25 ನಿದ್ದೆ ಮಾತ್ರೆ ನುಂಗಿದ್ದ ಮಾ. ಹಿರಣ್ಣಯ್ಯ!

ಬುಧವಾರ, ಜೂನ್ 19, 2019
26 °C

25 ನಿದ್ದೆ ಮಾತ್ರೆ ನುಂಗಿದ್ದ ಮಾ. ಹಿರಣ್ಣಯ್ಯ!

Published:
Updated:
Prajavani

ರಂಗಭೂಮಿಯಲ್ಲಿ ವಿಶಿಷ್ಟ ಮಾತುಗಾರಿಕೆಯಿಂದ ಗಮನ ಸೆಳೆದ ನಟ ಮಾ. ಹಿರಣ್ಣಯ್ಯ. ಕುಮಾರಸ್ವಾಮಿ ಬಡಾವಣೆಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಶನಿವಾರ ಸಂಜೆ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ದುಡಿದ ಕಲಾವಿದರು ಅಗಲಿದ ನಟನ ಜೊತೆಗಿನ ಒಡನಾಟವನ್ನು ಬಿಚ್ಚಿಟ್ಟರು. 

‘ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ಮೀಸೆ ಮುನಿಯಪ್ಪ ಪ್ರತಿಭಾವಂತ ಕಲಾವಿದ. ಓದು–ಬರಹ ಬರದಿದ್ದರೂ ನಾವು ಯಾರಾದರೂ ಓದಿದ್ದನ್ನು ಕೇಳಿಸಿಕೊಂಡು ನಾಟಕ ಮಾಡುತ್ತಿ ದ್ದರು. ನಮ್ಮ ಯಜಮಾನರಿಗಿಂತ (ಮಾ.ಹಿರಣ್ಣಯ್ಯ) ಅವರೇ ಮೊದಲು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದರು. 1967 ಅಥವಾ 68ನೇ ಇಸವಿ ಇರಬೇಕು, ಅವರು ಹೃದಯಾಘಾತದಿಂದ ನಿಧನರಾದರು. ಅವರ ಸಾವು ನಮ್ಮ ಯಜಮಾನರನ್ನು ತೀವ್ರವಾಗಿ ಕಾಡಿತು. ಊಟ ಮಾಡಿ ಎಂದು ನಮ್ಮ ಶಾಂತಕ್ಕ (ಮಾ.ಹಿರಣ್ಣಯ್ಯ ಅವರ ಪತ್ನಿ) ಹೇಳಿದಾಗ, ‘ಇರು ಬರ್ತಿನಿ ಎಂದು ಹೇಳಿ’ ಹೊರಗೆ ಹೋದರು. ನೇರವಾಗಿ ಔಷಧಿ ಅಂಗಡಿಗೆ ಹೋಗಿ ಸುಮಾರು 25 ಮಾತ್ರೆಗಳನ್ನು ತೆಗೆದುಕೊಂಡು ಬಂದು ಸೇವಿಸಿದ್ದರು. ಆರೋಗ್ಯವಂತ ವ್ಯಕ್ತಿ ಆ ಮಾತ್ರೆಯ ಅರ್ಧ ಚೂರು ಸೇವಿಸಿದ್ರೂ ಸಾಕು 12 ಗಂಟೆ ಗಾಢನಿದ್ರೆಗೆ ಜಾರುತ್ತಾನೆ. ಇವರು ಅದೆಷ್ಟು ಮಾತ್ರೆಗಳನ್ನು ಸೇವಿಸಿದ್ದರೊ ಗೊತ್ತಿಲ್ಲ. ಅಸ್ವಸ್ಥರಾಗಿದ್ದನ್ನು ಗಮನಿಸಿ, ಕೂಡಲೇ ಆಸ್ಪತ್ರೆಗೆ ದಾಖಲಿಸಿದೆವು, ವೈದ್ಯರು ಉಳಿಯುವುದು ಕಷ್ಟ ಎಂದರು. ಅವರು ಬದುಕುಳಿದರು. ಇಲ್ಲದಿದ್ದರೆ ನಮ್ಮನ್ನು ಅಗಲಿ ಸುಮಾರು 50 ವರ್ಷ ಆಗಿರುತ್ತಿತ್ತು’ ಎಂದು ಹಾಸ್ಯ ನಟ ಡಿಂಗ್ರಿ ನಾಗರಾಜ್‌ ಹೇಳಿದಾಗ ವೇದಿಕೆಯಲ್ಲಿದ್ದ ಎಲ್ಲರ ಮುಖದಲ್ಲೂ ಅಚ್ಚರಿ.

‘ಅವರ ದುಡ್ಡನ್ನು ಸಾಲ ಕೊಟ್ಟಿದ್ದೆ’

‘ನಾನು ಹಿರಣ್ಣಯ್ಯ ಮಿತ್ರಮಂಡಳಿಯಲ್ಲಿ ಇದ್ದಾಗ ಪಾತ್ರ ಮಾಡುವ ಅವಕಾಶ ಸಿಗದಿದ್ದರೂ ಬುಕಿಂಗ್ ನೋಡಿಕೊಳ್ಳುವ ಅವಕಾಶ ಸಿಕ್ಕಿತ್ತು. ಆಗ ದೊಡ್ಡ ಯಜಮಾನರು (ಹಿರಣ್ಣಯ್ಯ) ಮತ್ತು ಚಿಕ್ಕ ಯಜಮಾನರನ್ನು (ಮಾ. ಹಿರಣ್ಣಯ್ಯ) ಬಿಟ್ಟರೆ, ಅತಿದೊಡ್ಡ ಶ್ರೀಮಂತ ನಾನೇ. ಆ ದುಡ್ಡನ್ನು ಹಲವರಿಗೆ ಸಾಲ ಕೊಡುತ್ತಿದ್ದೆ. ಈ ವಿಷಯವನ್ನು ದೊಡ್ಡ ಯಜಮಾನರಿಗೆ ಹೇಳಿದಾಗ ‘ಬಡ್ಡಿ ಮಗನೆ ಸತ್ಯ ಒಪ್ಕೊಳ್ತಿಯಲ್ಲೊ’ ಎಂದು ನಕ್ಕು ಸುಮ್ಮನಾಗುತ್ತಿದ್ದರು’ ಎಂದು ನಟ ಶೃಂಗೇರಿ ರಾಮಣ್ಣ ನಗುತ್ತಲೇ ಹೇಳಿದರು.

‘ಮಂಡಳಿಯಲ್ಲಿ ಐದು ಮಂದಿ ರಾಮಣ್ಣ ಇದ್ರು. ನಾನು ಶೃಂಗೇರಿಯಿಂದ ಬಂದಿದ್ದರಿಂದ ಮಾ.ಹಿರಣ್ಣಯ್ಯನವರೇ ನನಗೆ ಶೃಂಗೇರಿ ರಾಮಣ್ಣ ಅಂತ ಹೆಸರಿಟ್ಟರು’ ಎಂದು ನೆನಪಿಸಿಕೊಂಡರು.

‘ನಾನು ಕುಡಿಯುತ್ತೇನೆ ಎಂದಿದ್ದೆ’

‘ನಮ್ಮ ಅಪ್ಪ ಕುಡಿದದ್ದನ್ನು ನೋಡಿ, ನಮ್ಮ ಅಮ್ಮನ ಬಳಿಗೆ ಹೋಗಿ ನಾನೂ ಅಪ್ಪನಂತೆ ಕುಡಿಯಬಹುದಾ, ಎಂದು ಕೇಳಿದೆ. ಮಕ್ಕಳು ಇಂತಹ ಮಾತು ಹೇಳಿದಾಗ, ಯಾವ ತಾಯಿಯಾದರೂ ತನ್ನ ಗಂಡನನ್ನು ಬೈದು, ಮಕ್ಕಳ ಮುಂದೆ ಕುಡಿದ್ರೆ ಅವರೂ ಇದನ್ನೇ ಕಲಿತುಕೊಳ್ಳುತ್ತಾರೆ’ ಎಂದು ಜಗಳ ಆಡುತ್ತಿದ್ದರು. ಆದರೆ ನನ್ನ ತಾಯಿ ಆ ರೀತಿ ಮಾಡಲಿಲ್ಲ. ನೋಡು ಮಗನೆ ಅವರು ಅಮೆರಿಕದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ನೀನು ಅಂತಹ ಸಾಧನೆ ಮಾಡು, ಆಗ ಧೈರ್ಯ ವಾಗಿ ಕುಡಿಯಬಹುದು’ ಎಂದು ಪ್ರೇರಣೆ ತುಂಬಿದರು’ ಎಂದು ಮಾ.ಹಿರಣ್ಣಯ್ಯನವರ ಪುತ್ರ ಬಾಬು ಹಿರಣ್ಣಯ್ಯನವರು ಸ್ಮರಿಸಿಕೊಂಡರು.

‘ಮನೆಮಂದಿಗೆಲ್ಲಾ ಅನ್ನ ಹಾಕಿದವರು’

ನಮ್ಮ ಅಪ್ಪ–ಅಮ್ಮ, ನಾವೆಲ್ಲರೂ ಮಂಡಳಿಯಲ್ಲೇ ಕೆಲಸ ಮಾಡುತ್ತಿದ್ದೆವು. ನಮಗೆಲ್ಲ ಹಿರಣ್ಣಯ್ಯ ಮಿತ್ರ ಮಂಡಳಿ ಅನ್ನ ನೀಡಿದೆ’ ಎಂದು ಹಾಸ್ಯ ನಟ ಉಮೇಶ್ ಅವರ ಸಹೋದರ ಹೇಳಿದರು.

‘ಅನುದಾನಕ್ಕೆ ಒತ್ತಡ’

‘ಕುಮಾರಸ್ವಾಮಿ ಬಡಾವಣೆಯ ಗ್ರಂಥಾಲಯ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಮಾ. ಹಿರಣ್ಣಯ್ಯನವರು ಶಾಸಕ ಆರ್. ಅಶೋಕ್ ಅವರ ಮೇಲೆ ಹಲವು ಬಾರಿ ಒತ್ತಡ ಹಾಕಿದ್ದರು. ರಂಗಭೂಮಿಯ ಆ ಮಹಾನ್ ಚೇತನಕ್ಕೆ ನುಡಿನಮನ ಸಲ್ಲಿಸುವ ಉದ್ದೇಶ
ದಿಂದ ಕಾರ್ಯಕ್ರಮ ಆಯೋಜಿಸಿದೆವು. ಗ್ರಂಥಾಲಯದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಓದುಗರು ಮತ್ತು ಗ್ರಂಥಾಲಯದ ನಡುವೆ ಬಾಂಧವ್ಯ ಗಟ್ಟಿಗೊಳ್ಳುತ್ತದೆ’ ಎಂದು ಕುಮಾರಸ್ವಾಮಿ ಬಡಾವಣೆ ಗ್ರಂಥಾಲಯದ ಲೈಬ್ರರಿಯನ್ ಆನಂದ್ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !