ಮಂಗಳವಾರ, ಮೇ 18, 2021
28 °C
ಹಲವು ವರ್ಷಗಳ ಬೇಡಿಕೆ– ಕರಗುತ್ತಿರುವ ಜನರ ಆಶಾಭಾವನೆ

ಹೆಬ್ಬೊಳೆ ಸೇತುವೆಗೆ ಸಿಗದ ಮಂಜೂರಾತಿ

ರವಿ ಕೆಳಂಗಡಿ Updated:

ಅಕ್ಷರ ಗಾತ್ರ : | |

Prajavani

ಕಳಸ: ಕಳಸ- ಹೊರನಾಡು ರಸ್ತೆಯ ಹೆಬ್ಬೊಳೆಯ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಸೇತುವೆ ಕಾಮಗಾರಿಗೆ ಈವರೆಗೂ ಮಂಜೂರಾತಿ ಸಿಕ್ಕಿಲ್ಲ. ಇದರಿಂದ ಈ ಸೇತುವೆಯ ನಿರ್ಮಾಣ ಆರಂಭವಾಗುವ ಬಗ್ಗೆ ಇದ್ದ ಆಶಾಭಾವನೆ ಕರಗುತ್ತಿದೆ.

25 ವರ್ಷದ ಹಿಂದೆ ಹೆಬ್ಬೊಳೆಯಲ್ಲಿ ನಿರ್ಮಾಣವಾದ ಸೇತುವೆಯು ಪ್ರತಿ ವರ್ಷವೂ ಮಳೆ ಹೆಚ್ಚಾದಾಗ ಮುಳುಗಡೆ ಆಗುತ್ತಲೇ ಇದೆ. ಕಳೆದ ವರ್ಷವಂತೂ 8-10 ಬಾರಿ ಈ ಸೇತುವೆಯ ಮೇಲೆ ದಿನಗಟ್ಟಲೆ ನೀರು ಹರಿದು ಕಳಸ-ಹೊರನಾಡು ಸಂಪರ್ಕವೇ ಕಡಿದು ಹೋಗಿತ್ತು. ಸೇತುವೆಯ ಕಂಬಗಳು ಮತ್ತು ಕಾಂಕ್ರೀಟ್ ಸ್ಲಾಬ್ ಕೂಡ ಮರಗಳ ಹೊಡೆತದಿಂದ ಶಿಥಿಲವೂ ಆಗಿವೆ. ಕಳೆದ ಮಳೆಗಾಲದಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರು ಹೊರನಾಡು ಸಂಪರ್ಕಿಸಲು ಅಸಾಧ್ಯವೇ ಆಗಿತ್ತು.

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಜಿ.ಭೀಮೇಶ್ವರ ಜೋಷಿ ಅವರ ಪ್ರಯತ್ನ ಮತ್ತು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಆಸಕ್ತಿಯ ಫಲವಾಗಿ ಹೆಬ್ಬೊಳೆಗೆ ಅಡ್ಡಲಾಗಿ ಈಗಿನ ಸೇತುವೆಗಿಂತ 20 ಅಡಿ ಎತ್ತರದಲ್ಲಿ ಹೊಸ ಸೇತುವೆ ನಿರ್ಮಿಸುವ ಯೋಜನೆಗೆ ರೆಕ್ಕೆ ಪುಕ್ಕ ಬಂದಿತ್ತು.

ಲೋಕೋಪಯೋಗಿ ಇಲಾಖೆಯ ಹಿರಿಯ ಎಂಜಿನಿಯರ್‌ಗಳ ದಂಡು ಸ್ಥಳಕ್ಕೆ ತೆರಳಿ ಮಣ್ಣು ಪರೀಕ್ಷೆ ಮತ್ತಿತರ ವಿಧಿವಿಧಾನ ಪೂರೈಸಿ ತಿಂಗಳುಗಳೇ ಕಳೆದಿವೆ. ಹೊಸ ಸೇತುವೆ ಮತ್ತು ಅದಕ್ಕೆ ಹೊಂದಿಕೊಂಡಂತೆ ದಂಡೆ ಏರಿಸಿ ನೂತನ ರಸ್ತೆ ನಿರ್ಮಿಸುವ ಬಗ್ಗೆ ಯೋಜನೆಯನ್ನೂ ಸಿದ್ಧಪಡಿಸಿದ್ದರು. ಈ ಕಾಮಗಾರಿಗೆ ಸುಮಾರು ₹ 15 ಕೋಟಿ ಬೇಕು ಎಂಬ ಅಂದಾಜನ್ನೂ ಸಿದ್ಧಪಡಿಸಲಾಯಿತು. ಈ ಯೋಜನಾ ವರದಿಯು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳ ಕಚೇರಿಗೆ ತಲುಪಿದೆ. ಆದರೆ, ವಿಪರ್ಯಾಸ ಎಂದರೆ ಈ ಕಾಮಗಾರಿಗೆ ಈವರೆಗೂ ಮಂಜೂರಾತಿ ಸಿಕ್ಕಿಲ್ಲ. 'ಹೆಬ್ಬೊಳೆ ಸೇತುವೆಯ ಬಗ್ಗೆ ಎಲ್ಲ ತಾಂತ್ರಿಕ ಅಂಶಗಳನ್ನು ನಮೂದಿಸಿ ಯೋಜನಾ ವರದಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಆದರೆ ಈವರೆಗೂ ಮಂಜೂರಾತಿ ದೊರೆತಿಲ್ಲ' ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ಹೇಳುತ್ತವೆ.

'ಹೆಬ್ಬೊಳೆ ಸೇತುವೆಗೆ ಮಂಜೂರಾತಿ ನೀಡುವಂತೆ ರೇವಣ್ಣ ಅವರಿಗೆ ಮನವಿ ಮಾಡಿದ್ದೇವೆ. ಈ ಬಗ್ಗೆ ಮತ್ತೆ ಒತ್ತಡ ಹಾಕುತ್ತೇನೆ' ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಹೆಚ್.ಡಿ.ಜ್ವಾಲನಯ್ಯ ವಿಶ್ವಾಸದಿಂದ ಹೇಳುತ್ತಾರೆ.

ಸೇತುವೆಯ ಕಾಮಗಾರಿಯ ಬಗ್ಗೆ ಮಾಹಿತಿ ಇಲ್ಲದ ಸ್ಥಳೀಯರು ಈ ಬಾರಿಯ ಮಳೆಗಾಲದಲ್ಲೂ ಎಂದಿನಂತೆ ಭದ್ರಾ ನೀರು ಸೇತುವೆಯ ಮೆಲೆ ಹರಿಯುವ ಭಾರಿ ಮಳೆಯ ದಿನಗಳ ಬಗ್ಗೆ ಕಾತರದಿಂದ ಕಾಯುತ್ತಲೇ ಇದ್ದಾರೆ. ಆದರೆ, ಹೊರನಾಡಿನ ವ್ಯಾಪಾರಿಗಳು ಮತ್ತು ವಸತಿಗೃಹಗಳ ಮಾಲೀಕರಿಗಂತೂ ಮಳೆಗಾಲ ಬಂದೊಡನೆ ಚಳಿ ಜ್ವರ ಶುರು ಆಗುತ್ತದೆ. ಏಕೆಂದರೆ ಹೆಬ್ಬೊಳೆ ಸೇತುವೆ ಮುಳುಗಿತು ಎಂಬ ಸುದ್ದಿ ಹರಡಿದರೆ ಸಾಕು, ಇಡೀ ಮಳೆಗಾಲದ 4 ತಿಂಗಳು ಹೊರನಾಡಿಗೆ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಾರೆ. ಆದ್ದರಿಂದ ಹೆಬ್ಬೊಳೆ ಸೇತುವೆಯ ಮೇಲ್ದರ್ಜೆ ಕಾಮಗಾರಿಗೆ ಮಂಜೂರಾತಿ ಸಿಗುವುದೇ ಎಂದು ಕಾತರ ಹೊರನಾಡಿನಲ್ಲಿ ಕಂಡು ಬರುತ್ತಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು