ಸೇವಾ ಶುಲ್ಕಕ್ಕೆ ಖಾಸಗಿ ವೈದ್ಯರ ವಿರೋಧ

ಬುಧವಾರ, ಜೂನ್ 19, 2019
26 °C
ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಸ ಉತ್ಪಾದಿಸುವವರಿಗೆ ಜವಾಬ್ದಾರಿ ತರುವ ನಿಟ್ಟಿನಲ್ಲಿ ನಗರಸಭೆಯ ಹೊಸ ಚಿಂತನೆ

ಸೇವಾ ಶುಲ್ಕಕ್ಕೆ ಖಾಸಗಿ ವೈದ್ಯರ ವಿರೋಧ

Published:
Updated:
Prajavani

ಚಿಕ್ಕಬಳ್ಳಾಪುರ: ನಗರಸಭೆಯು ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಸ ಉತ್ಪಾದಿಸುವವರಿಗೆ ಘನ ತ್ಯಾಜ್ಯ ನಿರ್ವಹಣೆ ನಿಯಮ 2016ರ ಅಡಿ ಸೇವಾ ಶುಲ್ಕ ವಿಧಿಸಲು ಮುಂದಾಗಿರುವುದಕ್ಕೆ ನಗರದ ಖಾಸಗಿ ಆಸ್ಪತ್ರೆಗಳ ವೈದ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ನಗರಸಭೆಯಲ್ಲಿ ಮಂಗಳವಾರ ನಡೆದ ಖಾಸಗಿ ಆಸ್ಪತ್ರೆ, ಹೊಟೇಲ್‌, ಬಾರ್‌, ರೆಸ್ಟೋರೆಂಟ್‌, ಕಲ್ಯಾಣ ಮಂಟಪ ಮಾಲೀಕರ ಸಭೆಯಲ್ಲಿ ಸೇವಾ ಶುಲ್ಕ ವಿಧಿಸುವ ಪ್ರಸ್ತಾವಕ್ಕೆ ಖಾಸಗಿ ವೈದ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನಗರದ ಮಂಜುನಾಥ್‌ ಆಸ್ಪತ್ರೆ ಮಾಲೀಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್‌, ‘ನಗರದ ಸ್ವಚ್ಛತೆ, ಆರೋಗ್ಯ, ರಸ್ತೆ, ಕುಡಿಯುವ ನೀರು, ಒಳಚರಂಡಿ ನಿರ್ವಹಣೆ ನೋಡಿಕೊಳ್ಳುವುದು ನಗರ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಅದಕ್ಕಾಗಿ ಸಾರ್ವಜನಿಕರು ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಅನುದಾನ ನೀಡುತ್ತವೆ. ಆದ್ದರಿಂದ ತ್ಯಾಜ್ಯದ ನೆಪದಲ್ಲಿ ಸೇವಾ ಶುಲ್ಕ ವಿಧಿಸುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮೂಲಸೌಕರ್ಯ ಒದಗಿಸುವುದು ನಗರ ಸ್ಥಳೀಯ ಸಂಸ್ಥೆಗಳ ಕರ್ತವ್ಯ. ಅದಕ್ಕಾಗಿ ಶುಲ್ಕ ಪಡೆಯುವುದು ಅನೈತಿಕ ಕ್ರಮ ಎಂದು ತಮಿಳುನಾಡು ಗ್ರಾಹಕರ ವೇದಿಕೆ ಆದೇಶ ನೀಡಿದೆ. ಇಂತಹದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ನಾಲ್ಕು ಪ್ರಕರಣಗಳು ವಿಚಾರಣೆ ಬಾಕಿ ಇದೆ. ಆಸ್ಪತ್ರೆಗಳು ಸೇವಾ ಕ್ಷೇತ್ರಗಳ ವ್ಯಾಪ್ತಿಗೆ ಬರುತ್ತವೆ. ಆದ್ದರಿಂದ ಆಸ್ಪತ್ರೆಗಳಿಗೆ ಸೇವಾ ಶುಲ್ಕ ವಿಧಿಸುವ ನಿರ್ಧಾರ ಕೈಬಿಡಬೇಕು’ ಎಂದು ಆಗ್ರಹಿಸಿದರು.

ಜೀವನ್ ಆಸ್ಪತ್ರೆಯ ಡಾ.ಐ.ಎಸ್‌.ರಾವ್ ಮಾತನಾಡಿ, ‘ನಮ್ಮ ರಾಜ್ಯದಲ್ಲಿ ಮಾತ್ರ ಕೇಂದ್ರ ಸರ್ಕಾರ ಪ್ರಾಯೋಜಿತ ಆಯುಷ್ಮಾನ್ ಭಾರತ ಯೋಜನೆಯ ಲಾಭ ಬರೀ ಸರ್ಕಾರಿ ಆಸ್ಪತ್ರೆಗಳಿಗೆ ದೊರೆಯುವಂತೆ ಸೀಮಿತ ಮಾಡಲಾಗಿದೆ. ಉಚಿತವಾಗಿ ಎಲ್ಲ ಸರ್ಕಾರಿ ಸೌಲಭ್ಯಗಳು ಹೊಂದಿರುವ ಆಸ್ಪತ್ರೆಗಳು, ವೈದ್ಯರಿಗೆ ಸರ್ಕಾರ ಹಣ ಹರಿದು ಹೋಗುತ್ತಿದೆ. ಆದ್ದರಿಂದ ಬೇಕಾದರೆ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಶುಲ್ಕ ವಿಧಿಸಿ ವಸೂಲಿ ಮಾಡಲಿ’ ಎಂದು ಸಲಹೆ ನೀಡಿದರು.

‘ನಾವು ಆಸ್ಪತ್ರೆಯಲ್ಲಿ ಉತ್ಪಾದನೆಯಾಗುವ ಜೈವಿಕ ತ್ಯಾಜ್ಯ ವಿಲೇವಾರಿಗೆ ಖಾಸಗಿ ಕಂಪನಿಗಳ ಸಹಕಾರ ಪಡೆದಿದ್ದೇವೆ. ಇನ್ನು ನಗರಸಭೆ ವಾಹನಗಳಿಗೆ ನೀಡುವುದು ಸಾರ್ವಜನಿಕರಿಂದ ಉತ್ಪಾದನೆಯಾದ ತ್ಯಾಜ್ಯ. ಅದನ್ನು ತೆಗೆದುಕೊಂಡು ಹೋಗುವುದು ನಗರಸಭೆ ಕರ್ತವ್ಯ. ಅದಕ್ಕೆ ನಾವು ಶುಲ್ಕ ಕಟ್ಟಬೇಕು ಎನ್ನುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

‘ನಗರಸಭೆ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ನಗರದ ಅನೇಕ ಕಡೆಗಳಲ್ಲಿ ನೀರು ಹರಿಯದೇ ಅಧ್ವಾನ ಸ್ಥಿತಿ ನಿರ್ಮಾಣವಾಗಿದೆ. ಅದರಿಂದ ಅನಾರೋಗ್ಯ ಮನೆ ಮಾಡುತ್ತಿದೆ. ಈ ಬಗ್ಗೆ ಅಧಿಕಾರಿಗಳು ಮೊದಲು ಗಮನ ಹರಿಸಲಿ’ ಎಂದು ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಘ (ಐಎಂಎ) ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ವೆಂಕಟಾಚಲಪತಿ ಮಾತನಾಡಿ, ‘ಇದು ತುಂಬಾ ಮಹತ್ವದ ನಿರ್ಧಾರ. ಹೀಗಾಗಿ ಇದನ್ನು ಆಡಳಿತ ಮಂಡಳಿ ಇಲ್ಲದೆ ಅಧಿಕಾರಿಗಳು ತೆಗೆದುಕೊಳ್ಳುವುದು ಬೇಡ. ಚುನಾವಣೆ ಮುಗಿದು ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವವರೆಗೆ ಅಧಿಕಾರಿಗಳು ಕಾಯಿರಿ. ಬಳಿಕ ಆಡಳಿತ ಮಂಡಳಿ ಸಭೆ ತೆಗೆದುಕೊಳ್ಳುವ ತೀರ್ಮಾನದಂತೆ ಕ್ರಮಕ್ಕೆ ಮುಂದಾಗಿ’ ಎಂದು ಹೇಳಿದರು.

ಈ ವೇಳೆ ಮಾತನಾಡಿದ ನಗರಸಭೆ ಪರಿಸರ ಅಧಿಕಾರಿ ಶಿವಶಂಕರ್‌, ‘ನಗರದ ಸ್ವಚ್ಛತೆ ಕಾಯ್ದುಕೊಂಡು ಪರಿಸರ ಸಂರಕ್ಷಣೆ ಮಾಡುವ ಜತೆಗೆ ಮುಂದಿನ ಪೀಳಿಗೆಗಾಗಿ ಯೋಜನಾಬದ್ಧವಾಗಿ ನಗರ ಅಭಿವೃದ್ಧಿ ಮಾಡುವುದು ನಗರಸಭೆ ಕರ್ತವ್ಯ. ಆದ್ದರಿಂದ, ನಗರದ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದ ಕಸ ಉತ್ಪಾದಕರಿಗೂ ಜವಾಬ್ದಾರಿ ಬರಲಿ ಎಂಬ ಉದ್ದೇಶಕ್ಕೆ ಸೇವಾ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

‘ಇನ್ನು ಮುಂದೆ ಪ್ರತಿಯೊಬ್ಬರೂ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡಬೇಕು. ಗ್ರಾಹಕರಿಗೆ ಕೂಡ ವರ್ತಕರು ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು. ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನ ಕಸ ಉತ್ಪಾದನೆಯಾಗುತ್ತಿದೆ. ಜತೆಗೆ ನಿಷೇಧಿತ ಪ್ಲಾಸ್ಟಿಕ್ ಗ್ಲಾಸ್ ಮತ್ತು ಬ್ಯಾಗ್‌ನ್ನು ಕೆಲವರು ಕದ್ದುಮುಚ್ಚಿ ಬಳಕೆ ಮಾಡುತ್ತಿದ್ದಾರೆ. ಅದನ್ನು ಕೂಡಲೇ ನಿಲ್ಲಿಸಬೇಕು’ ಎಂದರು.

‘ಚಿತ್ರಮಂದಿರದವರು ನಗರದಲ್ಲಿ ಎಲ್ಲೆಂದರಲ್ಲಿ ಪೋಸ್ಟರ್‌ಗಳನ್ನು ಅಂಟಿಸಿ, ಗಲೀಜು ಮಾಡುವುದು ನಿಲ್ಲಿಸಬೇಕು. ನಿಗದಿತ ಸ್ಥಳಗಳಲ್ಲಿ ಮಾತ್ರ ಪೋಸ್ಟರ್‌ ಅಂಟಿಸಬೇಕು. ನಗರಸಭೆ ವಾಹನಗಳಿಗೇ ತ್ಯಾಜ್ಯ ನೀಡಬೇಕು. ಪರವಾನಗಿ ನವೀಕರಣ ಮಾಡಿಸಬೇಕು. ಈ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ’ ಎಂದು ಹೇಳಿದರು.

ವೈದ್ಯರಾದ ಡಾ.ಸಿದ್ಧಲಿಂಗಪ್ಪ, ಡಾ.ಎಚ್.ಎಸ್.ಮಧುಕರ್, ಡಾ.ರಜನಿ, ಹೊಟೇಲ್‌, ಬಾರ್‌, ರೆಸ್ಟೋರೆಂಟ್‌, ಕಲ್ಯಾಣ ಮಂಟಪಗಳ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !