ಬಾಗಲಕೋಟೆ: ಮಳೆಗೆ ಎತ್ತು, 7 ಕುರಿ–ಆಡು ಸಾವು, 19ಮನೆಗೆ ಹಾನಿ, ವಿದ್ಯುತ್ ವ್ಯತ್ಯಯ

ಭಾನುವಾರ, ಜೂನ್ 16, 2019
28 °C

ಬಾಗಲಕೋಟೆ: ಮಳೆಗೆ ಎತ್ತು, 7 ಕುರಿ–ಆಡು ಸಾವು, 19ಮನೆಗೆ ಹಾನಿ, ವಿದ್ಯುತ್ ವ್ಯತ್ಯಯ

Published:
Updated:
Prajavani

ಬಾಗಲಕೋಟೆ: ನವನಗರ, ಬಾಗಲಕೋಟೆ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಮಂಗಳವಾರ ರಾತ್ರಿ ಸುರಿದ ಮಳೆಗಾಳಿಗೆ ವ್ಯಾಪಕ ಹಾನಿಯಾಗಿದೆ. ನಗರದ ವಿವಿಧೆಡೆ ಮರಗಳು ಉರುಳಿಬಿದ್ದಿದ್ದು, ಕೆಲವು ಕಡೆ ದೊಡ್ಡ ಗಾತ್ರದ ಟೊಂಗೆಗಳು ಮುರಿದುಬಿದ್ದಿವೆ. ಹಲವೆಡೆ ವಿದ್ಯುತ್ ಕಂಬಗಳು ನೆಲಕಚ್ಚಿವೆ.

ಇದರಿಂದ ಮರದ ಕೆಳಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಹಾಗೂ ಕಾರುಗಳು ಜಖಂಗೊಂಡಿವೆ. ತಾಲ್ಲೂಕಿನ ಇಲ್ಯಾಳದಲ್ಲಿ ಸಿಡಿಲು ಬಡಿದು ಎತ್ತು ಸಾವಿಗೀಡಾಗಿದೆ. ಸೀಮಿಕೇರಿಯಲ್ಲಿ ಐದು ಕುರಿ, ತುಳಸಿಗೇರಿಯಲ್ಲಿ ಒಂದು ಆಡು ಆಲಿಕಲ್ಲು ಮಳೆ ಹೊಡೆತಕ್ಕೆ ಸಾವಿಗೀಡಾಗಿವೆ. ಮುರನಾಳದಲ್ಲಿ ಮರ ಬಿದ್ದು ಆಡು ಜೀವತೆತ್ತಿದೆ. ವಿವಿಧ ಗ್ರಾಮಗಳಲ್ಲಿ 19 ಮನೆಗಳು ಭಾಗಶಃ ಹಾನಿಗೀಡಾಗಿವೆ.

ಗಾಳಿಯ ಆರ್ಭಟಕ್ಕೆ ಕಲಾದಗಿಯಲ್ಲಿ ಎಂಟು ಮನೆಗಳು, ನೀರಲಕೇರಿಯಲ್ಲಿ ಆರು, ದೇವನಾಳ, ಯಡಹಳ್ಳಿ, ಸೊಕನಾದಗಿ, ಕಳಸಕೊಪ್ಪದಲ್ಲಿ ತಲಾ ಒಂದು, ಹಿರೇಶೆಲ್ಲಿಕೇರಿಯಲ್ಲಿ ಎರಡು ಮನೆಗಳ ಪತ್ರಾಸು ಹಾರಿ ಹೋಗಿವೆ.

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ: ರಾತ್ರಿ ಒಂದು ತಾಸಿಗೂ ಹೆಚ್ಚು ಕಾಲ ಆಲಿಕಲ್ಲು ಮಿಶ್ರಿತ ಮಳೆ ಬಿದ್ದಿದ್ದು, ಗಾಳಿಯ ಹೊಡೆತಕ್ಕೆ ವಿದ್ಯುತ್ ಕಂಬಗಳು ನೆಲಕಚ್ಚಿದ್ದು ಹಾಗೂ ಮರದ ಟೊಂಗೆಗಳು ವಿದ್ಯುತ್‌ ತಂತಿಗಳ ಮೇಲೆ ಬಿದ್ದ ಪರಿಣಾಮ ಬಾಗಲಕೋಟೆ ನಗರ ಹಾಗೂ ತಾಲ್ಲೂಕಿನ ನಿವಾಸಿಗಳು ಇಡೀ ರಾತ್ರಿ ಕತ್ತಲೆಯಲ್ಲಿಯೇ ಕಳೆಯಬೇಕಾಯಿತು. ಕೆಲವು ಕಡೆ ಮರುದಿನ ಮಧ್ಯಾಹ್ನ 3 ಗಂಟೆಯ ನಂತರ ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ ತಲುಪಿತು. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ 15 ತಾಸಿಗೂ ಹೆಚ್ಚು ಕಾಲ ವಿದ್ಯುತ್ ಇಲ್ಲದೇ ಜನರು ಪರಿತಪಿಸುವಂತಾಯಿತು.

ಹಳೆ ಬಾಗಲಕೋಟೆಯ ಯೋಗಪ್ಪನವರ ಆಸ್ಪತ್ರೆ, ಹಳೆ ಐಬಿ ಭಾಗದಲ್ಲಿ, ನವನಗರದ ಹಳೆ ಆರ್‌ಟಿಒ ವೃತ್ತ, ಸೆಕ್ಟರ್ ಸಂಖ್ಯೆ 35, ವಿದ್ಯಾಗಿರಿಯ ಕಾಲೇಜ್‌ ವೃತ್ತ, 22ನೇ ಕ್ರಾಸ್‌ನಲ್ಲಿ, ಬಸವೇಶ್ವರ ಎಂಜನಿಯರಿಂಗ್ ಬಾಲಕರ ವಸತಿ ನಿಲಯದ ಹತ್ತಿರ ಸೇರಿದಂತೆ ಅನೇಕ ಪ್ರದೇಶದಲ್ಲಿ ಹೆಸ್ಕಾಂನ ತಂತಿಗಳ ಮೇಲೆ ಟೊಂಗೆಗಳು ಬಿದ್ದಿದ್ದವು.

‘ನಗರದಲ್ಲಿ ಒಟ್ಟು 14 ಹೆಸ್ಕಾಂ ಕಂಬಗಳು ಬಿದ್ದಿದ್ದು, ಅವುಗಳೆಲ್ಲವನ್ನು ಬದಲಿಸಲಾಗಿದೆ. ಇನ್ನು 100 ಕೆ.ವಿ ಸಾಮರ್ಥ್ಯದ 4 ಟಿಸಿ ಹಾಗೂ 250 ಕೆ.ವಿ ಸಾಮರ್ಥ್ಯದ 3 ಟಿಸಿಗಳು ಸುಟ್ಟಿವೆ. ಒಂದು ಟಿಸಿಯನ್ನು ಹೊರತು ಪಡಿಸಿ ಉಳಿದ ಎಲ್ಲ ಟಿಸಿಗಳನ್ನು ಬದಲಿಸಲಾಗಿದೆ. ಉಳಿದ ಒಂದನ್ನು ನಂತರದಲ್ಲಿ ಬದಲಿಸಲಾಗುತ್ತದೆ. ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಿಬ್ಬಂದಿ ಕೆಲಸ ನಿರ್ವಹಿಸಿದ್ದಾರೆ. ಬುಧವಾರ ಸಂಜೆಯಿಂದ ನಗರದ ಎಲ್ಲ ಕಡೆ ವಿದ್ಯುತ್‌ ಸಂಪರ್ಕ ಪುನರಾರಂಭವಾಗಿದೆ’ ಎಂದು ಹೆಸ್ಕಾಂನ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ‘ಪ್ರಜಾವಾಣಿ’ಗೆ  ತಿಳಿಸಿದರು.

ಹೋಟೆಲ್, ತಂಪು ಪಾನೀಯದ ಅಂಗಡಿ ಬಂದ್:

ಅಂದಾಜು 20 ರಿಂದ 22 ಗಂಟೆ ವಿದ್ಯುತ್‌ ಸಂಪರ್ಕ ಕಡಿತಗೊಂಡ ಕಾರಣದಿಂದ ಅನೇಕ ಹೊಟೇಲ್‌ಗಳಲ್ಲಿ ಬೆಳಗಿನ ಕೆಲಸಕ್ಕೆ ವಿದ್ಯುತ್‌ ಇಲ್ಲದಿರುವ ಕಾರಣ ಅನೇಕ ಹೊಟೇಲ್‌ಗಳಲ್ಲಿ ಕೇವಲ ಶಿರಾ, ಉಪ್ಪಿಟ್ಟು ದೊರಕಿದರೆ, ಕೆಲವೊಂದು ಹೊಟೇಲ್‌ಗಳನ್ನು ಬಂದ್‌ ಮಾಡಲಾಗಿತ್ತು. ಜೊತೆಗೆ ತಂಪು ಪಾನೀಯದ ಅಂಗಡಿಗಳಲ್ಲಿ ವಿದ್ಯುತ್‌ ಸಂಪರ್ಕವಿಲ್ಲದೇ ಫ್ರೀಡ್ಜ್‌ಗಳು ಬಂದಾಗಿದ್ದರಿಂದ ಕೆಲವರು ಅಂಗಡಿಗಳನ್ನೇ ಮುಚ್ಚಿದರು. ಇನ್ನೂ ಕೆಲವರು ಜನರೇಟರ್‌ ಬಳಸಿ ವಹಿವಾಟು ನಡೆಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !