ಖಾತೆ ತೆರೆದ ಬಿಜೆಪಿ, ದಾಖಲೆ ಬರೆದ ಬಚ್ಚೇಗೌಡ

ಗುರುವಾರ , ಜೂನ್ 27, 2019
29 °C
ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಮೊದಲ ಬಾರಿಗೆ ಅರಳಿದ ಕಮಲ, ಎಡಪಂಥಿಯ ಚಿಂತನೆಯ ನೆಲದಲ್ಲಿ ಬೇರು ನೆಟ್ಟ ಕೇಸರಿ ಪಾಳೆಯ

ಖಾತೆ ತೆರೆದ ಬಿಜೆಪಿ, ದಾಖಲೆ ಬರೆದ ಬಚ್ಚೇಗೌಡ

Published:
Updated:
Prajavani

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಭದ್ರಕೋಟೆ ಎಂಬ ಹೆಗ್ಗಳಿಕೆ ಹೊಂದಿದ್ದ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರು ಮೈತ್ರಿ ಅಭ್ಯರ್ಥಿ, ಸಂಸದ ಎಂ.ವೀರಪ್ಪ ಮೊಯಿಲಿ ಅವರನ್ನು ಸೋಲಿಸುವ ಮೂಲಕ ಗೆಲುವು ಸಾಧಿಸಿ ದಾಖಲೆ ಬರೆದರೆ, ಕಮಲ ಪಡೆ ‘ಕೈ’ ಕೋಟೆಯ ಮೇಲೆ ಪ್ರಪ್ರಥಮವಾಗಿ ಕೇಸರಿ ಪತಾಕೆ ಹಾರಿಸಿ ವಿಜಯೋತ್ಸವ ಆಚರಿಸುತ್ತಿದೆ.

ನೆರೆಯ ಆಂಧ್ರಪ್ರದೇಶದಿಂದ ಹರಡಿದ ಎಡಪಂಥಿಯ ಚಿಂತನೆಗಳ ಪ್ರಭಾವದಿಂದಾಗಿ ಈ ಭಾಗದಲ್ಲಿ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಬಿಜೆಪಿಗೆ ಈವರೆಗೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಒಂದೇ ಒಂದು ಸ್ಥಾನ ಗೆದ್ದುಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಕಾಂಗ್ರೆಸ್‌ ಪಾಳೆಯ ಬಹುತೇಕ ಗೆಲುವಿನ ನಗೆಯಿಂದ ಬೀಗುತ್ತ ಬಂದಿತ್ತು.

ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ 1977 ರಿಂದ ಈವರೆಗೆ 11 ಲೋಕಸಭೆ ಚುನಾವಣೆಗಳು ನಡೆದಿವೆ. ಈ ಪೈಕಿ 1996ರಲ್ಲಿ ಜನತಾದಳದ ಅಭ್ಯರ್ಥಿ ಆರ್.ಎಲ್.ಜಾಲಪ್ಪ ಅವರು ಗೆದ್ದಿದ್ದು ಹೊರತುಪಡಿಸಿದರೆ, ಉಳಿದಂತೆ 10 ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಗೆಲುವಿನ ನಗೆ ಬೀರಿದ್ದರು.

ಆದರೆ ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವರ್ಚಸ್ಸು ವೃದ್ಧಿಸಿಕೊಂಡಿದ್ದ ಬಿಜೆಪಿ ಈ ಬಾರಿ ಕಾಂಗ್ರೆಸ್‌ಗೆ ಕಠಿಣ ಸವಾಲು ಒಡ್ಡಿ, ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿತ್ತು. ಕೊನೆಗೂ ಮೂರನೇ ಪ್ರಯತ್ನದಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯುವ ಮೂಲಕ ಗಡಿಭಾಗದತ್ತ ತನ್ನ ಬಾಹು ಚಾಚಿದೆ.

ಹಿಂದಿನ ಎರಡು (2009, 2014) ಚುನಾವಣೆಗಳಲ್ಲಿ ಇಲ್ಲಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಮೊಯಿಲಿ ಅವರು ಈ ಬಾರಿ ಮೂರನೆಯ ‘ಅದೃಷ್ಟ’ ಪರೀಕ್ಷೆಗೆ ಮುಂದಾಗಿದ್ದರು. ಅವರ ವಿರುದ್ಧ ಬಿಜೆಪಿ ಎರಡನೇ ಬಾರಿಗೆ ಬಚ್ಚೇಗೌಡರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿತ್ತು. ‘ಮೈತ್ರಿ’ ಬಲದಿಂದ ಗೆಲುವಿನ ದಡ ಸೇರುವ ತವಕದಲ್ಲಿದ್ದ ಮೊಯಿಲಿ ಅವರ ಲೆಕ್ಕಾಚಾರವನ್ನು ಆಡಳಿತ ವಿರೋಧಿ ಅಲೆ, ಜೆಡಿಎಸ್‌ ಮತ್ತು ಸ್ವಪಕ್ಷೀಯರ ಅಸಹಕಾರ, ಮೋದಿ ಅಲೆ, ಜಾತಿ ಲೆಕ್ಕಾಚಾರ ತಲೆ ಕೆಳಗು ಮಾಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಮೈತ್ರಿ ಪಕ್ಷಗಳ ನಡುವಿನ ಸ್ಥಳೀಯ ಒಡಕಿನ ಲಾಭ ಪಡೆಯುವ ತಂತ್ರಗಾರಿಕೆಯಲ್ಲಿ ಮತ್ತು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗರ ಮತಗಳನ್ನು ಸೆಳೆಯುವಲ್ಲಿ ತೋರಿದ ಚಾಣಾಕ್ಷತನ ಬಚ್ಚೇಗೌಡರ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿವೆ ಎನ್ನಲಾಗುತ್ತಿದೆ.

ಸದ್ಯ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ, ಸಂಸದ ಎಂ.ವೀರಪ್ಪ ಮೊಯಿಲಿ ಅವರ ಸೋಲು ಕಾಂಗ್ರೆಸ್‌ ವಲಯದಲ್ಲಿ ಸೂತಕದ ವಾತಾವರಣ ಉಂಟು ಮಾಡಿದರೆ, ಹಿಂದಿನ ಸೋಲಿನ ಸೇಡು ತೀರಿಸಿಕೊಂಡ ಬಚ್ಚೇಗೌಡರ ಬೆಂಬಲಿಗರ ಉತ್ಸಾಹ ಇಮ್ಮಡಿಗೊಂಡು, ಗಲ್ಲಿಗಲ್ಲಿಗಳ ಪಟಾಕಿ ಸದ್ದಿನೊಂದಿಗೆ ಅನುರಣಿಸುತ್ತಿದೆ.

ಬಯಲು ಸೀಮೆಯ ಈ ಬರದ ಜಿಲ್ಲೆಯಲ್ಲಿ ಕಳೆದ ಒಂದು ದಶಕದಿಂದ ‘ನೀರಾವರಿ’ ಸಾರ್ವತ್ರಿಕ ಚುನಾವಣೆಗಳ ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತ ಬಂದಿದೆ. ಹೀಗಾಗಿ ಈ ಭಾಗದಲ್ಲಿ 2013ರಿಂದ ಅನುಷ್ಠಾನಗೊಳ್ಳುತ್ತಿರುವ ಎತ್ತಿನಹೊಳೆ ಯೋಜನೆ ಮೊಯಿಲಿ ಅವರ ನೆಚ್ಚಿನ ಪದವಾಗಿ ಹೋಗಿತ್ತು.

ಕಳೆದ ಆರು ವರ್ಷಗಳಿಂದ ಅವರು ‘ಒಂದೆರಡು ವರ್ಷಗಳಲ್ಲಿ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ’ ಎಂದು ನಿದ್ದೆಯಲ್ಲೂ ಕನವರಿಸುವಷ್ಟರ ಮಟ್ಟಿಗೆ ಹೇಳುವುದು ರೂಢಿಸಿಕೊಂಡಿದ್ದರು. ಅದೇ ಅವರಿಗೆ ಪ್ರತಿಸ್ಪರ್ಧಿಗಳ ಬಾಯಲ್ಲಿ ‘ಮಹಾನ್ ಸುಳ್ಳುಗಾರ’ನ ಪಟ್ಟ ನೀಡಿತ್ತು.

ಎತ್ತಿನಹೊಳೆ ನೀರು ತಂದು ಕೊಡದ ಮೊಯಿಲಿ ಅವರು ಈ ಚುನಾವಣೆಯಲ್ಲಿ ನೆರೆಯ ಆಂಧ್ರಪ್ರದೇಶದ ಗಡಿಭಾಗ ತಲುಪಿರುವ ಕೃಷ್ಣಾ ನದಿ ನೀರನ್ನು ಜಿಲ್ಲೆಗೆ ಹರಿಸುತ್ತೇನೆ ಎಂಬ ಹೊಸ ಭರವಸೆಯ ಘೋಷಣೆ ಮೊಳಗಿಸಿದರು. ಆದರೆ ಮತದಾರ ಅದನ್ನು ನಂಬಲಿಲ್ಲ ಎಂಬುದು ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ

....

2014ರ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತಗಳು
ಎಂ.ವೀರಪ್ಪ ಮೊಯಿಲಿ (ಕಾಂಗ್ರೆಸ್) 4,24,800
ಬಿ.ಎನ್.ಬಚ್ಚೇಗೌಡ (ಬಿಜೆಪಿ) 4,15,280
ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್‌) 3,46,339

**
ಅಂಕಿಅಂಶಗಳು

8 – ಕ್ಷೇತ್ರವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು

18,08,391 – ಒಟ್ಟು ಮತದಾರರು

13,85,387 – ಮತ ಚಲಾಯಿಸಿದವರು

ಶೇ 76.61 – ಮತದಾನದ ಪ್ರಮಾಣ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !