ಮೋದಿ ಮುಂದೆ ಎರಡು ದಾರಿ

ಮಂಗಳವಾರ, ಜೂನ್ 18, 2019
24 °C
ಜನಪ್ರಿಯತೆಯ ಉತ್ತುಂಗದಲ್ಲಿನ ಈ ಪಯಣ, ತೆಳ್ಳಗಿನ ಹಗ್ಗದ ಮೇಲಿನ ನಡಿಗೆ

ಮೋದಿ ಮುಂದೆ ಎರಡು ದಾರಿ

Published:
Updated:
Prajavani

ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಏರಿದ್ದಾರೆ. ಈ ಎರಡನೇ ಅವಧಿಯ ಆರಂಭದ ದಿನಗಳ ಅವರ ಮಾತು–ವರ್ತನೆಯು ಅವರಲ್ಲಿ ದ್ವಂದ್ವ ಮೂಡಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿವೆ. ಸಂವಿಧಾನದ ಸಂಪುಟಕ್ಕೆ ಮೋದಿ ತಲೆಬಾಗಿದ್ದಾರೆ, ನೆಹರೂ ಸಾಧನೆಯನ್ನು ಎಂದೂ ಇಲ್ಲದೆ ಸ್ಮರಿಸಿದ್ದಾರೆ, ದೇಶದಲ್ಲಿ ಅಲ್ಪಸಂಖ್ಯಾತರಿಗೆ ಇರುವ ಆತಂಕದ ಬಗ್ಗೆ ಮಾತನಾಡಿದ್ದಾರೆ. ಫಲಿತಾಂಶಕ್ಕೂ ಮೊದಲು ಪ್ರಜ್ಞಾ ಸಿಂಗ್‌ ಅವರ ನಾಥೂರಾಂ ಗೋಡ್ಸೆ ಪರ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ರೀತಿಯ ‘ಅನುಚಿತ’ ವರ್ತನೆಯನ್ನು ಅವರ ಸಿದ್ಧಾಂತವಾಗಲೀ, ಹಿಂಬಾಲಕ ಸ್ತೋಮವಾಗಲೀ ಎಷ್ಟರಮಟ್ಟಿಗೆ ಸಹಿಸುತ್ತದೆ ಎನ್ನುವ ಅನುಮಾನ ಮತ್ತು ಈ ‘ಅನುಚಿತ’ ವರ್ತನೆ ಈ ಸಮಯದಲ್ಲಿ ಮೋದಿಯವರಿಗೇಕೆ ಎನ್ನುವ ಪ್ರಶ್ನೆ ಹುಟ್ಟುತ್ತದೆ. ಹಾಗಾದರೆ ಮೋದಿ ಬದಲಾಗುತ್ತಿದ್ದಾರೆಯೇ? ಎರಡನೇ ಅವಧಿಯ ಆರಂಭದ ದಿನಗಳಲ್ಲಿ ಒಂದು ರೀತಿಯ ಪ್ರಾಯಶ್ಚಿತ್ತ ಮತ್ತು ಉದಾತ್ತ ನಿಲುವು ಒಟ್ಟಿಗೇ ಅವರಲ್ಲಿ ಬರುತ್ತಿವೆಯೇ?

ಹೌದು ಎಂದು ಯಾರಾದರೂ ಹೇಳಿದರೆ, ಅವರನ್ನು ಬೆಳೆಸಿದ ಸಿದ್ಧಾಂತ, ಅವರನ್ನು ತನ್ನ ಬಿಗಿಹಿಡಿತದಿಂದ ಇಷ್ಟು ಬೇಗ ಬಿಟ್ಟುಕೊಡುತ್ತಿದೆಯೇ? ಅವರು ಹಾಗಿರಲಿಲ್ಲವೇ ಎನ್ನುವ ಪ್ರಶ್ನೆಗಳು ಎದುರಾಗುತ್ತವೆ. ಅಲ್ಲ ಎಂದಾದರೆ, ಅವರ ಈ ವರ್ತನೆಗಳು ಎಷ್ಟು ಪ್ರಾಮಾಣಿಕ ಎನ್ನುವ ಅನುಮಾನ ಹುಟ್ಟುತ್ತದೆ. ಅದನ್ನು ಕಾಲವೇ ಹೇಳಬೇಕು ಎನ್ನುವ ಉತ್ತರವೂ ಸರಿಯೆನಿಸಬಹುದು.

ಚುನಾವಣೆ ಸಂದರ್ಭದಲ್ಲಿ ಒಂದು ತೆಳ್ಳನೆಯ ಚರ್ಚೆಯ ನೂಲು ಹರಿಯುತ್ತಲೇ ಇತ್ತು. ಅದೇನೆಂದರೆ, ಈ ಬಾರಿ ಎನ್‌ಡಿಎಗೆ ಬಹುಮತ ಸಿಗದಿದ್ದಲ್ಲಿ ಅಥವಾ ಅಲ್ಪ ಬಹುಮತ ಸಿಕ್ಕಿದಲ್ಲಿ ಮೋದಿಯವರನ್ನು ಬಹುಶಃ ಬದಿಗೆ ಸರಿಸುವ ಒಂದು ಸಾಧ್ಯತೆಯೂ ಇದೆ ಎನ್ನುವುದು ಆ ಚರ್ಚೆ. ಇದರಲ್ಲಿ ಎಷ್ಟು ಹುರುಳಿತ್ತೋ ಗೊತ್ತಿಲ್ಲ. ಆದರೆ ಮೋದಿಯವರ ಆಳ್ವಿಕೆಯ ಬಗ್ಗೆ ಅಸಮಾಧಾನ ಹೊಂದಿದವರಲ್ಲಿಯಾದರೂ ಆ ದಿನಕ್ಕೆ ಸಮಾಧಾನ ಭಾವ ತರುವ ಆಶಯದ ಕಾರಣಕ್ಕಾದರೂ ಹಾಗೊಂದು ಚರ್ಚೆಯಿತ್ತು. ಅದನ್ನು ಬಿಜೆಪಿಯಾಗಲೀ, ಮೋದಿಯವರಾಗಲೀ ಅಲ್ಲಗಳೆದಿರಲಿಲ್ಲ ಎನ್ನುವುದನ್ನೂ ಗಮನಿಸಬೇಕು. ಏಕೆಂದರೆ ಅದೇ ಸಂದರ್ಭದಲ್ಲಿ ನಿತಿನ್‌ ಗಡ್ಕರಿ ‘ಪಕ್ಷಕ್ಕಿಂತ ಯಾವ ವ್ಯಕ್ತಿಯೂ ದೊಡ್ಡವರಲ್ಲ’ ಎನ್ನುವ ಮಾತನ್ನು ಹೇಳಿದ್ದರು. ಆದರೂ ಮೋದಿಯವರನ್ನು ತಮ್ಮ ಅತ್ಯಂತ ಪ್ರಭಾವಿ ನಾಯಕ ಎಂದೂ ಬಣ್ಣಿಸಿದ್ದರು. ಹಾಗೆಯೇ ಮೋದಿ ಕೂಡ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷರ ಸ್ಥಾನಕ್ಕಿಂತ ತನ್ನ ಸ್ಥಾನ ದೊಡ್ಡದಲ್ಲ ಎನ್ನುವಂತಹ ಮಾತನ್ನು ಆಡಿದ್ದರು. ಹಾಗಾದರೆ ಇಂತಹ ಚರ್ಚೆಯ ನೂಲೊಂದನ್ನು ಬಿಜೆಪಿ ಮತ್ತು ಸಂಘ ಪರಿವಾರ ಬೇಕೆಂದೇ ಹರಿಯಬಿಟ್ಟಿದ್ದವೇ ಎನ್ನುವ ಅನುಮಾನವೂ ಹುಟ್ಟುತ್ತದೆ. ಈ ಅನುಮಾನಕ್ಕೆ ‘ಇದ್ದರೂ ಇರಬಹುದು’ ಎಂದೇ ಉತ್ತರಿಸಬೇಕಾಗುತ್ತದೆ.

ಆದರೆ, ಮೋದಿ ಪರ ಈ ಮಟ್ಟಿನ ಫಲಿತಾಂಶ ಅದೆಲ್ಲವನ್ನೂ ಸುಳ್ಳು ಮಾಡಿತು ಎನ್ನುವುದಂತೂ ಸತ್ಯ. ಇಂದು ಮೋದಿ ಹೊರತಾದ ನಾಯಕತ್ವದ ಚರ್ಚೆ ಅವರ ಪಾಳಯದಲ್ಲೂ ಇಲ್ಲ. ಹಾಗಾದರೆ ಮೋದಿ ಇಂದು ಪಕ್ಷಕ್ಕಿಂತ ಎತ್ತರದ ಸ್ಥಾನಕ್ಕೆ ಏರಿಬಿಟ್ಟಿದ್ದಾರೆಯೇ?
ರಾಜಕೀಯ ವಿಶ್ಲೇಷಕ ಪ್ರತಾಪ್ ಭಾನು ಮೆಹ್ತಾ ಇತ್ತೀಚೆಗೆ ನೀಡಿದ ಸಂದರ್ಶನಕ್ಕೆ ಬಿಬಿಸಿ ಕೊಟ್ಟಿರುವ ಶೀರ್ಷಿಕೆ Viewpoint: ‘India is at the whim of one man’ ಎಂದಿದೆ. ಈ ಶೀರ್ಷಿಕೆ ಎರಡು– ಮೂರು ಆಲೋಚನೆಗಳನ್ನು ಹುಟ್ಟುಹಾಕುತ್ತದೆ. ಒಂದು, ಭಾರತದಲ್ಲಿ ಇಂದು ಪ್ರತಿಪಕ್ಷವೇ ಇಲ್ಲ ಎನ್ನುವುದು. ಮತ್ತೊಂದು, ಭಾರತವನ್ನು ಮೋದಿ ಹೇಗೆ ಬೇಕಾದರೂ ಕೊಂಡೊಯ್ಯಬಹುದು, ಅವರ ಸಂಸದೀಯ ಪಕ್ಷದಲ್ಲಿ ಅವರೇ ಅಂತಿಮ ಎನ್ನುವುದು. ಮೂರನೆಯದು, ಪಕ್ಷ ಮತ್ತು ಸಿದ್ಧಾಂತದ ಹಿಡಿತದಿಂದ ಮೋದಿ ಇಂದು
ಸ್ವತಂತ್ರರಾಗಿದ್ದಾರೆ ಎನ್ನುವುದು.

ಆದರೆ ನಿಜಕ್ಕೂ ಮೋದಿಯವರ ಪರಿಸ್ಥಿತಿ ಹಾಗಿದೆಯೇ? ಭಾರತದ ಅತ್ಯುನ್ನತ ಸ್ಥಾನವನ್ನು ಎರಡನೇ ಬಾರಿಗೆ ಏರಿರುವ ಮೋದಿ ಇಂದು ಭಾರತವನ್ನು ಆಳುವ ಸಂವಿಧಾನವನ್ನು ಸಾರಾಸಗಟಾಗಿ ಧಿಕ್ಕರಿಸಲಾಗುವುದಿಲ್ಲ. ‘ಅದನ್ನು ಬದಲಿಸಲಿಕ್ಕೇ ನಾವು ಬಂದಿದ್ದೇವೆ’ ಎಂದು ಅವರ ಪಕ್ಷದ ಸಂಸದರೊಬ್ಬರು ಹಿಂದೆ ಹೇಳಿದಾಗ ಆತನನ್ನು ಸುಮ್ಮನಿರಿಸಬೇಕಾದ ಅನಿವಾರ್ಯ ಅವರಿಗಿತ್ತು. ನಾಳೆ ಸಂವಿಧಾನವನ್ನು ಬದಲಿಸಹೊರಟರೂ, ಅದು ಸಾಧ್ಯವಾಗುವುದು ಅದೇ ಸಂವಿಧಾನದ ಆಧಾರದಲ್ಲಿಯೇ, ಸಂಸದೀಯ ನಡಾವಳಿಗಳ ಮೂಲಕವೇ, ಬೇರೆ ದಾರಿಯಿಲ್ಲ ಎನ್ನುವುದೂ ಅವರಿಗೆ ತಿಳಿದಿದೆ. ಹಾಗೆಯೇ, ಅಲ್ಪಸಂಖ್ಯಾತರಿಗೆ ಈ ದೇಶದಲ್ಲಿ ಸಮಾನ ಸ್ಥಾನಮಾನವಿಲ್ಲ ಎಂತಲೂ, ನೇರವಾಗಿ ನಮ್ಮದು ಹಿಂದೂ ರಾಷ್ಟ್ರ ಎಂತಲೂ ಅವರು ಆ ಹುದ್ದೆಯಲ್ಲಿ ಕುಳಿತು ಹೇಳಲು ಸಾಧ್ಯವಿಲ್ಲ.

ಅದೇ ಸಮಯದಲ್ಲಿ ತಮ್ಮ ಪಕ್ಷದ ಸಿದ್ಧಾಂತವನ್ನು, ಧ್ಯೇಯಗಳನ್ನು ಬದಿಗಿಡಲೂ ಸಾಧ್ಯವಿಲ್ಲದ ಒತ್ತಡವೂ ಅವರ ಮೇಲಿದೆ. ಅವರ ಸಿದ್ಧಾಂತವೇ ಅವರ ಲಕ್ಷಾಂತರ ಕಾಲಾಳುಗಳನ್ನು ತಯಾರಿಸಿ ರಸ್ತೆಗೂ, ಸಂಸತ್ತಿಗೂ ಬಿಟ್ಟಿದೆ. ಒಂದು ವೇಳೆ ಅವರು ಹಾಗೆ ಒಂದು ಸಣ್ಣ
ಪ್ರಯತ್ನವನ್ನು ಮಾಡಿದರೂ ಅವರಿಗೆ ಒಳಗಿನಿಂದಲೇ ವಿರೋಧ ಎದುರಾಗುತ್ತದೆ. ಭಾರತದಲ್ಲಿ ಇಂದು ಅವರು ಅನುಭವಿಸುತ್ತಿರುವ ಅತಿದೊಡ್ಡ ಬೆಂಬಲದ ಮೂಲವಾದ ಅವರ ಕಟ್ಟಾ ಅಭಿಮಾನಿಗಳಿಂದಲೇ ಅವರ ನಾಯಕತ್ವ ಅಲುಗಾಡುವ ಬೆದರಿಕೆ ಎದುರಾಗುತ್ತದೆ. ಹಾಗೆಯೇ, ಅವರು ಮತ್ತೊಂದು ದಿಕ್ಕಿನಿಂದಲೂ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕಾದ ಅನಿವಾರ್ಯವೂ ಒದಗಿಬಂದಿದೆ. ಅವರು, ‘ನನ್ನ ಪಕ್ಷ ಮತ್ತು ಬೆಂಬಲಿಗರು ಹೇಳಿದಂತೆ ನಾನು’ ಎಂದು ಕೂಡ ಸರಳವಾಗಿ ಹೇಳಲು ಬರುವುದಿಲ್ಲ. ಇಂದಿನ ಜನಪ್ರಿಯತೆಯ ಉತ್ತುಂಗದಲ್ಲಿ, ಅವರು ತಮ್ಮನ್ನು ತಾವೇ ತೀರಾ ಕೆಳಕ್ಕಿಳಿಸಿಕೊಳ್ಳಲೂ ಆಗುವುದಿಲ್ಲ. ಅದು ಅವರ ವರ್ಚಸ್ಸನ್ನು ಕಡಿಮೆ ಮಾಡುವಂತಹದ್ದು ಎನ್ನುವುದು ಒಂದು ಕಡೆಯಾದರೆ, ಆಡಳಿತದ ಮೇಲೂ ಅದು ಪರಿಣಾಮ ಬೀರುವಂತಹದ್ದು. ಅಂತರರಾಷ್ಟ್ರೀಯ ಮಟ್ಟದಲ್ಲೂ ಅವರ ಇಮೇಜಿಗೆ ಧಕ್ಕೆ ಉಂಟುಮಾಡುವಂತಹದ್ದು. ಜೊತೆಗೆ, ಚರಿತ್ರೆಯಲ್ಲಿ ತಮ್ಮನ್ನು ತಾವು ಯಾವ ಮಟ್ಟದಲ್ಲಿ ಗುರುತಿಸಿಕೊಳ್ಳಬಯಸುತ್ತಾರೆ ಎನ್ನುವುದೂ ಅವರ ಇಂದಿನ ನಡವಳಿಕೆಯ ಮೇಲೆಯೇ ನಿರ್ಧಾರವಾಗುವಂತಹದ್ದು. ತನ್ನದೇ ಮುಖವಾಡ ತನಗೆ ಬೇಡವೆಂದರೂ ಧರಿಸಲೇಬೇಕಾದ ಇಕ್ಕಟ್ಟು ಇಂದಿನ ಮೋದಿಯವರದ್ದು.

ಹಾಗಾದರೆ, ಇವೆಲ್ಲವನ್ನೂ ನಿಭಾಯಿಸಲು ಮೋದಿ ಏನು ಮಾಡುತ್ತಿದ್ದಾರೆ? ಸರಳವಾಗಿ ನೋಡುವುದಾದರೆ, ಅವರು ಎರಡು ದಾರಿಗಳನ್ನು ತೋರಿಸುತ್ತಿದ್ದಾರೆ. ಸಂವಿಧಾನಬದ್ಧ ಆಡಳಿತದ ದಾರಿ ಒಂದು, ಬಲಪಂಥೀಯ ಸಿದ್ಧಾಂತ ಕಾರ್ಯಗತವಾಗುವುದಕ್ಕೆ ಅವಕಾಶ ಮಾಡಿಕೊಡುವುದು ಮತ್ತೊಂದು. ಮೊದಲ ದಾರಿಯಲ್ಲಿ ಸಂಸದೀಯ ಪ್ರಕ್ರಿಯೆಗಳ ಮೂಲಕವೇ ಸಂವಿಧಾನವನ್ನು ನಿಸ್ತೇಜಗೊಳಿಸುತ್ತಾ, ಮುಂದೊಂದು ದಿನ ಬದಲಾವಣೆಗಳ ಪ್ರಸ್ತಾವವನ್ನು ಸಂಸತ್ತಿನಲ್ಲೇ ಮುಂದಿಡುವ ಅವಕಾಶ ಅವರಿಗೆ ಇರುತ್ತದೆ. ಎರಡನೇ ದಾರಿಯಲ್ಲಿ, ತಮ್ಮ ಪಂಥದ ಕಾರ್ಯಕ್ರಮಗಳನ್ನು ಮುನ್ನಡೆಸುವುದಕ್ಕೆ ಅವಕಾಶ ಕೊಟ್ಟು ಅಲ್ಲಿಯೂ ತಮ್ಮ ನೈಜ ಒಳಮುಖವನ್ನು ತೋರಿಸುವ ಅವಕಾಶವೂ ಅವರಿಗೆ ಇರುತ್ತದೆ.

ಮೋದಿಯವರ ಈ ಎರಡು ದಾರಿಗಳ ತೋರುವಿಕೆ ಮತ್ತು ಪ್ರಯಾಣ ತುಂಬಾ ತೆಳ್ಳನೆಯ ಹಗ್ಗದ ಮೇಲಿನ ನಡಿಗೆ. ಸ್ವಲ್ಪ ಆಯ ತಪ್ಪಿದರೂ ಅವರು ಕೆಳಗೆ ಬೀಳಬಹುದು ಅಥವಾ ಹಗ್ಗವೇ ತುಂಡಾಗಬಹುದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !