ಹ್ಯಾಟ್ರಿಕ್‌ ಗೆಲುವು ಸಾಧಿಸಿದ ನಳಿನ್‌, ಮೋದಿ ಅಲೆಯಲ್ಲಿ ಮೂರನೇ ಬಾರಿ ಸಂಸತ್‌ಗೆ

ಗುರುವಾರ , ಜೂನ್ 27, 2019
29 °C

ಹ್ಯಾಟ್ರಿಕ್‌ ಗೆಲುವು ಸಾಧಿಸಿದ ನಳಿನ್‌, ಮೋದಿ ಅಲೆಯಲ್ಲಿ ಮೂರನೇ ಬಾರಿ ಸಂಸತ್‌ಗೆ

Published:
Updated:
Prajavani

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಹಾಲಿ ಸಂಸದ ನಳಿನ್‌ಕುಮಾರ್‌ ಕಟೀಲ್‌ ಕಾಂಗ್ರೆಸ್‌ನ ಮಿಥುನ್ ಎಂ. ರೈ ಅವರನ್ನು 2,74,621 ಮತಗಳ ಭಾರಿ ಅಂತರದಿಂದ ಸೋಲಿಸಿ ಸತತ ಮೂರನೇ ಬಾರಿ ಗೆಲುವು ಸಾಧಿಸಿದ್ದಾರೆ.

ನಗರದ ಹೊರವಲಯದ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಗುರುವಾರ ಮತ ಎಣಿಕೆ ನಡೆಯಿತು. ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡ ನಳಿನ್‌, ದಾಖಲೆಯ ಅಂತರದ ಗೆಲುವು ಸಾಧಿಸಿದರು. ಒಟ್ಟು ಚಲಾವಣೆಯಾದ 13,37,659 ಮತಗಳ ಪೈಕಿ ಶೇಕಡ 57.57ರಷ್ಟನ್ನು ಗಳಿಸುವ ಮೂಲಕ ಗೆಲುವಿನ ನಗೆ ಬೀರಿದರು.

2009ರಲ್ಲಿ ಮೊದಲ ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಳಿನ್‌ ಕುಮಾರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು 40,420 ಮತಗಳ ಅಂತರದಿಂದ ಸೋಲಿಸಿ ಸಂಸತ್‌ ಪ್ರವೇಶಿಸಿದ್ದರು. 2014ರ ಚುನಾವಣೆಯಲ್ಲಿ ಮತ್ತೆ ಜನಾರ್ದನ ಪೂಜಾರಿ ಅವರನ್ನು 1,43,70 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಗೆಲುವಿನ ಅಂತರವನ್ನು 2.74 ಲಕ್ಷಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದರು.

ಏಳು ಕ್ಷೇತ್ರಗಳಲ್ಲಿ ಮುನ್ನಡೆ:

ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಶಾಸಕರಿರುವ ಏಳು ಕಡೆಗಳಲ್ಲೂ ಬಿಜೆಪಿಗೆ ಭಾರಿ ಅಂತರದ ಮುನ್ನಡೆ ಲಭ್ಯವಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 47,159 ಮತಗಳ ಅತ್ಯಧಿಕ ಮುನ್ನಡೆ ದೊರಕಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 46,088 ಮತಗಳ ಮುನ್ನಡೆ ದೊರಕಿದ್ದರೆ, ಪುತ್ತೂರಿನಲ್ಲಿ 44,599 ಮತಗಳ ಮುನ್ನಡೆ ಲಭ್ಯವಾಗಿದೆ.

ಬೆಳ್ತಂಗಡಿಯಲ್ಲಿ 44,760, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ 37,255, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 32,285 ಮತಗಳ ಮುನ್ನಡೆ ಸಿಕ್ಕಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 32,063 ಮತಗಳ ಮುನ್ನಡೆ ಬಿಜೆಪಿಗೆ ಲಭಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾಂಗ್ರೆಸ್‌ ಶಾಸಕ ಯು.ಟಿ. ಖಾದರ್‌ ಪ್ರತಿನಿಧಿಸುವ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಪಕ್ಷಕ್ಕೆ 11,392 ಮತಗಳ ಮುನ್ನಡೆ ದೊರಕಿದೆ. ಹಿಂದಿನ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಇಲ್ಲಿ ಕಾಂಗ್ರೆಸ್‌ನ ಮುನ್ನಡೆಯಲ್ಲಿ ಸುಮಾರು 5,000 ಮತಗಳಷ್ಟು ಕುಸಿತವಾಗಿದೆ.

ಮತ ಗಳಿಕೆಯಲ್ಲೂ ಹೆಚ್ಚಳ:

ಶೇಕಡಾವಾರು ಮತ ಗಳಿಕೆಯಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. 2009ರ ಚುನಾವಣೆಯಲ್ಲಿ ಒಟ್ಟು ಚಲಾವಣೆಯಾದ ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲ್‌ ಶೇ 49.16ರಷ್ಟು ಮತ ಗಳಿಸಿದ್ದರು. 2014ರಲ್ಲಿ ಈ ಪ್ರಮಾಣ ಶೇ 53.23ಕ್ಕೆ ಏರಿಕೆಯಾಗಿತ್ತು. ಈ ಬಾರಿ ಶೇ 57.57ಕ್ಕೆ ಹೆಚ್ಚಳವಾಗಿದೆ.

2009ರ ಚುನಾವಣೆಯಲ್ಲಿ ಕಾಂಗ್ರೆಸ್‌ ಶೇ 45.18ರಷ್ಟು ಮತ ಗಳಿಸಿತ್ತು. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮತ ಗಳಿಕೆ ಶೇ 41.32ಕ್ಕೆ ಇಳಿದಿತ್ತು. ಈ ಚುನಾವಣೆಯಲ್ಲಿ ಮತ ಗಳಿಕೆಯ ಪ್ರಮಾಣ ಶೇ 37.15ಕ್ಕೆ ಕುಸಿಯುವ ಮೂಲಕ ಕಾಂಗ್ರೆಸ್‌ ಭಾರಿ ಹಿನ್ನಡೆ ಅನುಭವಿಸಿದೆ.

ಮೂರನೇ ಸ್ಥಾನದಲ್ಲಿ ಎಸ್‌ಡಿಪಿಐ:

ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಅಭ್ಯರ್ಥಿ ಮೊಹಮ್ಮದ್ ಇಲ್ಯಾಸ್‌ 46,839 ಮತಗಳನ್ನು ಗಳಿಸುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು ಚಲಾವಣೆಯಾದ ಮತಗಳ ಪೈಕಿ ಶೇ 3.48ರಷ್ಟು ಎಸ್‌ಡಿಪಿಐ ಅಭ್ಯರ್ಥಿಗೆ ದೊರಕಿವೆ.

7,380 ಮತದಾರರು ‘ನೋಟಾ’ ಆಯ್ಕೆ ಮಾಡಿದ್ದಾರೆ. ಬಹುಜನ ಸಮಾಜ ಪಕ್ಷದಿಂದ ಕಣಕ್ಕಿಳಿದಿದ್ದ ಸತೀಶ್‌ ಸಾಲಿಯಾನ್‌ 4,713 ಮತ ಪಡೆದಿದ್ದಾರೆ.

ಎಂಟನೇ ಗೆಲುವು:

ದಕ್ಷಿಣ ಕನ್ನಡ (ಹಿಂದಿನ ಮಂಗಳೂರು) ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಒಂಬತ್ತು ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. 1991ರ ಚುನಾವಣೆಯಲ್ಲಿ ವಿ. ಧನಂಜಯಕುಮಾರ್‌ ಅವರ ಗೆಲುವಿನೊಂದಿಗೆ ಕ್ಷೇತ್ರ ಬಿಜೆಪಿ ವಶವಾಗಿತ್ತು. ಈ ಚುನಾವಣೆಯಲ್ಲಿ ನಳಿನ್‌ ಕುಮಾರ್‌ ಅವರ ಮೂರನೇ ಗೆಲುವಿನೊಂದಿಗೆ ಎಂಟನೇ ಬಾರಿ ಬಿಜೆಪಿ ಇಲ್ಲಿ ಜಯಭೇರಿ ಬಾರಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !