ಮನುಷ್ಯರ ಕೃತ್ರಿಮ ನಡತೆ

ಸೋಮವಾರ, ಜೂನ್ 17, 2019
27 °C

ಮನುಷ್ಯರ ಕೃತ್ರಿಮ ನಡತೆ

Published:
Updated:

ಭಗವಾನ್ ಬುದ್ಧ ಚೇತವನದಲ್ಲಿ ವಿಹಾರ ಮಾಡುತ್ತಿದ್ದಾಗ, ಒಬ್ಬ ಶಿಷ್ಯ, ಬುದ್ಧ-ಶಾಸನದಲ್ಲಿ, ಧರ್ಮಾಚರಣೆಯಲ್ಲಿ ಆಸಕ್ತಿಯನ್ನು ಕಳೆದುಕೊಂಡ ವಿಷಯ ಅವನ ಗಮನಕ್ಕೆ ಬಂದಿತು. ಆತನನ್ನು ಕರೆದು ಮಾತನಾಡಿಸಿದಾಗ ಆತ ತಾನು ಉತ್ಯಂಠಿತನಾದ ಬಗ್ಗೆ ಒಪ್ಪಿಕೊಂಡ. ಇದಕ್ಕೆ ಕಾರಣವೇನು ಎಂದು ಕೇಳಿದಾಗ ತಾನು ಕಾಮಾಸಕ್ತನಾಗಿರುವುದರಿಂದ ಧರ್ಮಾಚರಣೆಯಲ್ಲಿ ಮನ ನಿಲ್ಲುತ್ತಿಲ್ಲ ಎಂದ. ಆಗ ಬುದ್ಧ, ‘ಅತಿಯಾದ ಕಾಮಾಸಕ್ತಿಯನ್ನು ಪ್ರಾಣಿಗಳೂ ನಿಂದಿಸುತ್ತವೆ’ ಎಂದು ತಿಳಿಸಿ ಒಂದು ಕಥೆ ಹೇಳಿದ.

ಬ್ರಹ್ಮದತ್ತ ವಾರಾಣಸಿಯ ರಾಜನಾಗಿದ್ದಾಗ ಬೋಧಿಸತ್ವ ಒಂದು ವಾನರ ಯೋನಿಯಲ್ಲಿ ಜನಿಸಿ ಹಿಮಾಲಯದಲ್ಲಿ ವಾಸವಾಗಿದ್ದ. ಒಂದು ಬಾರಿ ಬೇಟೆಗಾರನೊಬ್ಬ ದೊಡ್ಡ ಕೋತಿಯನ್ನು ಹಿಡಿದು ವಾರಾಣಸಿಯ ರಾಜನ ಅರಮನೆಯಲ್ಲಿ ಮಾರಿದ. ಕೋತಿ ಅರಮನೆಯಲ್ಲಿಯೇ ಬಹಳ ವರ್ಷಗಳವರೆಗೆ ಉಳಿದುಬಿಟ್ಟಿತು. ಅರಮನೆಯ ಜನರೊಂದಿಗೆ ವಿಹಾರ ಮಾಡುತ್ತ, ಅವರ ನಡವಳಿಕೆಗಳನ್ನು ನೋಡುತ್ತ ನೋಡುತ್ತ ತಾನೂ ಮನುಷ್ಯರ ಹಾಗೆಯೇ ವ್ಯವಹಾರ ಮಾಡತೊಡಗಿತು. ಅದು ಅತ್ಯಂತ ಸಭ್ಯವಾಗಿ ವರ್ತಿಸುತ್ತಿರುವುದನ್ನು ಕಂಡ ರಾಜ, ‘ಪಾಪ, ಈ ಪ್ರಾಣಿ ಏಕಾಂಗಿಯಾಗಿದೆ, ತನ್ನೆಲ್ಲ ಬಂಧುಗಳಿಂದ ದೂರವಾಗಿರುವುದರಿಂದ ದುಃಖಿತನಾಗಿ ತನ್ನ ಮೂಲ ಚಂಚಲ ಸ್ವಭಾವವನ್ನೇ ಕಳೆದುಕೊಳ್ಳುತ್ತಿದೆ. ಆದ್ದರಿಂದ ಇದನ್ನು ಎಲ್ಲಿಂದ ತಂದಿದ್ದಿರೋ ಅಲ್ಲಿಗೇ ಮರಳಿ ಬಿಟ್ಟು ಬನ್ನಿ’ ಎಂದು ವನಚರಿಗಳಿಗೆ ಆಜ್ಞೆ ಮಾಡಿದ. ಅದರಂತೆ ಬೇಟೆಗಾರರು ಅದನ್ನು ತಂದು ಹಿಮಾಲಯದ ಅದೇ ಸ್ಥಳದಲ್ಲಿ ಬಿಟ್ಟರು.

ಬೋಧಿಸತ್ವ ಕೋತಿ ಮರಳಿ ಬಂದ ಸುದ್ದಿಯನ್ನು ಕೇಳಿ ಅದನ್ನು ಕಾಣುವ ಅಭಿಲಾಷೆಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಎಲ್ಲ ಕೋತಿಗಳು ಓಡಿಬಂದವು. ಅವು ಈ ಕೋತಿಯನ್ನು ಸುತ್ತುವರಿದು, ‘ಸ್ನೇಹಿತ, ಇಷ್ಟು ದೀರ್ಘಕಾಲ ನೀನು ಎಲ್ಲಿದ್ದೆ? ನೀನು ಮರಳಿ ಬರುವುದಿಲ್ಲವೆಂದು ನಾವೆಲ್ಲ ಭಾವಿಸಿದ್ದೆವು’ ಎಂದವು. ‘ನಾನು ವಾರಾಣಸಿಯಲ್ಲಿ ರಾಜನ ಅರಮನೆಯಲ್ಲಿ ಇದ್ದೆ’ ಎಂದಿತು ಬೋಧಿಸತ್ವ ಕೋತಿ.

‘ಅಲ್ಲಿಂದ ಹೇಗೆ ಪಾರಾಗಿ ಬಂದೆ?’
‘ನಾನು ಅರಮನೆಯಲ್ಲಿ ಮನುಷ್ಯರ ನಡವಳಿಕೆಗಳನ್ನು ನೋಡುತ್ತ ನನ್ನ ಸ್ವಭಾವವನ್ನು ಕಷ್ಟಪಟ್ಟು ಬದಲಿಸಿಕೊಂಡೆ. ನನ್ನ ನಡತೆಯನ್ನು ಮೆಚ್ಚಿ ರಾಜ ನನಗೆ ಬಿಡುಗಡೆ ನೀಡಿದ’.
‘ನಮಗೂ ಈ ಮನುಷ್ಯರ ನಡತೆ, ವ್ಯವಹಾರಗಳನ್ನು ತಿಳಿಯುವ ಆಸೆ. ನೀನೀಗ ಅದನ್ನೆಲ್ಲ ಕಂಡು ಬಂದವನಾದ್ದರಿಂದ ನಮಗೂ ತಿಳಿಸು’ ಎಂದು ಕೇಳಿಕೊಂಡವು. 

‘ದಯವಿಟ್ಟು ಅದನ್ನು ಕೇಳಬೇಡಿ. ಅವರ ನಡತೆಯನ್ನು ಕಂಡು ನನಗೆ ಅಸಹ್ಯವಾಗುತ್ತಿತ್ತು. ಹೇಗೋ ಕಷ್ಟಪಟ್ಟು ತಡೆದುಕೊಂಡೆ’ ಎಂದಿತು ಬೋಧಿಸತ್ವ ಕೋತಿ.

ಆದರೆ ಅವರು ದುಂಬಾಲು ಬಿದ್ದಾಗ ನಿರ್ವಾಹವಿಲ್ಲದೆ ಹೇಳಿತು, ‘ನಾವೆಲ್ಲ ಮನುಷ್ಯರನ್ನು ನಮಗಿಂತ ದೊಡ್ಡವರು ಎಂದು ಭಾವಿಸುತ್ತೇವಲ್ಲವೇ? ಆದರೆ ಅವರಷ್ಟು ಕೃತ್ರಿಮರು ಮತ್ತಾರೂ ಇಲ್ಲ. ಅವರು ಇರುವುದೇ ಒಂದು, ತೋರುವುದೇ ಮತ್ತೊಂದು. ಹೆಣ್ಣುಗಳಿಗೆ ಬಂಗಾರದ ಹುಚ್ಚು. ಗಂಡುಗಳಿಗೆ ಹೆಣ್ಣಿನ ಹುಚ್ಚು. ಎಲ್ಲ ವರ್ಗದ ಜನರು ಎಲ್ಲರೂ ಎಲ್ಲವನ್ನೂ ನನ್ನದು ನನ್ನದು ಎಂದು ಸಂಭ್ರಮಪಡುತ್ತಾರೆ. ಯಾವ ವಸ್ತುವೂ ಶಾಶ್ವತವಾಗಿಲ್ಲವೆಂಬ ಕಲ್ಪನೆ ಅವರಿಗಿಲ್ಲ. ಪ್ರಪಂಚದ ಅನಿಶ್ಚಿತತೆಯನ್ನು ತಿಳಿಯದೆ ವಸ್ತುಗಳಿಗಾಗಿ, ಹೆಣ್ಣುಗಳಿಗಾಗಿ ಹೋರಾಡಿ ಪ್ರಾಣ ಕಳೆದುಕೊಳ್ಳುತ್ತಾರೆ. ಇನ್ನು ಅವರ ಮೂರ್ಖತನದ ಬಗ್ಗೆ ಹೇಳುತ್ತೇನೆ ಕೇಳಿ’.

ಉಳಿದ ಕೋತಿಗಳು ತಮ್ಮ ಕಿವಿಗಳನ್ನು ಮುಚ್ಚಿಕೊಂಡವು, ‘ಮುಂದೇನೂ ಹೇಳಬೇಡ. ಕೇಳಲು ಯೋಗ್ಯವಲ್ಲದ ಈ ಮನುಷ್ಯರ ನಡತೆಗಳನ್ನು ಕೇಳಿ ನಮಗೆ ಅಸಹ್ಯವಾಗುತ್ತದೆ. ನಾವೇ ಎಷ್ಟೋ ಪಾಲು ವಾಸಿ’ ಎಂದು ಅಲ್ಲಿಂದ ಹೋಗಿಬಿಟ್ಟವು.

ಇಂದು ಭೋಗಜೀವನದ ತುತ್ತತುದಿಯಲ್ಲಿರುವ ನಮ್ಮನ್ನು ಕಂಡರೆ ಕಾಡು ಕೋತಿಗಳು ಏನೆಂದುಕೊಳ್ಳುತ್ತವೋ? 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !