ಚಿಕ್ಕಬಳ್ಳಾಪುರ: ಮತ ಎಣಿಕೆಗೆ ಸಕಲ ಸಿದ್ಧತೆ

ಗುರುವಾರ , ಜೂನ್ 27, 2019
29 °C
ರಾಷ್ಟ್ರೀಯ ಹೆದ್ದಾರಿ 7ಕ್ಕೆ ಹೊಂದಿಕೊಂಡಿರುವ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ 10 ಕೊಠಡಿಗಳ ಸಜ್ಜು

ಚಿಕ್ಕಬಳ್ಳಾಪುರ: ಮತ ಎಣಿಕೆಗೆ ಸಕಲ ಸಿದ್ಧತೆ

Published:
Updated:
Prajavani

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 7ಕ್ಕೆ ಹೊಂದಿಕೊಂಡಿರುವ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಗುರುವಾರ (ಮೇ 23) ಬೆಳಿಗ್ಗೆ 8ಕ್ಕೆ ಸರಿಯಾಗಿ ಮತ ಎಣಿಕೆ ಕಾರ್ಯ ಆರಂಭವಾಗಲಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭೆ ಕ್ಷೇತ್ರಗಳಿದ್ದು, ಯಲಹಂಕ (2) ಹೊರತುಪಡಿಸಿದಂತೆ ಪ್ರತಿ ಕ್ಷೇತ್ರಕ್ಕೆ ಒಂದರಂತೆ ಮತ ಎಣಿಕೆ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿಯಾಗಿ ಒಂದು ಕೊಠಡಿ ಸಜ್ಜುಗೊಳಿಸಲಾಗಿದೆ. ಯಲಹಂಕ ಕ್ಷೇತ್ರಕ್ಕೆ 14 ಟೇಬಲ್‌ಗಳು, ಉಳಿದಂತೆ ಎಲ್ಲ ಕ್ಷೇತ್ರಗಳಿಗೆ ತಲಾ 10 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಈಗಾಗಲೇ ಅಭ್ಯರ್ಥಿಗಳು ಮತ ಎಣಿಕೆ ಕಾರ್ಯದ ವೀಕ್ಷಣೆಗಾಗಿ ಏಜೆಂಟರನ್ನು ಆಯ್ಕೆ ಮಾಡಿ ಪಟ್ಟಿ ನೀಡಿದ್ದಾರೆ. ಏಜೆಂಟರ ಸಮಕ್ಷಮದಲ್ಲಿ ಬೆಳಿಗ್ಗೆ 8ಕ್ಕೆ ಮೊದಲು ಅಂಚೆ ಮತಪತ್ರಗಳ ಎಣಿಕೆ ಕಾರ್ಯ ನಡೆಯಲಿದೆ. ಜಿಲ್ಲೆಯಲ್ಲಿ 4,477 ಅಂಚೆ ಮತಪತ್ರಗಳನ್ನು ವಿತರಿಸಲಾಗಿದೆ. ಆ ಪೈಕಿ ಈವರೆಗೆ ನಮಗೆ 2,380 ಮತಪತ್ರಗಳು ಬಂದು ಸೇರಿವೆ. ಗುರುವಾರ ಬೆಳಿಗ್ಗೆ 8ರ ವರೆಗೆ ಅಂಚೆ ಮತಪತ್ರಗಳನ್ನು ಸ್ವೀಕರಿಸುತ್ತೇವೆ’ ಎಂದು ಹೇಳಿದರು.

‘ಎಣಿಕೆ ಕಾರ್ಯವು 26 ರಿಂದ 30 ಸುತ್ತುಗಳಲ್ಲಿ ನಡೆಯಲಿದೆ. ಪ್ರತಿ ಸುತ್ತಿಗೆ ಒಂದು ಟೇಬಲ್‌ಗೆ ತಲಾ ಒಂದು ವಿದ್ಯುನ್ಮಾನ ಮತಯಂತ್ರ (ಇವಿಎಂ) ಮತ್ತು ಮತ್ತದರ ನಿಯಂತ್ರ ಘಟಕ ತಂದು ಮತಗಳ ಲೆಕ್ಕ ತೆಗೆದುಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಟೇಬಲ್‌ಗೆ ಒಬ್ಬ ಏಜೆಂಟರನ್ನು ನೇಮಿಸಲು ಅವಕಾಶವಿದೆ’ ಎಂದರು.

ಕೊನೆಗೆ ವಿ.ವಿ ಪ್ಯಾಟ್ ಮತ ಎಣಿಕೆ
‘ಈ ಹಿಂದೆ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಒಂದು ಮತ ಖಾತರಿ ಯಂತ್ರ (ವಿ.ವಿ ಪ್ಯಾಟ್‌) ತೆಗೆದು ಅದರಲ್ಲಿ ಚೀಟಿಗಳನ್ನು ಎಣಿಸಿ, ಮತಗಳಿಗೆ ತಾಳೆ ನೋಡಲಾಗುತ್ತಿತ್ತು. ಈ ಬಾರಿ ಚುನಾವಣಾ ಆಯೋಗದಿಂದ ಹೊಸ ಮಾರ್ಗಸೂಚಿ ಬಂದಿದೆ. ಅದರಂತೆ ಅಭ್ಯರ್ಥಿ ಸಮ್ಮುಖದಲ್ಲಿ ಲಾಟರಿ ಪ್ರಕ್ರಿಯೆ ಮೂಲಕ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ತಲಾ ಐದು ವಿ.ವಿ ಪ್ಯಾಟ್‌ ಆಯ್ಕೆ ಮಾಡಿಕೊಂಡು ಚೀಟಿಗಳನ್ನು ಮತಗಳೊಂದಿಗೆ ತಾಳೆ ಹಾಕುವ ಕೆಲಸ ಮಾಡಬೇಕಿದೆ. ಈ ಕಾರ್ಯವನ್ನು ಎಲ್ಲ ಸುತ್ತುಗಳ ಮತ ಎಣಿಕೆ ಮುಗಿದ ಬಳಿಕ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಪ್ರತಿ ಮತ ಎಣಿಕೆ ಸುತ್ತಿನಲ್ಲಿ ‘ಸುವಿಧಾ’ ಎಂಬ ತಂತ್ರಾಂಶದ ಮೂಲಕ ಕೇಂದ್ರದ ಹೊರಗೆ ನೆರೆದಿರುವ ಸಾರ್ವಜನಿಕರಿಗೆ ಬೃಹತ್ ಪ್ರದರ್ಶನ ಫಲಕದ ಮೂಲಕ ಮತಗಳ ಮಾಹಿತಿ ನೀಡಲಾಗುತ್ತದೆ. ಮಧ್ಯಾಹ್ನ 4ರ ವರೆಗೆ ಮತ ಎಣಿಕೆ ಕಾರ್ಯ ನಡೆಯುವ ಸಾಧ್ಯತೆ ಇದೆ. ಬಳಿಕ ವಿ.ವಿ ಪ್ಯಾಟ್‌ ಮತಗಳಲ್ಲಿನ ಚೀಟಿ ಎಣಿಕೆ ನಡೆಯಲಿದೆ’ ಎಂದು ಹೇಳಿದರು.

‘ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲಗಳು ಉಂಟಾಗಬಾರದು ಎಂಬ ಕಾರಣಕ್ಕೆ ಕೇಂದ್ರ ಚುನಾವಣಾ ಆಯೋಗ ಮುಂಜಾಗೃತಾ ಕ್ರಮವಾಗಿ ಮೊಬೈಲ್‌ಗಳನ್ನು ಮತ ಎಣಿಕೆ ಕೇಂದ್ರಕ್ಕೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಾಲೇಜಿನ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇರಲಿದೆ. ಕೇಂದ್ರದ ಒಳಗೆ ಹೋಗಲು ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಮತ ಎಣಿಕೆ ಕೊಠಡಿಗಳು, ಟೇಬಲ್ ಮತ್ತು ಸಿಬ್ಬಂದಿ ವಿವರ
ವಿಧಾನಸಭೆ ಕ್ಷೇತ್ರ ಕೊಠಡಿ ಟೇಬಲ್ ಎಣಿಕೆ ಸುತ್ತು ಮೇಲ್ವಿಚಾರಕರು ಸಿಬ್ಬಂದಿ ಸೂಕ್ಷ್ಮ ವೀಕ್ಷಕರು

ಗೌರಿಬಿದನೂರು 1 10 27 10 10 10
ಬಾಗೇಪಲ್ಲಿ 1 10 27 10 10 10
ಚಿಕ್ಕಬಳ್ಳಾಪುರ 1 10 26 10 10 10
ಯಲಹಂಕ 2 14 27 14 14 14
ಹೊಸಕೋಟೆ 1 10 29 10 10 10
ದೇವನಹಳ್ಳಿ 1 10 30 10 10 10
ದೊಡ್ಡಬಳ್ಳಾಪುರ 1 10 28 10 10 10
ನೆಲಮಂಗಲ 1 10 28 10 10 10
ಅಂಚೆ ಮತಪತ್ರಗಳು 1 4 0 4 4 4
ಇಟಿಪಿಬಿಎಸ್‌ 1 1 0 1 2 1

ಅಂಕಿಅಂಶಗಳು..
ಕೇಂದ್ರದ ಸಿದ್ಧತೆಯ ಚಿತ್ರಣ
10 ಸಜ್ಜುಗೊಂಡ ಕೊಠಡಿಗಳು
89 ಎಣಿಕೆಗೆ ಬಳಸುವ ಟೇಬಲ್‌ಗಳು
222 ಒಟ್ಟು ಮತ ಎಣಿಕೆ ಸುತ್ತುಗಳು
89 ಎಣಿಕೆ ಮೇಲ್ವಿಚಾರಕರು
90 ಎಣಿಕೆ ಸಿಬ್ಬಂದಿ
89 ಎಣಿಕೆ ಸೂಕ್ಷ್ಮ ವೀಕ್ಷಕರು

ವಿಧಾನಸಭೆ ಕ್ಷೇತ್ರವಾರು ಮತ ಚಲಾವಣೆ

ಕ್ಷೇತ್ರ ಒಟ್ಟು ಮತ ಚಲಾಯಿಸಿದವರು ಶೇಕಡವಾರು

ಗೌರಿಬಿದನೂರು 2,04,009 1,60,382 78.62

ಬಾಗೇಪಲ್ಲಿ 1,98,852 1,49,680 75.27

ಚಿಕ್ಕಬಳ್ಳಾಪುರ 2,00,630 1,64,984 82.23

ಯಲಹಂಕ 3,87,300 2,35,862 60.90

ಹೊಸಕೋಟೆ 2,12,784 1,86,816 87.81

ದೇವನಹಳ್ಳಿ- 1,99,556 1,67,960 84.17

ದೊಡ್ಡಬಳ್ಳಾಪುರ 2,01,693 1,63,716 81.17

ನೆಲಮಂಗಲ 2,03,603 1,55,987 76.61

ಒಟ್ಟು 18,08,391 13,85,387 76.61

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !