ಮಳೆ ನೀರು ಸಂಗ್ರಹ ಕಡ್ಡಾಯಗೊಳಿಸಿ: ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಸೂಚನೆ

ಗುರುವಾರ , ಜೂನ್ 27, 2019
29 °C
ಬರ ನಿರ್ವಹಣೆ ಪ್ರಗತಿ ಪರಿಶೀಲನಾ ಸಭೆ

ಮಳೆ ನೀರು ಸಂಗ್ರಹ ಕಡ್ಡಾಯಗೊಳಿಸಿ: ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಸೂಚನೆ

Published:
Updated:
Prajavani

ಚಿಕ್ಕಬಳ್ಳಾಪುರ: ‘ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಕಟ್ಟಡಗಳು, ಮನೆಗಳು ಮತ್ತು ಸರ್ಕಾರಿ ಕಚೇರಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಣಾ ವ್ಯವಸ್ಥೆ ಅಳವಡಿಸುವುದು ಕಡ್ಡಾಯಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರು ಜಿಲ್ಲಾಧಿಕಾರಿ ಅವರಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಬರ ನಿರ್ವಹಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ‘ಪ್ರಸ್ತುತ ಜಿಲ್ಲೆಯಲ್ಲಿ 300 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆ ಪೈಕಿ 123 ಗ್ರಾಮಗಳಲ್ಲಿ ಟ್ಯಾಂಕರ್ ಮತ್ತು 177 ಕಡೆಗಳಲ್ಲಿ ಖಾಸಗಿ ಕೊಳವೆಬಾವಿಗಳ ನೆರವಿನಿಂದ ನೀರು ಪೂರೈಸಲಾಗುತ್ತಿದೆ. ನೀರು ಪೂರೈಕೆಗಾಗಿ ಕೊರೆಯಿಸಿದ ಹೊಸ ಕೊಳವೆಬಾವಿಗಳ ಪೈಕಿ ಶೇ 60 ರಷ್ಟು ಕೊಳವೆಬಾವಿಗಳು ವಿಫಲಗೊಂಡಿವೆ’ ಎಂದು ಹೇಳಿದರು.

ಆಗ ಸಚಿವರು ‘ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದು ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪದಲ್ಲಿ ಉಲ್ಭಣಿಸುತ್ತಿದೆ. ಈಗಲೇ ನಾವು ನೀರಿನ ಮಹತ್ವ ತಿಳಿದು, ಮಳೆ ನೀರು ಸಂಗ್ರಹಿಸದೇ ಹೋದರೆ ಭವಿಷ್ಯದಲ್ಲಿ ತುಂಬಾ ಕಷ್ಟ ಎದುರಿಸಬೇಕಾಗುತ್ತದೆ. ಸಮರೋಪಾದಿಯಲ್ಲಿ ಕೆರೆ, ಕಾಲುವೆ ಸಜ್ಜುಗೊಳಿಸಿ ಮಳೆ ನೀರು ಸಂಗ್ರಹಿಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಒತ್ತುವರಿಗೆ ಒಳಗಾಗಿರುವ ಕೆರೆ, ಕಾಲುವೆಗಳನ್ನು ಅಳತೆ ಮಾಡಿಸಿ, ಅತಿಕ್ರಮಣ ತೆರವುಗೊಳಿಸಬೇಕು. ಕೆರೆಯಲ್ಲಿನ ಹೂಳು ತೆಗೆಸಲು ಅಡ್ಡಿಯಾಗುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯವರಿಗೆ ಇತ್ತೀಚೆಗೆ ಸರ್ಕಾರದ ಮಟ್ಟದಲ್ಲಿ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಮಳೆ ನೀರು ಸಂಗ್ರಹಿಸಲು ಬಹು ಕಮಾನು ಮಾದರಿ ಚೆಕ್‌ಡ್ಯಾಂಗಳನ್ನು ಹೆಚ್ಚೆಚ್ಚು ನಿರ್ಮಿಸಬೇಕು’ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ಅವರಿಂದ ಮಾಹಿತಿ ಪಡೆದ ಸಚಿವರು, ‘ಬೆಳೆ ವಿಮಾ ಕಂಪನಿ ಪ್ರತಿನಿಧಿಗಳಿಗೆ ಕೃಷಿ ಇಲಾಖೆಯ ತಾಲ್ಲೂಕು ಕಚೇರಿಗಳಲ್ಲಿ ಒಂದು ಟೇಬಲ್‌ ವ್ಯವಸ್ಥೆ ಮಾಡುವ ಜತೆಗೆ ತಾಲ್ಲೂಕುವಾರ ಪ್ರತಿನಿಧಿಗಳ ಮೊಬೈಲ್‌ ಸಂಖ್ಯೆಗಳು ರೈತರಿಗೆ ಲಭ್ಯವಾಗುವಂತೆ ಪ್ರಚಾರ ಮಾಡಬೇಕು. ಇದರಿಂದ ರೈತರು ಅಲೆದಾಡುವುದು ತಪ್ಪಿಸಬಹುದು’ ಎಂದು ಹೇಳಿದರು.

‘ಕೀಟಗಳ ಹತೋಟಿ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಏರ್ಪಡಿಸುವ ಮೂಲಕ ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಬಿತ್ತನೆ ಸಮಯಕ್ಕೆ ಬೀಜ, ರಸಗೊಬ್ಬರ ಕೊರತೆಯಾಗದ ರೀತಿ ದಾಸ್ತಾನು ಮಾಡಿಟ್ಟುಕೊಳ್ಳಬೇಕು. ರೈತರಿಗೆ ಸಕಾಲಿಕ ಮಾಹಿತಿ ಆಗಾಗ ಒದಗಿಸುತ್ತಿರಬೇಕು’ ಎಂದು ಹೇಳಿದರು.

ಪಶು ಪಾಲನೆ ಮತ್ತು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಮಧುರನಾಥ್‌ ರೆಡ್ಡಿ ಅವರ ಮೇವಿನ ಬಗ್ಗೆ ಮಾಹಿತಿ ಪಡೆದ ಸಚಿವರು, ‘ಹೊರಗಡೆಯಿಂದ ರಸಮೇವು ಖರೀದಿಸುವ ಬದಲು ಸ್ಥಳೀಯ ಬೇಡಿಕೆಗೆ ತಕ್ಕಂತೆ ಸ್ಥಳೀಯವಾಗಿಯೇ ರಸಮೇವು ಉತ್ಪಾದಿಸುವ ನಿಟ್ಟಿನಲ್ಲಿ ರೈತರಿಗೆ, ಮಹಿಳಾ ಸಂಘಗಳ ಸದಸ್ಯರಿಗೆ ತರಬೇತಿ ಕೊಡಿಸುವ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.

‘ಮೇವಿನ ಕೊರತೆಯಿಂದಾಗಿ ರೈತರು ಬೆಲೆಬಾಳುವ ಜಾನುವಾರುಗಳನ್ನು ಮಾರಾಟ ಮಾಡಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಮೇವಿಗೆ ಪರ್ಯಾಯ ಚಿಂತನೆ ನಡೆಸಬೇಕಿದೆ. ಅದಕ್ಕಾಗಿ ಅರಣ್ಯ ಮತ್ತು ಸಾಮಾಜಿಕ ಅರಣ್ಯ ಇಲಾಖೆಯವರು ಮೇವು ನೀಡುವಂತಹ ಗಿಡಗಳ ಸಸಿಗಳು ಹೆಚ್ಚು ಬೆಳೆಸಿ ರೈತರಿಗೆ ನೀಡಿ ಬೆಳೆಯಲು ಪ್ರೋತ್ಸಾಹಿಸುವ ಕೆಲಸ ಮಾಡಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ಉಪವಿಭಾಗಾಧಿಕಾರಿ ಬಿ.ಶಿವಸ್ವಾಮಿ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !