ಇವಿಎಂ ಬಗ್ಗೆ ಬೇಜವಾಬ್ದಾರಿ ಮಾತನಾಡಬಾರದು: ಚರ್ಚೆಗೆ ಗ್ರಾಸವಾದ ಸುಧಾಕರ್ ಟ್ವಿಟ್‌

ಗುರುವಾರ , ಜೂನ್ 20, 2019
27 °C
ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದ ಸುಧಾಕರ್ ಟ್ವಿಟ್‌

ಇವಿಎಂ ಬಗ್ಗೆ ಬೇಜವಾಬ್ದಾರಿ ಮಾತನಾಡಬಾರದು: ಚರ್ಚೆಗೆ ಗ್ರಾಸವಾದ ಸುಧಾಕರ್ ಟ್ವಿಟ್‌

Published:
Updated:
Prajavani

ಚಿಕ್ಕಬಳ್ಳಾಪುರ: ‘ಮತಗಟ್ಟೆ ಸಮೀಕ್ಷೆ ಫಲಿತಾಂಶದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಗ್ಗೆ ಅನಗತ್ಯವಾಗಿ, ಬೇಜವಾಬ್ದಾರಿಯಿಂದ ಮಾತನಾಡಬಾರದು. ನಾವು ಏಕೆ ಸೋಲುತ್ತಿದ್ದೇವೆ ಎಂದು ಪರೀಕ್ಷೆ ಮಾಡಿಕೊಂಡು ನೋಡಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ಲೋಕಸಭೆ ಚುನಾವಣೆ ಫಲಿತಾಂಶ ಘೋಷಣೆಗೆ ಕ್ಷಣಗಣನೆ ಆರಂಭಗೊಂಡು, ವಿರೋಧ ಪಕ್ಷಗಳ ಪಾಳೆಯಗಳಲ್ಲಿ ಇವಿಎಂಗಳ ಬಗ್ಗೆ ಸಂಶಯದ ಮಾತುಗಳು ವ್ಯಕ್ತವಾಗುತ್ತಿರುವ ಹೊತ್ತಿನಲ್ಲಿಯೇ ಕಾಂಗ್ರೆಸ್‌ ಶಾಸಕ ಸುಧಾಕರ್‌ ಅವರು ಬುಧವಾರ ಮತಗಟ್ಟೆ ಸಮೀಕ್ಷೆ ಫಲಿತಾಂಶದ ಪರ ಟ್ವಿಟ್‌ ಮಾಡಿ ಸ್ವಪಕ್ಷೀಯರ ಹುಬ್ಬೆರುವಂತೆ ಮಾಡಿದ್ದಾರೆ.

‘ಮತಗಟ್ಟೆ ಸಮೀಕ್ಷೆ ಫಲಿತಾಂಶಗಳ ಬಗ್ಗೆ ಮಾತನಾಡುವಾಗ ಇವಿಎಂ ದುರುಪಯೋಗ ವಿಷಯ ಏಕೆ ಎಳೆತರಲಾಗುತ್ತದೆ? ವೈಯಕ್ತಿಕವಾಗಿ ನನಗೆ ಗೊಂದಲವಾಗುತ್ತಿದೆ. ಚುನಾವಣೋತ್ತರ ಫಲಿತಾಂಶ ಮತದಾನ ಮುಕ್ತಾಯದ ನಂತರ ಮತದಾರರ ಭಾವನೆಗಳನ್ನು ಬಿಂಬಿಸುತ್ತದೆ’ ಎಂದು ಸುಧಾಕರ್ ಅವರು ಟ್ವಿಟ್‌ ಮಾಡಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಮತಗಟ್ಟೆ ಸಮೀಕ್ಷೆ ಫಲಿತಾಂಶಕ್ಕೂ, ಇವಿಎಂಗಳಿಗೂ ಸಂಬಂಧವಿಲ್ಲ. ನಿಜವಾದ ಫಲಿತಾಂಶ ಹೊರ ಬಂದ ಬಳಿಕ ನಾವು ಇವಿಎಂ ಬಗ್ಗೆ ಮಾತನಾಡಬೇಕು. ಮತಗಟ್ಟೆ ಸಮೀಕ್ಷೆ ಫಲಿತಾಂಶ ನೋಡಿದ ಕ್ಷಣವೇ ಇವಿಎಂ ಬಗ್ಗೆ ಮಾತನಾಡಲು ಆಗುತ್ತದೆಯೇ? ಒಂದು ವೇಳೆ ನಾಳೆಯ ಫಲಿತಾಂಶದಲ್ಲಿ ಯುಪಿಎ ಗೆದ್ದರೆ, ಅವಾಗ ಯಾರನ್ನು ದೂರುತ್ತೀರಿ’ ಎಂದು ಪರೋಕ್ಷವಾಗಿ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸುವವರಿಗೆ ಕುಟುಕಿದರು.

‘ಫಲಿತಾಂಶ ನೋಡುವುದಕ್ಕೂ ಮೊದಲೇ ಇವಿಎಂ ಬಗ್ಗೆ ಮಾತನಾಡುವುದು ತಪ್ಪು. ಆ ರೀತಿ ಮಾತನಾಡಬಾರದು. ಕಾಂಗ್ರೆಸ್‌ ಇತ್ತೀಚೆಗೆ ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯವರು ಇವಿಎಂ ದುರುಪಯೋಗ ಪಡಿಸಿಕೊಳ್ಳುವಂತಿದ್ದರೆ ರಾಜ್ಯದಲ್ಲಿ 104 ಸ್ಥಾನಗಳನ್ನು ಮಾತ್ರ ಏಕೆ ಗಳಿಸುತ್ತಿದ್ದರು? 115 ಸ್ಥಾನಗಳನ್ನು ಪಡೆದುಕೊಳ್ಳಬಹುದಿತ್ತಲ್ಲ’ ಎಂದು ಮರು ಪ್ರಶ್ನಿಸಿದರು.

ಕಾಂಗ್ರೆಸ್‌ ಹಿರಿಯ ಮುಖಂಡ, ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ, ‘ನಮಗೆ ಮತಗಟ್ಟೆ ಸಮೀಕ್ಷೆಗಳ ಮೇಲೆ ನಂಬಿಕೆ ಇಲ್ಲ. ಒಂದು ವೇಳೆ ಸಮೀಕ್ಷೆಯಂತೆಯೇ ಫಲಿತಾಂಶ ಬಂದರೆ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಮೇಲೆ ಸಂಶಯ ವ್ಯಕ್ತಪಡಿಸಬೇಕಾಗುತ್ತದೆ’ ಎಂಬ ಹೇಳಿಕೆ ಬೆನ್ನಲ್ಲೇ ಸುಧಾಕರ್ ಅವರ ಟ್ವಿಟ್‌ ರಾಜಕೀಯ ವಲಯದಲ್ಲಿ ಹಲವು ಚರ್ಚೆಗೆ ಗ್ರಾಸ ಒದಗಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 28

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !