ಅಫ್ಗಾನಿಸ್ತಾನ ಎಂಬ ಸ್ಫೂರ್ತಿಯ ಚಿಲುಮೆ

ಭಾನುವಾರ, ಜೂನ್ 16, 2019
26 °C

ಅಫ್ಗಾನಿಸ್ತಾನ ಎಂಬ ಸ್ಫೂರ್ತಿಯ ಚಿಲುಮೆ

Published:
Updated:
Prajavani

ಇನ್ನೇನು ಎಲ್ಲವೂ ಮುಗಿದೇ ಹೋಯಿತು; ಈ ಬಾರಿ ನಮಗೆ ವಿಶ್ವಕಪ್‌ನಲ್ಲಿ ಆಡಲು ಅವಕಾಶ ಸಿಗುವುದಿಲ್ಲ ಎಂದು ಅಫ್ಗಾನಿಸ್ತಾನ ತಂಡ ನಿರಾಸೆಯಲ್ಲಿತ್ತು. ಏಕೆಂದರೆ ಕ್ರಿಕೆಟ್‌ ’ಲಿಲ್ಲಿಪುಟ್‌‘ ರಾಷ್ಟ್ರ ಅಫ್ಗನ್‌ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿಲ್ಲ. ಆದರೆ, ಮಾಡಿದ ಎಲ್ಲ ಸಾಧನೆಯೂ ಆ ದೇಶದ ಕ್ರಿಕೆಟ್‌ ಪ್ರೇಮಿಗಳ ಪಾಲಿಗೆ ದೊಡ್ಡದೇ. ಅಫ್ಗಾನಿಸ್ತಾನದ ಅಭಿಮಾನಿಗಳ ಪಾಲಿಗೆ ಅವರ ದೇಶದ ಕ್ರಿಕೆಟಿಗರು ಸ್ಫೂರ್ತಿಯ ಚಿಲುಮೆಯಂತೆ. ಏಕೆಂದರೆ, ಅವರದ್ದು ಯಾವಾಗಲೂ ಪಟ್ಟು ಬಿಡದ ಛಲದ ಹೋರಾಟ. 

ಸದಾ ಯುದ್ಧ, ಭಯದ ವಾತಾವರಣ, ಅಂತರರಾಷ್ಟ್ರೀಯ ಸಮುದಾಯದ ಒತ್ತಡದಲ್ಲಿ ಕಳೆದುಹೋಗುವ ಅಫ್ಗಾನಿಸ್ತಾನದಲ್ಲಿ ಕ್ರಿಕೆಟ್‌ ಎಂಬ ಸಭ್ಯರ ಕ್ರೀಡೆಯ ಚಿಲುಮೆ ಚಿಮ್ಮಿಸಿದ್ದು ಇದೇ ಆಟಗಾರರು. ಆದ್ದರಿಂದ ಈ ದೇಶ ಕ್ರಿಕೆಟ್‌ ಅಂಗಳದಲ್ಲಿ ಮಾಡುವ ಪ್ರತಿ ಸಾಧನೆ ಕೂಡ ದೊಡ್ಡ ಸುದ್ದಿಯಾಗುತ್ತದೆ. ಈಗಲೂ ಇದೇ ಕಾರಣಕ್ಕೆ ವಿಶ್ವದ ಗಮನ ಸೆಳೆದಿದೆ.

ಈ ತಂಡದ ಆಟಗಾರರು ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಅರ್ಹತೆ ಪಡೆದುಕೊಳ್ಳಲು 2018ರಲ್ಲಿ ಅರ್ಹತಾ ಟೂರ್ನಿಯಲ್ಲಿ ಆಡಿದ್ದರು. ’ಬಿ‘ ಗುಂಪಿನಲ್ಲಿದ್ದ ಅಫ್ಗನ್‌ ತಂಡದ ಜೊತೆ ಜಿಂಬಾಬ್ವೆ, ಸ್ಕಾಟ್ಲೆಂಡ್‌, ನೇಪಾಳ ಮತ್ತು ಹಾಂಕಾಂಗ್‌ ಇದ್ದವು. ಆರಂಭದ ಮೂರೂ ಪಂದ್ಯಗಳಲ್ಲಿ ಅಫ್ಗನ್‌ ತಂಡ ಸೋತು ಸುಣ್ಣವಾಗಿತ್ತು. ಟೂರ್ನಿಯಿಂದ ಹೊರಬೀಳುವುದು ಖಚಿತವೆಂದುಕೊಂಡಿತ್ತು. ಆದರೆ, ಕೊನೆಯ ಲೀಗ್‌ ಪಂದ್ಯದಲ್ಲಿ ನೇಪಾಳ ಎದುರು ಆರು ವಿಕೆಟ್‌ಗಳಿಂದ ಗೆಲುವು ಸಾಧಿಸಿ ಸೂಪರ್‌ ಸಿಕ್ಸ್‌ ಹಂತಕ್ಕೆ ಅರ್ಹತೆ ಗಳಿಸಿತ್ತು. ಅಲ್ಲಿ ವೆಸ್ಟ್‌ ಇಂಡೀಸ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಮತ್ತು ಐರ್ಲೆಂಡ್‌ ಎದುರು ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿ ಅಲ್ಲಿಯೂ ಕೆರಿಬಿಯನ್ನರನ್ನು ಮಣಿಸಿ ವಿಶ್ವಕಪ್‌ಗೆ ಅರ್ಹತೆ ಗಳಿಸಿಕೊಂಡಿದೆ.

ನೇಪಾಳ ಎದುರು ಗೆಲುವು ಪಡೆದ ಬಳಿಕ ಅಫ್ಗನ್‌ ತಂಡದ ಹಣೆಬರಹವೇ ಬದಲಾಗಿ ವಿಶ್ವಕಪ್‌ ಹಾದಿ ಸುಗಮವಾಯಿತು. ಅಫ್ಗನ್‌ ತಂಡ ಹಿಂದೆಯೂ ಇಂಥ ಅನೇಕ ಅಚ್ಚರಿಯ ಫಲಿತಾಂಶಗಳನ್ನು ನೀಡಿದೆ. 2015ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಸೋಲಿಸಿತ್ತು. ಈಗ ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಲು ಕಾಯುತ್ತಿದೆ.

2001ರಲ್ಲಿ ಅಫ್ಗನ್‌ ತಂಡ ಐಸಿಸಿ ಸದಸ್ಯತ್ವ ಪಡೆದ ಬಳಿಕ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಐಸಿಸಿ ಇಂಟರ್‌ ಕಾಂಟಿನೆಂಟೆಲ್‌ ಕಪ್‌, ಏಷ್ಯನ್‌ ಕ್ರೀಡಾಕೂಟದಲ್ಲಿ ಎರಡು ಬಾರಿ ಪ‍ದಕ ಜಯಿಸಿದೆ. 2010ರಿಂದ ಸತತ ಮೂರು ಬಾರಿ ಟಿ–20 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆಡಿದೆ. ಕಳೆದ ಐದಾರು ವರ್ಷಗಳಲ್ಲಿ ಅಫ್ಗನ್‌ ತಂಡ ಮೇಲಿಂದ ಮೇಲೆ ಟೂರ್ನಿಗಳನ್ನು ಆಡುತ್ತಿದೆ.

ಮೂರು ವರ್ಷಗಳ ಹಿಂದೆ ವೆಸ್ಟ್‌ ಇಂಡೀಸ್‌ ಎದುರು ಸರಣಿ ಆಡಿತ್ತು. ನಂತರ ಗ್ರೇಟರ್ ನೋಯ್ಡಾದಲ್ಲಿ ಐರ್ಲೆಂಡ್‌ ಎದುರು ಸರಣಿ ಆಡಿತ್ತು. ಬಹುತೇಕ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ 2017ರಲ್ಲಿ ಅಫ್ಗನ್‌ ತಂಡಕ್ಕೆ ಟೆಸ್ಟ್‌ ಮಾನ್ಯತೆ ಕೂಡ ಲಭಿಸಿತು. ಈ ತಂಡದ ಚೊಚ್ಚಲ ಟೆಸ್ಟ್‌ ಭಾರತ ತಂಡದ ಎದುರು ನಡೆದಿತ್ತು. ಎರಡು ತಿಂಗಳ ಹಿಂದೆ ಐರ್ಲೆಂಡ್‌ ವಿರುದ್ಧ ಏಕದಿನ ಮತ್ತು ಟೆಸ್ಟ್‌ ಸರಣಿ ಆಡಿತ್ತು. ಈ ಸರಣಿಯ ಏಕೈಕ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿ ಟೆಸ್ಟ್‌ನಲ್ಲಿ ಚೊಚ್ಚಲ ಗೆಲುವು ಪಡೆದು ಬೀಗಿತು.

ಸಣ್ಣ ದೇಶಗಳೊಂದಿಗೆ ಟೂರ್ನಿಯಲ್ಲಿ ನಿರಂತರವಾಗಿ ಗೆಲುವು ಸಾಧಿಸಿದ ಅಫ್ಗನ್‌ ತಂಡದ ಆಟಗಾರರು, ಕೋಟ್ಯಂತರ ಯುವಕರ ಕನಸಾದ ಐಪಿಎಲ್‌ನಲ್ಲಿ ಆಡುವ ಅವಕಾಶ ಕೂಡ ಪಡೆದರು. ರಶೀದ್‌ ಖಾನ್‌, ಮೊಹಮ್ಮದ್ ನಬಿ ಮತ್ತು ಮುಜೀಬ್‌ ಜದ್ರಾನ್‌ ಈ ಬಾರಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲಿದ್ದರು. ಇದರಿಂದ ಅಫ್ಗನ್‌ ಕ್ರಿಕೆಟ್‌ ಪ್ರೇಮಿಗಳು ’ಸನ್‌ರೈಸರ್ಸ್‌ ತವರಿನ ತಂಡ‘ ಎಂದು ಅಭಿಮಾನದಿಂದ ಬೀಗಿದರು.

ಕಳೆದ 15 ವರ್ಷಗಳಲ್ಲಿ ಅನೇಕ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿರುವ ಅಫ್ಗನ್‌ ತಂಡ ಈಗ ಮತ್ತೊಂದು ಸವಾಲಿಗೆ ಸಜ್ಜಾಗಿದೆ. ಮೇ 30ರಿಂದ ಜುಲೈ 14ರ ವರೆಗೆ ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ನಡೆಯಲಿರುವ ’ಕ್ರಿಕೆಟ್‌ ಒಲಿಂಪಿಕ್ಸ್‌‘ನಲ್ಲಿ ಭಾಗವಹಿಸಲಿದೆ. ಗುಲ್ಬದಿನ್‌ ನಬಿ ತಂಡವನ್ನು ಮುನ್ನಡೆಸಲಿದ್ದಾರೆ. ರಶೀದ್ ಖಾನ್‌, ಸೈಮುಲ್ಲಾ ಶಿನವಾರಿ, ಹಮೀದ್‌ ಹಸನ್‌, ಅಸ್ಗರ್‌ ಅಫ್ಗನ್‌ ಹೀಗೆ ಪ್ರಮುಖ ಆಟಗಾರರು ತಂಡದ ಶಕ್ತಿ ಎನಿಸಿದ್ದಾರೆ.

ಅಫ್ಗನ್‌ ತಂಡದ ಈ ಯಶಸ್ಸಿನ ಹಿಂದೆ ವೆಸ್ಟ್‌ ಇಂಡೀಸ್‌ನ ಫಿಲ್‌ ಸಿಮನ್ಸ್ ಅವರ ಶ್ರಮವಿದೆ. ಅಫ್ಗನ್‌ ತಂಡದ ಕೋಚ್‌ ಆಗಿರುವ ಅವರು ವಿಶ್ವಕಪ್‌ನಲ್ಲಿಯೂ ತಂಡಕ್ಕೆ ತರಬೇತಿ ನೀಡಲಿದ್ದಾರೆ. ಇವರ ತರಬೇತಿಯ ಮ್ಯಾಜಿಕ್‌ ವಿಶ್ವಕಪ್‌ನಲ್ಲಿಯೂ ನಡೆಯುವುದೇ ಎನ್ನುವ ಕುತೂಹಲ ಉಳಿದಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !