ಮಹೆಂದಿಗೆ ಇನ್ನಷ್ಟು ರಂಗು

ಮಂಗಳವಾರ, ಜೂನ್ 18, 2019
28 °C

ಮಹೆಂದಿಗೆ ಇನ್ನಷ್ಟು ರಂಗು

Published:
Updated:
Prajavani

ಮೆಹೆಂದಿ ಅಥವಾ ಮದರಂಗಿ ಎಂದರೆ ಹೆಂಗಳೆಯರಿಗೆ ಅಚ್ಚುಮೆಚ್ಚು. ಅದರ ರಂಗು ರಂಗಿನ ಚಿತ್ತಾರಕ್ಕೆ ಮನಸೋಲದವರಿಲ್ಲ. ಸೌಂದರ್ಯ ವೃದ್ಧಿಸುವ ಹಾಗೂ ಯಾವುದೇ ಹಾನಿಯಿಲ್ಲದೇ ತ್ವಚೆಯ ಮೇಲೆ ಆಕರ್ಷಕ ಚಿತ್ತಾರ ಮೂಡಿಸುವ ಮದರಂಗಿ ಅತ್ಯಂತ ಜನಪ್ರಿಯ ಹಾಗೂ ಸಾಂಪ್ರಾದಾಯಿಕ ವಿಧಾನ. ವಿವಾಹ, ಹಬ್ಬ, ಜಾತ್ರೆ ಸಮಯದಲ್ಲಿ ಮೆಹೆಂದಿ ಅದರ ಭಾಗವೇ ಆಗಿರುತ್ತದೆ. ನಿಮಗೂ ಮದರಂಗಿ ಎಂದರೆ ಬಹಳ ಇಷ್ಟವಾಗಿದ್ದು, ಪ್ರತಿ ಬಾರಿ ಹಚ್ಚಿಕೊಂಡ ಬಳಿಕ ಇದರ ಬಣ್ಣ ಗಾಢ, ಆಕರ್ಷಕ ಹಾಗೂ ಸ್ಪಷ್ಟವಾಗಿರಬೇಕು ಎನಿಸಿದರೆ ಈ ಲೇಖನದಲ್ಲಿ ಕೆಲವು ಅಮೂಲ್ಯ ಸಲಹೆಗಳನ್ನು ನೀಡಲಾಗಿದೆ. ಇವು ಸರಳ ಹಾಗೂ ಸುರಕ್ಷಿತವಾಗಿದ್ದು ಮದರಂಗಿಯ ರಂಗನ್ನು ಇನ್ನಷ್ಟು ಗಾಢವಾಗಿಸಲು ನೆರವಾಗುತ್ತದೆ.

ಹಚ್ಚುವ ವಿಧಾನ: ಮದರಂಗಿ ಹಚ್ಚಿಕೊಳ್ಳುವ ಮುನ್ನ ಹಸ್ತ ಹಾಗೂ ಮದರಂಗಿ ಹಚ್ಚಿಕೊಳ್ಳುವ ಭಾಗವನ್ನು ಚೆನ್ನಾಗಿ ತೊಳೆದು ಪೂರ್ಣವಾಗಿ ಒಣಗಿರುವಂತೆ ನೋಡಿಕೊಳ್ಳಿ. ಏಕೆಂದರೆ ನೀರಿನಿಂದ ತೋಯ್ದ ತ್ವಚೆ ವಿಸ್ತಾರಗೊಂಡು ಹಸ್ತ ಹಾಗೂ ಬೆರಳುಗಳ ಚರ್ಮ ನೆರಿಗೆ ನೆರಿಗೆಯಾಗಿರುತ್ತದೆ. ಈ ಸಮಯದಲ್ಲಿ ಹಚ್ಚುವ ಮದರಂಗಿ ಅಕ್ಕ ಪಕ್ಕ ಹರಡಿಬಿಡುತ್ತದೆ. ಹಾಗಾಗಿ ಪೂರ್ಣವಾಗಿ ಒಣಗಿದ ಬಳಿಕ ಹಚ್ಚುವ ಮದರಂಗಿ ಚರ್ಮದಾಳಕ್ಕೆ ಇಳಿಯಲು ಹಾಗೂ ಹರಡದೇ ಇರಲು ಸಾಧ್ಯವಾಗುತ್ತದೆ.

ಮದರಂಗಿ ಹಚ್ಚಿದ ಬಳಿಕ ಬಣ್ಣ ಪೂರ್ಣವಾಗಿ ಚರ್ಮಕ್ಕೆ ಇಳಿಯಬೇಕಾದರೆ ಕೆಲವು ಗಂಟೆಗಳಾದರೂ ಅದನ್ನು ಒಣಗಲು ಬಿಡಬೇಕು. ಅದು ತನ್ನ ಬಣ್ಣವನ್ನು ನೈಸರ್ಗಿಕವಾಗಿಯೇ ಚರ್ಮಕ್ಕೆ ನೀಡುವುದು ಅತ್ಯಂತ ಸುರಕ್ಷಿತವಾಗಿರುತ್ತದೆ. ಆಗಲೇ ಈ ಬಣ್ಣ ಗಾಢವಾಗಿ ಸ್ಪಷ್ಟವಾಗಿ ಮೂಡಲು ಸಾಧ್ಯವಾಗುತ್ತದೆ. ಹಾಗಾಗಿ ಈ ಅವಧಿಯಲ್ಲಿ ಹೆಚ್ಚು ಅಲ್ಲಾಡದೇ, ಅತ್ತಿತ್ತ ಹೋಗದೇ ಇರುವಷ್ಟು ಮುನ್ನೆಚ್ಚರಿಕೆಗಳನ್ನು ಮೊದಲೇ ವಹಿಸಬೇಕು.

ಮೆಹೆಂದಿ ಬೇಗನೆ ಒಣಗಲಿ ಎಂದು ಕೆಲವರು ಫ್ಯಾನ್ ಗಾಳಿಗೆ ಕೈಯ್ಯೊಡ್ಡುತ್ತಾರೆ. ಹಾಗೆ ಮಾಡಿದರೆ ಮೆಹೆಂದಿಯ ರಂಗು ಏರುವುದಿಲ್ಲ. ಅಲ್ಲದೇ ಬಿಸಿಗಾಳಿ ಸೂಸುವ ಹೀಟರ್, ಕೂದಲನ್ನು ಒಣಗಿಸುವ ಬ್ಲೋ ಡ್ರೈಯರ್ ಮೊದಲಾದವುಗಳಿಗೆ ಮದರಂಗಿ ಹಚ್ಚಿದ ಭಾಗ ಒಡ್ಡದಂತೆ ಜಾಗೃತೆ ವಹಿಸಿ. ಈ ಮೂಲಕ ಮದರಂಗಿಯನ್ನು ಒಣಗಿಸಿದರೆ ಬಣ್ಣ ಚರ್ಮಕ್ಕಿಳಿಯುವುದೇ ಇಲ್ಲ. ಅದು ಮತ್ತಷ್ಟು ಗಾಢವಾಗಿ ಮೂಡಬೇಕೆಂದರೆ ಸಕ್ಕರೆ ಮತ್ತು ನಿಂಬೆರಸವನ್ನು ಬಿಸಿಮಾಡಿ ಆಗಾಗ ಮದರಂಗಿಯ ಮೇಲೆ ಹಾಕುತ್ತಿರಿ.

ಕಾರ್ಯಕ್ರಮ ಇರುವ ಒಂದೆರಡು ದಿನಕ್ಕೂ ಮೊದಲೇ ಮೆಹೆಂದಿ ಹಚ್ಚಿ. ಒಂದು ವೇಳೆ ವಿವಾಹ ಮೊದಲಾದ ಪ್ರಮುಖ ಸಂದರ್ಭಕ್ಕಾಗಿ ಮದರಂಗಿ ಹಚ್ಚಿಕೊಳ್ಳುತ್ತಿದ್ದರೆ ಎರಡು ದಿನ ಮುಂಚಿತವಾಗಿ ಮದರಂಗಿ ಹಚ್ಚಿಕೊಳ್ಳುವ ಕಾರ್ಯಕ್ರಮವನ್ನಿರಿಸಿಕೊಳ್ಳಿ. ಸಮಯವನ್ನು ಪರಿಗಣಿಸಿ ಸೂಕ್ತ ಸಮಯದಲ್ಲಿ ಮದರಂಗಿ ಹಚ್ಚಿಕೊಂಡರೆ ಮದರಂಗಿಯ ನೈಸರ್ಗಿಕ ಹಾಗೂ ಪ್ರಖರ ವರ್ಣ ಅತ್ಯುತ್ತಮವಾಗಿ ಕಾಣುತ್ತದೆ.

ಲವಂಗದ ಜಾದೂ: ಬಾಣಲೆಯನ್ನು ಚಿಕ್ಕ ಉರಿಯಲ್ಲಿ ಕೊಂಚವೇ ಬಿಸಿ ಮಾಡಿ. ಇದರಲ್ಲಿ ಕೆಲವು ಲವಂಗಗಳನ್ನು ಹಾಕಿ ಕೈಯ್ಯಾಡಿಸಿ. ಲವಂಗದಿಂದ ಸ್ವಲ್ಪ ಹೊಗೆ ಬರಲು ಪ್ರಾರಂಭವಾದಾಗ ತಕ್ಷಣವೇ ಉರಿ ಆರಿಸಿ ಹೊಗೆಯ ಮೇಲೆ ಮದರಂಗಿ ಹಚ್ಚಿ ಒಣಗಿದ ಬಳಿಕ ನಿವಾರಿಸಿದ ತ್ವಚೆಯ ಭಾಗವನ್ನು ಒಡ್ಡಿ. ಈ ಹೊಗೆ ಮದರಂಗಿಯ ಬಣ್ಣವನ್ನು ಇನ್ನಷ್ಟು ಗಾಢವಾಗಿಸುತ್ತದೆ. 

ನೋವು ನಿವಾರಕ ಬಾಮ್: ಮದರಂಗಿ ಹಚ್ಚಿ, ಒಣಗಿಸಿ ನಿವಾರಿಸಿದ ಬಳಿಕ ಬಣ್ಣ ತಗುಲಿರುವ ಭಾಗಕ್ಕೆ ತೆಳುವಾಗಿ ನೋವು ನಿವಾರಕ ಬಾಮ್ ಹಚ್ಚಿಕೊಳ್ಳಿ. ಮೆಹೆಂದಿ ಹಚ್ಚಿಕೊಂಡ ದಿನವೇ ಈ ಬಾಮ್ ಅನ್ನು ಹಚ್ಚಿಕೊಳ್ಳುವುದು ಅಗತ್ಯ. ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಮಲಗಿದರೆ ಬೆಳಿಗ್ಗೆದ್ದಾಗ ಮದರಂಗಿಯ ಬಣ್ಣ ಗಾಢವಾಗಿರುವುದನ್ನು ಗಮನಿಸಬಹುದು.

ನೀರು ತಾಕಿಸಬಾರದು: ಮದರಂಗಿ ಗಾಢವಾಗಿ ಮೂಡಬೇಕೆಂದರೆ ಒಣಗಿದ ಮದರಂಗಿಯನ್ನು ನಿವಾರಿಸಿದ ಬಳಿಕ ಕೆಲವು ಘಂಟೆಗಳವರೆಗಾದರೂ ನೀರು ತಾಕಿಸದೇ ಇರುವುದು ಅಗತ್ಯ .ಇದು ಬಣ್ಣ ಇನ್ನಷ್ಟು ಸ್ಪಷ್ಟವಾಗಿ ಮೂಡಲು ನೆರವಾಗುತ್ತದೆ.  ಮೆಹೆಂದಿ ತೆಗೆಯುವಾಗ ನೀರು ಬಳಸಿ ತೊಳೆಯಬೇಡಿ ಅಥವಾ ಕೈಗಳಿಂದ ಉಜ್ಜಬೇಡಿ. ಹೀಗೆ ಮಾಡಿದರೆ ಡಿಸೈನ್ ಹಾಳಾಗುವ ಸಾಧ್ಯತೆ ಇರುತ್ತದೆ. ಕೊಬ್ಬರಿ ಎಣ್ಣೆಯನ್ನು ಮೆಹೆಂದಿ ಹಚ್ಚಿರುವ ಭಾಗದ ಮೇಲೆ ಹಾಕಿ ನಿಧಾನವಾಗಿ ಉಜ್ಜಿ ತೆಗೆಯಿರಿ. ಮೆಹೆಂದಿ ತೆಗೆದ ನಂತರ ಒಂದು ದಿನ ಪೂರ್ತಿ ಆ ಭಾಗಕ್ಕೆ ಸೋಪು ಹಚ್ಚಬೇಡಿ. ಹಚ್ಚಲೇಬೇಕು ಎಂದಾದರೆ ಕಡಲೆಹಿಟ್ಟು ಬಳಸುವುದು ಉತ್ತಮ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !