'ಬೀದಿ ಬದಿ' ಬಿಬಿಎಂಪಿ ಕಾಳಗ

ಮಂಗಳವಾರ, ಜೂನ್ 18, 2019
28 °C

'ಬೀದಿ ಬದಿ' ಬಿಬಿಎಂಪಿ ಕಾಳಗ

Published:
Updated:

ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಯನ್ನು ಮಾನವೀಯ ನೆಲೆಯಿಂದ ನೋಡುವ ಅಗತ್ಯವಿದೆ ಎನ್ನುವುದು ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಕಾರ್ಯಕರ್ತರ ಅನಿಸಿಕೆ.  

ಬೀದಿ ಬದಿ ವ್ಯಾಪಾರ ಪಕ್ಕಾ ಲೀಗಲ್‌: ಎತ್ತಂಗಡಿಯೇ ಕಾನೂನುಬಾಹಿರ

ವಿನಯ್‌ ಶ್ರೀನಿವಾಸನ್‌, 

ಪರ್ಯಾಯ ಕಾನೂನು ವೇದಿಕೆ, ಬೆಂಗಳೂರು ಜಿಲ್ಲಾ ಬೀದಿ ಬದಿ ವ್ಯಾಪಾರ ಸಂಘಟನೆಗಳ ಒಕ್ಕೂಟ

* ಬೀದಿ ಬದಿ ವ್ಯಾಪಾರ ಅಕ್ರಮ ಅಥವಾ ಕಾನೂನುಬಾಹಿರವಲ್ಲ. ಭಾರತೀಯ ಕಾನೂನು ಅಡಿ ಬೀದಿ ಬದಿ ವ್ಯಾಪಾರ ಪಕ್ಕಾ ಕಾನೂನುಬದ್ಧವಾದ ಹಕ್ಕು. ಅದನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಯುಪಿಎ–2 ಸರ್ಕಾರದ ಅವಧಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ 2014 ಜಾರಿಗೆ ತರಲಾಗಿದೆ.

* ರಸೆಲ್‌ ಮಾರುಕಟ್ಟೆ ಸುತ್ತಮುತ್ತ ಅಕ್ರಮ ಕಟ್ಟಡಗಳ ತೆರವು ಮತ್ತು ಬೀದಿ ಬದಿ ವ್ಯಾಪಾರಿಗಳ ಎತ್ತಂಗಡಿ ಮಾಡಿರುವ ಬಿಬಿಎಂಪಿ ಕ್ರಮ ಕಾನೂನುಬಾಹಿರ. ಅತಿಕ್ರಮಣ ತೆರವು ಕಾರ್ಯಾಚಾರಣೆಗೆ ಒಂದು ತಿಂಗಳು ಮುಂಚಿತವಾಗಿ ಬಿಬಿಎಂಪಿ ವ್ಯಾಪಾರಿಗಳಿಗೆ ನೋಟಿಸ್‌ ನೀಡಬೇಕಾಗಿತ್ತು. ಅದನ್ನು ಪಾಲಿಸಿಲ್ಲ. 

* ಬಿಬಿಎಂಪಿ ಅಧಿಕಾರಿಗಳಿಗೆ ಅತಿಕ್ರಮಣದ ವ್ಯಾಖ್ಯಾನದ ಬಗ್ಗೆ ಸ್ಪಷ್ಟನೆ ಇಲ್ಲ. ಅಗ್ನಿ ಅನಾಹುತ ಸಂಭವಿಸಿದರೆ ಹೇಗೆ ನಿಯಂತ್ರಿಸುತ್ತೀರಿ ಎಂದು ಹೈಕೋರ್ಟ್‌ ಪ್ರಶ್ನಿಸಿದರೆ.ಆದರೆ, ಹೈಕೋರ್ಟ್‌ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡ ಬಿಬಿಎಂಪಿ ಅಧಿಕಾರಿಗಳು ಬೆಂಕಿ ನಂದಿಸುವ ಮಾರ್ಗೋಪಾಯ ಕಂಡು ಹಿಡಿಯುವ ಬದಲು ಸಣ್ಣಪುಟ್ಟ ವರ್ತಕರ ಅಡುಗೆ ಮನೆಯ ಒಲೆಯ ಬೆಂಕಿ ಆರಿಸಿದ್ದಾರೆ. ಸಾರ್ವಜನಿಕರು, ಸ್ಥಳೀಯರು, ವರ್ತಕರೊಂದಿಗೆ ಪೂರ್ವಭಾವಿಯಾಗಿ ಚರ್ಚಿಸದೆ ಬಿಬಿಎಂಪಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ರಂಜಾನ್‌ ಹಬ್ಬದ ಸಮಯದಲ್ಲಿ ಏಕಾಏಕಿ ಅತಿಕ್ರಮಣ ತೆರುವು ಮತ್ತು ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. 

* ನಿಜವಾಗಿಯೂ ಅತಿಕ್ರಮಣ ನಡೆದಿದ್ದರೆ ನೋಟಿಸ್‌ ನೀಡಿ ಕಾನೂನು ರೀತಿ ಕ್ರಮ ಕೈಗೊಳ್ಳಲಿ. ನಮ್ಮದೇನೂ ಅಭ್ಯಂತರ ಇಲ್ಲ. ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವಂತೆ ಅಥವಾ ಅತಿಕ್ರಮಣ ತೆರವುಗೊಳಿಸುವಂತೆ ಹೈಕೋರ್ಟ್‌ ಎಲ್ಲಿಯೂ ಹೇಳಿಲ್ಲ. ಹೈಕೋರ್ಟ್‌ ಲಿಖಿತ ಆದೇಶವನ್ನು ಬಿಬಿಎಂಪಿ ಅಧಿಕಾರಿಗಳು ತೋರಿಸುತ್ತಿಲ್ಲ. ಫೈರ್‌ ಆಡಿಟ್‌ ರಿಪೋರ್ಟ್‌ ತೋರಿಸುತ್ತಿಲ್ಲ ಏಕೆ?

* ಒಂದು ವೇಳೆ ಹೈಕೋರ್ಟ್ ಏನಾದರೂ ಹಾಗೆ ಹೇಳಿದ್ದರೆ ರಂಜಾನ್‌ ಮುಗಿಯುವವರೆಗೂ ಕಾಯಬಹುಹುದಿತ್ತು. ರಸೆಲ್‌ ಮಾರುಕಟ್ಟೆ ಸುತ್ತಮುತ್ತ ಕೇವಲ ಮುಸ್ಲಿಂ ವರ್ತಕರಿಲ್ಲ. ಎಲ್ಲ ಜಾತಿ, ಜನಾಂಗ ಮತ್ತು ಭಾಷೆಯ ವರ್ತಕರು ಅಲ್ಲಿದ್ದಾರೆ. ಹಬ್ಬದ ವ್ಯಾಪಾರಕ್ಕಾಗಿ ಸಾಲ ಮಾಡಿ ಹಣ ತಂದಿದ್ದರು. ಇದೊಂದು ತಿಂಗಳು ವ್ಯಾಪಾರ ಚೆನ್ನಾಗಿ ಆಗಿದ್ದರೆ ನಾಲ್ಕೈದು ತಿಂಗಳು ವರ ಜೀವನ ಸಾಗುತಿತ್ತು. ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಯನ್ನು ಮಾನವೀಯ ನೆಲೆಯಿಂದ ನೋಡುವ ಅವಶ್ಯಕತೆ ಇದೆ.   

* ಬಿಬಿಎಂಪಿ ಅಧಿಕಾರಿಗಳು ಮತ್ತು ಟ್ರಾಫಿಕ್‌ ಪೊಲೀಸರು ವರ್ತಕರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರು. ಇದು ಒಂದು ದಿನದ ವ್ಯಥೆಯಲ್ಲ. ಪದೆ ಪದೆ ಇದು ಮರುಕಳಿಸುತ್ತಿರುತ್ತದೆ. 

* ಬೆಂಗಳೂರಿನಲ್ಲಿ 1 ಲಕ್ಷದಿಂದ 1.50 ಲಕ್ಷ ಬೀದಿ ಬದಿ ವರ್ತಕರಿದ್ದಾರೆ. ಒಂದೂವರೆ ವರ್ಷದ ಹಿಂದೆ ಬಿಬಿಎಂಪಿ 25 ಸಾವಿರ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿತ್ತು. ಆ ಪೈಕಿ 16 ಸಾವಿರ ಜನರಿಗೆ ಗುರುತಿನ ಚೀಟಿ ನೀಡಿತ್ತು. ಏಕಾಏಕಿ ಗುರುತಿನ ಚೀಟಿ ವಿತರಿಸುವ ಪ್ರಕ್ರಿಯೆಯನ್ನು ನಿಲ್ಲಿಸಿತ್ತು. ರಸೆಲ್‌ ಮಾರ್ಕೆಟ್‌ ಸುತ್ತಮುತ್ತಲಿನ ವ್ಯಾಪಾರಿಗಳಿಗೆ ಇನ್ನೂ ಗುರುತಿನ ಚೀಟಿ ನೀಡಿಲ್ಲ. ಈ ಬಗ್ಗೆ ಬಿಬಿಎಂಪಿ ಜಂಟಿ ಆಯುಕ್ತರಿಗೆ (ಪೂರ್ವ ವಲಯ) ಮನವಿ ಕೂಡ ಸಲ್ಲಿಸಲಾಗಿದೆ. ವಿಧಾನಸಭಾ ಚುನಾವಣೆ ಮುಗಿದ ಮೇಲೆ ಭರವಸೆ ನೀಡಿದ್ದರು. ಲೋಕಸಭಾ ಚುನಾವಣೆ ಮುಗಿದರೂ ವರ್ತಕರಿಗೆ ಗುರುತಿನ ಚೀಟಿ ನೀಡಿಲ್ಲ. ಈಗ ಹೈಕೋರ್ಟ್‌ ಆದೇಶವನ್ನು ನೆಪವಾಗಿಟ್ಟುಕೊಂಡು ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುತ್ತಿದ್ದಾರೆ. 

* ಇದೇ ರೀತಿ ಏಪ್ರಿಲ್‌ 23ರಂದು ಮಲ್ಲೇಶ್ವರ ಮಾರುಕಟ್ಟೆ ವರ್ತಕರನ್ನು ಕೂಡ ಎತ್ತಂಗಡಿ ಮಾಡಲಾಗಿದೆ. ಮಲ್ಲೇಶ್ವರ ಮತ್ತು ರಸೆಲ್‌ ಮಾರುಕಟ್ಟೆ ಬೀದಿ ಬದಿ ವರ್ತಕರ ಎತ್ತಂಗಡಿ ವಿರುದ್ಧ ಪರ್ಯಾಯ ಕಾನೂನು ವೇದಿಕೆ, ಬೆಂಗಳುರು ಜಿಲ್ಲಾ ಬೀದಿ ಬದಿ ವ್ಯಾಪಾರ ಸಂಘಟನೆಗಳ ಒಕ್ಕೂಟ ಜಂಟಿಯಾಗಿ ಬೀದಿಗಿಳಿದು ಹೋರಾಟ ನಡೆಸಲಿದೆ. ಕಾನೂನು ಹೋರಾಟ ಕೂಡ ಮುಂದುವರಿಯಲಿದೆ. 

 

ಎಸ್‌.ಜಿ. ರವೀಂದ್ರ

ಬಿಬಿಎಂಪಿ, ವಿಶೇಷ ಆಯುಕ್ತ (ಮಾರುಕಟ್ಟೆ ವಿಭಾಗ)

* ಬೀದಿ ಬದಿ ವ್ಯಾಪಾರ ಕಾನೂನುಬಾಹಿರವಲ್ಲ ಎಂದು ಎಲ್ಲಿ ಬೇಕೋ ಅಲ್ಲಿ ವ್ಯಾಪಾರ ಮಾಡಬಹುದು ಎಂದು ಅರ್ಥ ಅಲ್ಲ. ಇವರಿಗೆ ರಸ್ತೆ, ಫುಟ್‌ಪಾತ್‌, ಅಂಡರ್‌ಪಾಸ್‌, ಖಾಲಿ ಜಾಗ ಸಾಕಾಗುವುದಿಲ್ಲ. ನಾಳೆ ವಿಧಾನಸಸೌಧ, ವಿಕಾಸಸೌಧ, ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ನಲ್ಲೂ ಜಾಗ ಕೇಳುತ್ತಾರೆ. ಕೊಳೆತ ತರಕಾರಿಗಳನ್ನು ರಸ್ತೆಯಲ್ಲಿಯೇ ಬಿಸಾಕಿ ಹೋಗುತ್ತಾರೆ. ವ್ಯಾಪಾರ ಮಾಡುವುದಷ್ಟೇ ತಮ್ಮ ಕೆಲಸ, ಕಸ ತೆಗೆಯುವುದು ಬಿಬಿಎಂಪಿ ಕೆಲಸ ಎಂದು ಭಾವಿಸಿದ್ದಾರೆ. 

* ಸಾವಿರಾರು ಜನರು ಸೇರುವ ಮಾರುಕಟ್ಟೆಯಲ್ಲಿ ಬೆಂಕಿ ದುರಂತ ಸಂಭವಿಸಿದರೆ ಬೆಂಕಿ ನಂದಿಸಲು ಅಗ್ನಿಶಾಮಕ ಠಾಣೆಯ ವಾಹನಗಳು ಸಾರಾಗವಾಗಿ ಸ್ಥಳವನ್ನು ತಲುಪಲು ಸಾಧ್ಯವೇ ಮತ್ತು ಮಾರುಕಟ್ಟೆ ಮೂಲ ಸ್ಥಿತಿಯಲ್ಲಿಯೇ ಇವೆಯೇ ಎಂಬ ಎರಡು ಪ್ರಶ್ನೆಗಳನ್ನು ಮುಂದಿಟ್ಟಿತ್ತು. ಮಾರುಕಟ್ಟೆ ಸುತ್ತಮುತ್ತ 9 ಅಡಿ ಅಡಿ ಬೆಂಕಿ ನಂದಿಸುವ ವಾಹನ ಸಂಚಾರಕ್ಕೆ ಯಾವುದೇ ಅಡೆತಡೆ ಇರಬಾರದು ಎಂದು ಪರೀಕ್ಷಿಸುವಂತೆ ಸೂಚನೆ ನೀಡಿತ್ತು. ಅದರ ಆಧಾರದ ಮೇಲೆ ಕಾರ್ಯಾಚಾರಣೆ ನಡೆಸಲಾಗಿದೆ. 

* ಹೈಕೋರ್ಟ್ ಆದೇಶ ಕುರಿತು ಸುಳ್ಳು ಹೇಳಲು ಸಾಧ್ಯವೆ? ಸ್ಥಳೀಯ ಶಾಸಕರು, ಕಾರ್ಪೊರೇಟರ್‌ ಜತೆ ಚರ್ಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇದೇನು ರಹಸ್ಯ ಕಾರ್ಯಾಚರಣೆ ಅಲ್ಲ. ಯಾವುದೇ ಮುಚ್ಚುಮರೆ ಇಲ್ಲ. ಮಾರುಕಟ್ಟೆ ಮೂಲಸ್ವರೂಪ ಬದಲಾಗಿದೆಯಾ ಎಂದು ಹೈಕೋರ್ಟ್ ಪ್ರಶ್ನಿಸಿದರೆ ಏನರ್ಥ. ವರ್ತಕರು ಬೇಕಾದರೆ ಹೈಕೋರ್ಟ್‌ ಆದೇಶ ಪಡೆದು, ಪರೀಕ್ಷಿಸಬಹುದು.

* ರಂಜಾನ್‌ ಮಾತ್ರವಲ್ಲ, ಒಂದು ವರ್ಷ ಮುಂಚಿತವಾಗಿ ಹೇಳಿದರೂ ಅವರು ಕೇಳುವುದಿಲ್ಲ. ಏನಾದರೊಂದು ನೆಪ ಹೇಳುತ್ತಾರೆ. ಪೊಲೀಸರ ಎದುರು ಒಂದು ನಾಟಕ, ಬಿಬಿಎಂಪಿ ಅಧಿಕಾರಿಗಳ ಬಳಿ ಮತ್ತೊಂದು ರೀತಿಯ ನಾಟಕ. ಮಾಧ್ಯಮದವರ ಮುಂದೆ ಬೇರೆ ರೀತಿಯ ನಾಟಕ ಮಾಡುತ್ತಾರೆ. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಲಂಚದ ಆರೋಪ ಮಾಡುತ್ತಾರೆ. ಮಾನವ ಹಕ್ಕುಗಳ ಹೋರಾಟಗಾರರನ್ನೂ ದಾರಿ ತಪ್ಪಿಸುತ್ತಾರೆ. 

* ಬೀದಿ ಬದಿ ವ್ಯಾಪಾರ ಎಂದರೆ ವಶಂಪರಂಪರೆಯಾಗಿ ಬಂದ ವ್ಯಾಪರವಲ್ಲ.  ಮುಂಜಾನೆ ವ್ಯಾಪಾರ ಆರಂಭಿಸಿ ಸಂಜೆ ಮುಗಿಸಬೇಕು.  ಆದರೆ, ಇವರು ರಸ್ತೆ, ಫುಟ್‌ಪಾತ್‌ಗಳ ಮೇಲೆ ಶಾಶ್ವತ ಟೆಂಟ್‌ ಹಾಕಿಕೊಂಡಿರುತ್ತಾರೆ. ಪಾರ್ಕಿಂಗ್‌ ಜಾಗವನ್ನೂ ಅತಿಕ್ರಮಣ ಮಾಡಿಕೊಂಡಿದ್ದಾರೆ. ಮೇಲಾಗಿ ಇಲ್ಲಿ ವ್ಯಾಪಾರ ಮಾಡುವವರಲ್ಲಿ ಯಾರೂ ಸ್ಥಳೀಯರಿಲ್ಲ. ಎಲ್ಲ ಹೊರಗಿನಿಂದ ಬಂದವರು. ಗಲೀಜು ಮಾಡಿ ತೆರಳುತ್ತಾರೆ. ಸ್ವಚ್ಛತೆ ಕಾಪಾಡುವುದಿಲ್ಲ. ರಸೆಲ್‌ ಮಾರುಕಟ್ಟೆ ಬಳಿ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ಇದೆ. ಅಲ್ಲಿಯ ಪರಿಸರ ಅಷ್ಟು ಕೊಳಕಾಗಿದ್ದು, ಸುತ್ತಮುತ್ತ ಗಬ್ಬುನಾತ ಹರಡಿದೆ. ಇದನ್ನು ಹೇಗೆ ಸಹಿಸುವುದು ಹೇಳಿ? ಸ್ವಚ್ಛ ಮಾಡಲು ಹೇಳಿದರೆ ಬೆಂಕಿ ಹಾಕಿ ಹೋಗುತ್ತಾರೆ.      

* ರಸೆಲ್‌ ಮಾರುಕಟ್ಟೆ ಮತ್ತು ಮಲ್ಲೇಶ್ವರದ ಬೀದಿ ಬದಿ ವ್ಯಾಪಾರಸ್ಥರಿಗೆ ಒಬ್ಬರಿಗೂ ಗುರುತಿನ ಚೀಟಿ ಇಲ್ಲ. ಅತಿಕ್ರಮಣ ತೆರವು ಕಾರ್ಯಾಚಾರಣೆ ವೇಳೆ ಯಾರೊಬ್ಬರು ಗುರುತಿನ ಚೀಟಿ ತಂದು ತೋರಿಸಲಿಲ್ಲ. ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸುವ ಸಮೀಕ್ಷೆ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟೊಂದು ಜನರಿಗೆ ಗುರುತಿನ ಚೀಟಿ ನೀಡುವುದು ಸಾಧ್ಯವಿಲ್ಲ. 

* ರಸೆಲ್‌ ಮಾರುಕಟ್ಟೆ ಸುತ್ತಮುತ್ತ ರಸ್ತೆ, ಪಾದಚಾರಿ ಮಾರ್ಗ, ಪಾರ್ಕಿಂಗ್‌ ಜಾಗ, ಮೈದಾನ ಹೀಗೆ ಎಲ್ಲಂದರಲ್ಲಿ ಅತಿಕ್ರಮಣ ನಡೆದಿದೆ.  ರಸ್ತೆ ಮತ್ತು ಫುಟ್‌ಪಾತ್‌ಗಳನ್ನು ಎರಡರಿಂದ ಮೂರು ಅಡಿ ಜಾಗಗಳನ್ನು ಅತಿಕ್ರಮಿಸಿಕೊಳ್ಳಲಾಗಿದೆ. ಇದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಫುಟ್‌ಪಾತ್‌ ಅತಿಕ್ರಮಣದಿಂದಾಗಿ ಜನರು ಮಾರುಕಟ್ಟೆಯಲ್ಲಿ ಸ್ವಚ್ಛಂದವಾಗಿ ಓಡಾಡುವಂತಿಲ್ಲ. ಆಯಾಸದವಾದರೆ ಕುಳಿತುಕೊಳ್ಳಲು ಜಾಗವಿಲ್ಲ. ಇನ್ನು ವಾಹನಗಳು ಮಾರುಕಟ್ಟೆಯಲ್ಲಿ ಸಂಚರಿಸುವುದು ಕನಸಿನ ಮಾತು. ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ಪ್ರಾರ್ಥನಾ ಮಂದಿರ ಕಟ್ಟಿಕೊಂಡಿದ್ದಾರೆ. ಇದನ್ನು ಪ್ರಶ್ನಿಸುವಂತಿಲ್ಲ.  

* ಫುಟ್‌ಪಾತ್‌ ಇರುವುದು ಜನರು ಓಡಾಡಲು. ರಸ್ತೆ ಇರೋದು ವಾಹನ ಓಡಾಡಲು. ಬೀದಿ ಬದಿ ವರ್ತಕರು ವ್ಯಾಪಾರ ಮಾಡಲು ಅಲ್ಲ. ಪಾರ್ಕಿಂಗ್‌ ಜಾಗ ಅತಿಕ್ರಮಿಸಿರುವುದರಿಂದ ಜನರು ಮಾರುಕಟ್ಟೆಗೆ ಬರಲು ಹಿಂಜರಿಯುತ್ತಿದ್ದಾರೆ. ನೋಟಿಸ್‌ ನೀಡಿಲ್ಲ ಎಂದು ಹೇಳುವುದು ತಪ್ಪು ಮಾಹಿತಿ. ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಈ ಪ್ರದೇಶದಲ್ಲಿ ಮೈಕ್‌ನಲ್ಲಿ ಮಾಹಿತಿ ನೀಡಲಾಗಿದೆ. ಬಿಬಿಎಂಪಿ ಅಧಿಕಾರಿಗಳು ವರ್ತಕರ ಜತೆ ಮೂರ‍್ನಾಲ್ಕು ಬಾರಿ ಸಭೆ ನಡೆಸಿದ್ದಾರೆ. ನಾಲ್ಕೈದು ದಿನಗಳ ಮೊದಲೇ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕ ಮಾಹಿತಿ ನೀಡಲಾಗಿದೆ. 

* ಬೆಂಕಿ ಅನಾಹುತ ನಡೆದಾಗ ಮುಂಜಾಗ್ರತೆಯಾಗಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗದಿದ್ದರೆ ಮಾರುಕಟ್ಟೆಗಳನ್ನು ಮುಚ್ಚುವುದು ಲೇಸು. ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಇದ್ದರೆ ಮಾತ್ರ ಮಾರುಕಟ್ಟೆ ತೆರೆಯಿರಿ, ಇಲ್ಲದಿದ್ದರೆ ಮುಚ್ಚುವಂತೆ ಹೈಕೋರ್ಟ್ ಕಡ್ಡಿಮುರಿದಂತೆ ತಾಕೀತು ಮಾಡಿದೆ. ರಸೆಲ್‌ ಮಾರುಕಟ್ಟೆ ನಂತರ ಮಡಿವಾಳ ಮಾರುಕಟ್ಟೆಯಲ್ಲಿ ತೆರವು ಕಾರ್ಯಾಚರಣೆ ಆರಂಭಿಸುತ್ತೇವೆ. ನಗರದ ಎಲ್ಲ ಮಾರುಕಟ್ಟೆಗಳಿಗೂ ಅಗ್ನಿಶಾಮಕ ದಳದ ಎನ್‌ಒಸಿ ಕಡ್ಡಾಯ. ಇಲ್ಲದಿದ್ದರೆ ಖಂಡಿತ ಬೀಗ. ಇದರಲ್ಲಿ ಯಾವುದೇ ರಾಜಿ ಇಲ್ಲ. ನಗರದ ಎಲ್ಲ ಮಾರುಕಟ್ಟೆಗಳಿಗೂ ಇದು ಅನ್ವಯವಾಗುತ್ತದೆ.

ಮಾಫಿಯಾ ಹಿಡಿತದಲ್ಲಿ ವರ್ತಕರು!

ಬೀದಿ ಬದಿ ವ್ಯಾಪಾರ ಕಣ್ಣಿಗೆ ಕಾಣಿಸಿದಷ್ಟು ಸರಳವಿಲ್ಲ. ಇಡೀ ವ್ಯಾಪಾರ ಮಾಫಿಯಾ ಹಿಡಿತದಲ್ಲಿದೆ. ಬೀದಿ ಬದಿ ವರ್ತಕರಿಂದ ತಮ್ಮ ವಹಿವಾಟಿಗೂ ತೊಂದರೆಯಾಗುತ್ತಿದೆ. ಅವರಿಗೆ ಜಾಗ ಕೊಟ್ಟಿದ್ದು ಏಕೆ? ಮೊದಲು ಅವರನ್ನು ಎತ್ತಂಗಡಿ ಮಾಡಿ ಎಂದು ರೂಢಿಗತ ಮಾರುಕಟ್ಟೆ ವ್ಯಾಪಾರಸ್ಥರು ಬಿಬಿಎಂಪಿಗೆ ದೂರು ಸಲ್ಲಿಸಿದ್ದಾರೆ ಎನ್ನುತ್ತಾರೆ ವಿಶೇಷ ಆಯುಕ್ತ ರವೀಂದ್ರ. 

ಮಾರುಕಟ್ಟೆಗಳಲ್ಲಿ ವಾಹನಗಳ ಪಾರ್ಕ್‌ ಮಾಡಲು ಜಾಗ ಇಲ್ಲದ ಕಾರಣ ಗ್ರಾಹಕರು ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ ಎನ್ನುವುದು ಅಂಗಡಿ ಮಾಲೀಕರು ದೂರು ನೀಡಿದ್ದಾರೆ. ಹೊಸ ಮತ್ತು ಹಳೆಯ ಮಾರುಕಟ್ಟೆಗಳ ಸುತ್ತಮುತ್ತ ಯಾವುದೇ ಕಾರಣಕ್ಕೂ ವಾಹನಗಳ ಅನಧಿಕೃತ ಪಾರ್ಕಿಂಗ್‌ಗೆ ಜಾಗ ನೀಡದಂತೆ ಟ್ರಾಫಿಕ್‌ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಟ್ರಾಫಿಕ್‌ ಸಮಸ್ಯೆ ನಿರ್ವಹಣೆ ಪೊಲೀಸರ ಹೊಣೆ. ಈ ವಿಷಯವನ್ನು ಹೈಕೋರ್ಟ್‌ಗೆ ತಿಳಿಸುವುದಾಗಿ ಹೇಳಿದರು.

ಟ್ರಾಫಿಕ್‌ಗೆ ಮತ್ತು ಜನರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡದಿದ್ದರೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಮಾಡಿ ಕೊಡಬಹುದು. ಕೆ.ಆರ್‌. ಮಾರುಕಟ್ಟೆ ಮೆಟ್ರೊ ಸ್ಟೇಷನ್‌ ಮಾರ್ಗ ಮತ್ತು ರಸ್ತೆಗಳಲ್ಲಿ ಟರ್ಪಾಲಿನ್‌ ಟೆಂಟ್‌ ಹಾಕಿಕೊಂಡಿದ್ದಾರೆ. ಸುತ್ತಮುತ್ತಲಿನ ಜಾಗ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಕಿರಿದಾದ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡಿರುತ್ತಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !