ಮತ ಎಣಿಕೆ ಕರ್ತವ್ಯದಲ್ಲಿ ಎಚ್ಚರವಿರಲಿ: ಜಿಲ್ಲಾಧಿಕಾರಿ

ಭಾನುವಾರ, ಜೂನ್ 16, 2019
28 °C
ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ನಿಯೋಜಿತ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ

ಮತ ಎಣಿಕೆ ಕರ್ತವ್ಯದಲ್ಲಿ ಎಚ್ಚರವಿರಲಿ: ಜಿಲ್ಲಾಧಿಕಾರಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಾಗರೂಕತೆಯಿಂದ ಕಾರ್ಯನಿರ್ವಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹೇಳಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಮತ ಎಣಿಕೆಗೆ ನಿಯೋಜಿತ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.

‘ಮೇ 23 ರಂದು ನಾಗಾರ್ಜುನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಣಿಕೆ ಕಾರ್ಯ ನಡೆಯಲ್ಲಿದೆ. ಅದಕ್ಕಾಗಿ ಈಗಾಗಲೇ ಮತ ಎಣಿಕೆ ಮೇಲ್ವಿಚಾರಕರು, ಸಹಾಯಕ ಅಧಿಕಾರಿಗಳು ಹಾಗೂ ವೀಕ್ಷಕರನ್ನು ನೇಮಕ ಮಾಡಲಾಗಿದೆ. ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಂದು ಬೆಳಿಗ್ಗೆ 6ರ ಒಳಗೆ ಮತ ಎಣಿಕೆ ಕೇಂದ್ರದಲ್ಲಿ ಹಾಜರಿರಬೇಕು’ ಎಂದು ತಿಳಿಸಿದರು.

‘ಪ್ರತಿಯೊಂದು ಮತವು ತನ್ನದೇ ಆದ ಮೌಲ್ಯವನ್ನು ಹೊಂದಿರುವುದರಿಂದ ಅಧಿಕಾರಿ ಹಾಗೂ ಸಿಬ್ಬಂದಿ ಮತ ಎಣಿಕೆ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆ ಹಾಗೂ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಪ್ರತಿಯೊಂದು ವಿಷಯಕ್ಕೂ ಚುನಾವಣಾ ಆಯೋಗ ನಿರ್ದಿಷ್ಟ ಸೂಚನೆ ನೀಡಿರುವುದರಿಂದ ನಿಯೋಜಿತ ಸಿಬ್ಬಂದಿ ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದರು.

‘ವೇಗವಾಗಿ ಹಾಗೂ ಆತುರದಿಂದ ಮತ ಎಣಿಕೆ ಕಾರ್ಯ ಮಾಡುವ ಅಗತ್ಯವಿಲ್ಲ. ಇದರಿಂದ ಗೊಂದಲ ಉಂಟಾಗುವ ಸಂಭವ ಹೆಚ್ಚಾಗಿರುತ್ತದೆ. ಮತ ಎಣಿಕೆ ಕಾರ್ಯ ಅತ್ಯಂತ ನಿಖರತೆ ಹಾಗೂ ಸಮರ್ಪಕವಾಗಿ ಮಾಡುವುದರಿಂದ ಮಾತ್ರ ಉತ್ತಮ ನಿರ್ವಹಣೆ ಸಾಧ್ಯವಾಗಲಿದೆ’ ಎಂದು ಹೇಳಿದರು.

‘ಯಲಹಂಕ ವಿಧಾನಸಭಾ ಕ್ಷೇತ್ರ ಮತ ಎಣಿಕೆ ಕೊಠಡಿಯಲ್ಲಿ 14 ಟೇಬಲ್‌ಗಳು, ಇಬ್ಬರೂ ಸಹಾಯಕ ಚುನಾವಣಾ ಅಧಿಕಾರಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಉಳಿದ 7 ವಿಧಾನಸಭಾ ಕ್ಷೇತ್ರಗಳಿಗೆ ತಲಾ 10 ಟೇಬಲ್‌ಗಳು, ಒಬ್ಬ ಅಧಿಕಾರಿ ವ್ಯವಸ್ಥೆ ಮಾಡಲಾಗಿದೆ. ಜತೆಗೆ ತಲಾ ನಾಲ್ಕು ಅಂಚೆ ಮತಗಳ ಎಣಿಕೆ ಟೇಬಲ್‌ಗಳು ಇಟ್ಟು, ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗುತ್ತದೆ. ಸಹಾಯಕ ಅಧಿಕಾರಿಗೆ ಒಂದು ಟೇಬಲ್ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಮತ ಎಣಿಕೆ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ತರಬೇಕು. ಯಾವುದೇ ಕಾರಣಕ್ಕೂ ಸಿಬ್ಬಂದಿ ಮತ್ತು ಏಜೆಂಟರು ಮೊಬೈಲ್ ತರಬಾರದು. ಮೇ 23 ರಂದು ಬೆಳಿಗ್ಗೆ 7.30ಕ್ಕೆ ಮತ ಎಣಿಕೆ ಕಾರ್ಯಕ್ಕೆ ನೀಯೋಜಿಸಿರುವ ಅಧಿಕಾರಿಗಳು, ಸಿಬ್ಬಂದಿ ತಮ್ಮ ಟೇಬಲ್ ಹತ್ತಿರ ಕಡ್ಡಾಯವಾಗಿ ಕುಳಿತುಕೊಳ್ಳಬೇಕು. ಬೆಳಿಗ್ಗೆ 8ಕ್ಕೆ ಮತ ಎಣಿಕೆ ಕಾರ್ಯ ಆರಂಭಿಸಬೇಕು’ ಎಂದರು.

ರಾಜ್ಯ ಮಟ್ಟದ ಮಾಸ್ಟರ್ ತರಬೇತುದಾರ ಸಿ.ಎಸ್. ಶಂಕರ್ ರೆಡ್ಡಿ ಅವರು ಮತ ಎಣಿಕೆಗೆ ನೇಮಕಗೊಂಡ ಮೇಲ್ವಿಚಾರಕರು, ಸಹಾಯಕರು, ವೀಕ್ಷಕರು, ಸಿಬ್ಬಂದಿಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ, ಹಾಗೂ ಸಹಾಯಕ ಚುನಾವಣಾಧಿಕಾರಿ ಸಿ.ಎಸ್. ಶಂಕರ್‌ ರೆಡ್ಡಿ ಉಪಸ್ಥಿತರಿದ್ದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !