ಗುರುವಾರ , ನವೆಂಬರ್ 14, 2019
19 °C

ಸರ್ವರ ಅಭ್ಯುದಯ: ಆಗಬೇಕಾದ್ದೇನು?

Published:
Updated:
Prajavani

ನರೇಂದ್ರ ಮೋದಿ ನೇತೃತ್ವದ ಸರ್ಕಾರ ‘ಸರ್ವರ ಜತೆಗೂಡಿ ಸರ್ವರ ವಿಕಾಸ’ ನೀತಿ ಅನುಸರಿಸಿದ್ದರಿಂದ ಎನ್‌ಡಿಎಗೆ ಮತ್ತೆ ಪ್ರಚಂಡ ಬಹುಮತ ಪಡೆಯಲು ಸಾಧ್ಯವಾಯಿತು ಎಂದು ಮೇ 23ರ ವಿಜಯೋತ್ಸವದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಆದರೆ, ಸರ್ವರ ಅಭ್ಯುದಯವಾಗಿದ್ದರೆ ಆರ್ಥಿಕ ಅಸಮಾನತೆ ಏಕೆ ಇಷ್ಟೊಂದು ಹೆಚ್ಚುತ್ತಿತ್ತು?

ಒಳಗೊಳ್ಳುವಿಕೆಯುಳ್ಳ ಅಭಿವೃದ್ಧಿ ಪ್ರಕ್ರಿಯೆಯ ಬಗೆಗೆ ಚಿಂತನೆ ಮಾಡುವಾಗ, ಜವಾಹರಲಾಲ್‌ ನೆಹರೂ ಅವರ ಹೇಳಿಕೆ ನೆನಪಾಗುತ್ತದೆ. ಕಲ್ಯಾಣರಾಜ್ಯ ಎಂದರೆ ಬಡತನವನ್ನು ಭಾಗ ಮಾಡಿ ಹಂಚುವುದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಜಿಡಿಪಿಯನ್ನು ಗಣನೀಯವಾಗಿ ಹೆಚ್ಚಿಸಲು ಬೇಕಾದ ಆರ್ಥಿಕ ನೀತಿಯನ್ನು ರಾಷ್ಟ್ರ ಮಟ್ಟದಲ್ಲಿ ರೂಪಿಸಬೇಕೆಂದು ವಾದಿಸಿದ್ದರು. ಅವರ ವಾದ ಸರಿಯಾಗಿತ್ತು. ಈಗ ಆರ್ಥಿಕ ಚೇತರಿಕೆ ಸಾಧಿಸುವುದೇ ಒಂದು ಸವಾಲಾಗಿರುವಾಗ, ಎಲ್ಲರ ಅಭ್ಯುದಯದ ಪರಿಕಲ್ಪನೆ ಕೇವಲ ಶೇ 7ರ ಬೆಳವಣಿಗೆ ದರದಲ್ಲಿ ಸಾಧ್ಯವಾಗದಿರುವಾಗ, ಅದರ ಆಶೆ ತೋರಿಸುವ ತಂತ್ರಗಾರಿಕೆ ಹೆಣೆಯುವುದು ಬಡತನದ ಹಂಚಿಕೆಯ ಪ್ರಯತ್ನವಾಗದೆ ಬೇರೇನಾಗಲು ಸಾಧ್ಯ?

ಮೋದಿ, ದೇಶಕ್ಕೆ ಸಮರ್ಥ ರಾಜಕೀಯ ನಾಯಕತ್ವ ನೀಡಿದ್ದು ಹೌದಾದರೂ ಉದ್ಯೋಗ ಸೃಷ್ಟಿಯ ವಿಷಯದಲ್ಲಿ ಅವರ ನೇತೃತ್ವದ ಸರ್ಕಾರಕ್ಕೆ ನುಡಿದಂತೆ ನಡೆದುಕೊಳ್ಳಲು ಸಾಧ್ಯವಾಗಿಲ್ಲ. ಉತ್ಪಾದಕತೆಯುಳ್ಳ ಉದ್ಯೋಗಾವಕಾಶಗಳ ಸೃಷ್ಟಿಯ ಮೂಲಕ ಬಡತನ ನಿರ್ಮೂಲನೆಯಾಗಿ ಎಲ್ಲರ ಅಭ್ಯುದಯದ (ಸಬ್ ಕಾ ವಿಕಾಸ್) ಕನಸು ಸಾಕಾರಗೊಳ್ಳಬೇಕಾದರೆ ಶೇ 10ರಷ್ಟು ಬೆಳವಣಿಗೆ ದರ ಬೇಕೇಬೇಕು. ಇದು ನೀತಿ ಆಯೋಗದ ತಜ್ಞರ ಅಭಿಪ್ರಾಯ. ಎರಡಂಕಿ ಬೆಳವಣಿಗೆ ದರ ಸಾಧಿಸುವುದು ಸುಲಭವಲ್ಲ ಎನ್ನುವುದು ಈತನಕ ನಮಗಾದ ಅನುಭವ. ಭಾರತ ವಿಶ್ವದಲ್ಲೇ ಅತಿಹೆಚ್ಚು ಬೆಳವಣಿಗೆ ದರ ಸಾಧಿಸಿದ ರಾಷ್ಟ್ರ ಎಂದು ಐಎಂಎಫ್ ವರದಿಯನ್ನು ಉದ್ಧರಿಸಿ ಮೋದಿ ಹೇಳಿದ್ದರು. ಆದರೆ ಶೇ 7ರ ಬೆಳವಣಿಗೆ ದರವನ್ನು ಪಾರದರ್ಶಕವಾದ ರೀತಿಯಲ್ಲಿ ಪುಷ್ಟೀಕರಿಸುವ ಅಂಕಿ-ಸಂಖ್ಯೆಗಳನ್ನು ಒದಗಿಸುವಂತೆ ಐಎಂಎಫ್‌ನ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಕರೆ ನೀಡಿರುವುದು ಕೇಂದ್ರ ಸರ್ಕಾರದ ಹೊಣೆಗಾರಿಕೆಯನ್ನು ದ್ವಿಗುಣಗೊಳಿಸಿದೆ.

ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ಕೇಂದ್ರ ಹಣಕಾಸು ಸಚಿವಾಲಯದ ವರದಿ, ಏಪ್ರಿಲ್‌ನಲ್ಲಿ ಐಎಂಎಫ್ ಹೊರತಂದ ಮುಂದಿನ ವರ್ಷದ ಜಾಗತಿಕ ಬೆಳವಣಿಗೆ ದರದ ಮೇಲೆ ಬೆಳಕು ಚೆಲ್ಲುವ ವರದಿ ಮತ್ತು 2018-19ರಲ್ಲಿ ಬೆಳವಣಿಗೆ ದರ ಸ್ವಲ್ಪ ಕುಸಿದಿದೆಯೆಂಬ ಅಂದಾಜುಗಳನ್ನು ಗಮನಿಸಿದರೆ, ಶೇ 7ರಷ್ಟು ಬೆಳವಣಿಗೆ ದರವನ್ನು 2019-20ನೇ ವಿತ್ತೀಯ ವರ್ಷದಲ್ಲಿ ಕಾಪಾಡಿಕೊಳ್ಳುವುದು ಕೂಡ ಸುಲಭವಲ್ಲ ಎಂಬ ಅಭಿಪ್ರಾಯ ಬರುವಂತಾಗಿದೆ. ಸರ್ವರ ವಿಕಾಸದ ಕನಸಿನ ಯೋಜನೆಗಳನ್ನು ರೂಪಿಸಿ, ಸಂಪನ್ಮೂಲಗಳನ್ನು ಒದಗಿಸುವ ಭರವಸೆ ನೀಡುವುದರಿಂದ ಇನ್ನಷ್ಟು ಭ್ರಮನಿರಸನ ಆಗುವುದು ನಿಶ್ಚಿತ.

ಈಗಿರುವ ಸೀಮಿತ ಬೆಳವಣಿಗೆ ಹಂತದಲ್ಲಿ, ಒಳಗೊಳ್ಳುವಿಕೆಯ ಅಭಿವೃದ್ಧಿ ಎಂದರೆ, ಅಭಿವೃದ್ಧಿ ಪ್ರಕ್ರಿಯೆಯ ಲಾಭಗಳಿಂದ ಈತನಕ ವಂಚಿತವಾದ ಸಾಮಾಜಿಕ ವರ್ಗಗಳಿಗೆ ಈ ಲಾಭಗಳನ್ನು ತಲುಪಿಸುವುದು ಎಂದು ಪರಿಭಾವಿಸುವುದು ಸೂಕ್ತವಾಗುತ್ತದೆ. ನೀತಿ ಆಯೋಗದ ಸದಸ್ಯ ಮತ್ತು ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ವಿವೇಕ್‌ ದೇವರಾಯ್‌, ಅಸಂಘಟಿತ ವಲಯದಲ್ಲಿರುವ ಕಾರ್ಮಿಕರಿಗೆ ಸರಿಯಾಗಿ ಬದುಕುವ ಅವಕಾಶಗಳನ್ನು ಒದಗಿಸಲು ಸರ್ಕಾರವೇ ಮೂಲ ಸೌಕರ್ಯಗಳನ್ನು ಒದಗಿಸುವ ಧ್ಯೇಯ ಹೊಂದಿದ ಒಳಗೊಳ್ಳುವಿಕೆ ಪ್ರಕ್ರಿಯೆಯ ಕಾರ್ಯಸೂಚಿ ರೂಪಿಸಬೇಕೆಂದು ಹೇಳಿರುವುದು ಸಮಂಜಸವಾಗಿದೆ.

2011ರ ಜುಲೈನಲ್ಲಿ ಪೆರುವಿನಲ್ಲಿ ‘ಸೇರ್ಪಡೆಯುಳ್ಳ ಬೆಳವಣಿಗೆ’ ಪರಿಕಲ್ಪನೆಯ ಕುರಿತು ಕಾರ್ಯಾಗಾರ ನಡೆಯಿತು. ಈ ಪರಿಕಲ್ಪನೆಗೆ ಪೂರಕವಾದ ಮುಂಗಡ ಪತ್ರ ತಯಾರಿಸುವ ವಿಧಾನವನ್ನು, ದಕ್ಷಿಣ ಆಫ್ರಿಕಾದ ಅನುಭವಗಳ ಬೆಳಕಿನಲ್ಲಿ ಬಜೆಟ್ ತಜ್ಞ ವಾರೆನ್ ಕ್ರಾಫ್ಟಿಕ್ ವಿವರಿಸಿದ್ದರು. ಆರ್ಥಿಕ ಬೆಳವಣಿಗೆ ಪ್ರಕ್ರಿಯೆಯ ಲಾಭಗಳಿಂದ ವಂಚಿತರಾದವರನ್ನು ಈ ಪ್ರಕ್ರಿಯೆಯ ವ್ಯಾಪ್ತಿಯಲ್ಲಿ ತರುವ ಗುರಿಯುಳ್ಳ ಮುಂಗಡ ಪತ್ರದ ನೀತಿಯ ಅಗತ್ಯವನ್ನು ಮನೋಜ್ಞವಾಗಿ ತಿಳಿಸಿದ್ದರು. ಅಂದರೆ, ಒಳಗೊಳ್ಳುವಿಕೆಯುಳ್ಳ ಸಾರ್ವಜನಿಕ ಹೂಡಿಕೆಯ ಮಹತ್ವವನ್ನು ಬೆಳಕಿಗೆ ತಂದಿದ್ದರು. ಕ್ರಾಫ್ಟಿಕ್ ವಾದದಿಂದ ಭಾರತ ಸಾಕಷ್ಟು ತೆಗೆದುಕೊಳ್ಳುವುದಿದೆ.

ಅಭಿವೃದ್ಧಿ ಪ್ರಕ್ರಿಯೆಯಿಂದ ವಂಚಿತವಾಗಿರುವ ವರ್ಗಗಳನ್ನು ಗುರುತಿಸುವ, ವಿಕಾಸ ಪ್ರಕ್ರಿಯೆಯ ಪ್ರಯೋಜನಗಳನ್ನು ಈ ವರ್ಗಗಳಿಗೆ ಮುಟ್ಟಿಸುವ ಕಾರ್ಯಗಳು ರಾಜ್ಯ ಮತ್ತು ಸ್ಥಳೀಯ ಸರ್ಕಾರದ ಸಂಸ್ಥೆಗಳಿಂದ ಆಗಬೇಕೇ ವಿನಾ ಕೇಂದ್ರ ಸರ್ಕಾರದಿಂದಲ್ಲ. ಕೇಂದ್ರವು ಬಜೆಟ್ ಮೂಲಕ ಅನುದಾನ ನೀಡಬೇಕು. ಸಾರ್ವಜನಿಕ ಹಣಕಾಸಿನ ಬಳಕೆಯ ಕುರಿತು ಸರ್ಕಾರಗಳೇ ಮುತುವರ್ಜಿ ವಹಿಸಿ ಅಧ್ಯಯನ ನಡೆಸಬೇಕು. ರಾಮಕೃಷ್ಣ ಹೆಗಡೆ ಅವರು ಎಂದೋ ಹೇಳಿದ, ಮೋದಿ ಅವರು ಈಗ ಹೇಳುತ್ತಿರುವ ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ ಒಳಗೊಳ್ಳುವಿಕೆಯುಳ್ಳ ಆಡಳಿತ ಪರಿಪಾಲನೆ ಆಗಬೇಕು. ಸಂವಿಧಾನದಲ್ಲಿರುವ ಕೇಂದ್ರ, ರಾಜ್ಯ ಮತ್ತು ಸಮವರ್ತಿ ಯಾದಿಗಳನ್ನು ಪರಿಷ್ಕರಿಸಬೇಕಾದ ಪ್ರಮೇಯ ಇದೆ. ಅಧಿಕಾರಗಳ ವಿಕೇಂದ್ರೀಕರಣಕ್ಕೆ ಸಂಬಂಧಿಸಿದ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಪ್ರಭಾವ-ಪ್ರಯೋಜನಗಳ ಮೌಲ್ಯಮಾಪನಕ್ಕೆ ಕಾಲ ಸೂಕ್ತವಾಗಿದೆ.

ಪ್ರತಿಕ್ರಿಯಿಸಿ (+)