ್ಕೆ ದೊರೆತ ಗೆಲುವಾಗುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಹಿಂದುತ್ವವನ್ನು ಮುಖ್ಯವಾಗಿ ಇರಿಸಿಕೊಂಡು ಬಿಜೆಪಿ ಪ್ರಚಾರ ಮಾಡಿದೆ. ಅಭಿವೃದ್ಧಿಯ ಬಗ್ಗೆ ಆರಂಭದಲ್ಲಿ ಮಾತನಾಡಿದರೂ ಮತ್ತೆ ಈ ವಿಚಾರ ಮುಖ್ಯವಾಗಲೇ ಇಲ್ಲ. ಮಾಲೆಗಾಂವ್‌ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರನ್ನು ಕಾಂಗ್ರೆಸ್ ಮುಖಂಡ ದಿಗ್ವಿಜಯ್‌ ಸಿಂಗ್‌ ವಿರುದ್ಧ ಭೋಪಾಲ್‌ನಿಂದ ಸ್ಪರ್ಧೆಗಿಳಿಸುವ ಮೂಲಕ ಹಿಂದುತ್ವವೇ ಮುಖ್ಯ ವಿಚಾರ ಎಂಬುದನ್ನು ಬಿಜೆಪಿ ಒತ್ತಿ ಹೇಳಿದೆ. 

ಚುನಾವಣೆಗೆ ಮೊದಲು ಮತ್ತು ಚುನಾವಣೆಯ ಬಳಿಕ ಮಹಾಮೈತ್ರಿಕೂಟ ಕಟ್ಟುವ ಬಿಜೆಪಿ ವಿರೋಧಿ ಪಕ್ಷಗಳ ಯತ್ನವನ್ನು ‘ಮಹಾಕಲಬೆರಕೆ’ ಎಂದು ಮೋದಿಯವರೇ ಹಂಗಿಸಿದ್ದಾರೆ. ಆದರೆ, ಬಿಜೆಡಿ ಮುಖ್ಯಸ್ಥ, ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರನ್ನು ಹೊಗಳುವ ಮೂಲಕ ‘ಸಮಾನಮನಸ್ಕ’ ಪಕ್ಷಗಳನ್ನು ಎನ್‌ಡಿಎಗೆ ಸೇರಿಸಿಕೊಳ್ಳುವ ಇಂಗಿತ ವ್ಯಕ್ತಪಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು