ಗುರುವಾರ , ನವೆಂಬರ್ 14, 2019
19 °C
ವಿರೋಧ ಪಕ್ಷದಲ್ಲಿದ್ದಾಗ ಬಿಟ್ಟ ಬಾಣಗಳು ಈಗ ತಿರುಗಿ ಹೊಡೆಯುತ್ತಿವೆಯೇ?

ಅಧಿಕಾರ ಅಲ್ಪಾಯು ಭಿನ್ನಮತ ದೀರ್ಘಾಯು

Published:
Updated:
Prajavani

ತೆವಳುತ್ತಾ, ಕುಂಟುತ್ತಾ, ಕೊರಗುತ್ತಾ ವರ್ಷ ಕಳೆದಿದ್ದೇ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಹೆಗ್ಗಳಿಕೆ ಎಂಬುದು ಜನಜನಿತ ಪದಕಟ್ಟು. ಒಳ್ಳೆಯ ಕೆಲಸಗಳಿಂದಲೇ ಸರ್ಕಾರ ಸದ್ದು ಮಾಡಬೇಕು; ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು. ವರ್ಷ‍ಪೂರ್ತಿಯ ‘ರಾಜಕೀಯ ದಿನಚರಿ’ಯತ್ತ ಕಣ್ಣಾಯಿಸಿದರೆ ಸರ್ಕಾರ ಈಗ ಬೀಳುತ್ತೆ, ಆಗ ಪತನವಾಗುತ್ತೆ ಎಂಬಂತಹದೇ ‘ಭವಿಷ್ಯ’, ಉರುಳಿಸುವ–ಉಳಿಸುವ ಕಸರತ್ತುಗಳೇ ನಡೆದಿವೆ.

ಬೀಳಿಸುವ– ಉಳಿಸುವ ತಾಲೀಮಿನಲ್ಲಿ ಜೆಡಿಎಸ್, ಕಾಂಗ್ರೆಸ್‌, ಬಿಜೆಪಿಯ ನಾಯಕರು ಸಕ್ರಿಯರು. ಬಟ್ಟೆ, ಭಾವ, ಭಂಗಿ, ಭಾಷೆ ವಿಭಿನ್ನವಾಗಿದ್ದರೂ ಎಲ್ಲರೂ ಒಂದೇ ಥರ ಕಾಣಿಸುತ್ತಾರೆ. ಪಕ್ಷದ ಚಿಹ್ನೆ ಬೇರೆ ಬಿಟ್ಟರೆ ಅಂತರಂಗದಲ್ಲಿ ಅಡಗಿರುವುದು ಅಧಿಕಾರದ ಹಪಹಪಿ; ಕೈಗೆಟುಕದೇ ಇರುವ ಕುರ್ಚಿಯ ಬಗ್ಗೆ ಹತಾಶೆ ಅಷ್ಟೇ.

‘ನಾನು ಕುರ್ಚಿಗೆ ಅಂಟಿಕೊಂಡು ಕುಳಿತಿಲ್ಲ, ಸಾಂದರ್ಭಿಕ ಶಿಶು’ ಎಂದು ಎಚ್.ಡಿ. ಕುಮಾರಸ್ವಾಮಿ ಪದೇ ಪದೇ ಹೇಳಿದ್ದುಂಟು. ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅಪ್ಪಳಿಸಿದಾಗಲೂ ‘ಪದತ್ಯಾಗ’ದ ಮಾತುಗಳನ್ನು ಅವರು ಆಡಿದರು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ, ಸಚಿವಗಿರಿಯಲ್ಲಿ ಕುಳಿತಿರುವ ಕಾಂಗ್ರೆಸ್‌ ನಾಯಕರ ಒತ್ತಡಕ್ಕೆ ಮಣಿದು ಕುರ್ಚಿಯಲ್ಲಿ ಕೂರುವುದನ್ನು ಮುಂದುವರಿಸಿದರು. ‘ಮಿತ್ರ’ರೇ ಒತ್ತಾಯ ಮಾಡಿದ ಮೇಲೆ ಅವರು ವಿಧಾನಸೌಧದ ಮೂರನೇ ಮಹಡಿಯ ಉನ್ನತ ಸ್ಥಾನದಲ್ಲಿ ಕುಳಿತು
ಕೊಂಡು ಅಧಿಕಾರ ನಡೆಸುವುದು ಸೂಕ್ತವೇ ಇದ್ದೀತು. 

ನಾಡಿನ ಒಂದೂವರೆ ದಶಕದ ರಾಜಕೀಯವನ್ನು ನೋಡಿದರೆ ಅತಂತ್ರ ಜನಾದೇಶದ ಬಳಿಕ ಅಸ್ತಿತ್ವಕ್ಕೆ ಬಂದ ಮೈತ್ರಿ ಸರ್ಕಾರಗಳು ಹೆಚ್ಚು ಕಾಲ ನಡುಗದೇ, ಸ್ಥಿರವಾಗಿ ಬಾಳಿದ ನಿದರ್ಶನಗಳು ಸಿಗುವುದಿಲ್ಲ. ಇದು ಜೆಡಿಎಸ್‌–ಕಾಂಗ್ರೆಸ್‌, ಜೆಡಿಎಸ್‌–ಬಿಜೆಪಿಯ ‘ಕೂಡಿಕೆ’ ಸರ್ಕಾರಗಳು, ‘ಆಪರೇಷನ್ ಕಮಲ’ವೆಂಬ ಹಂಗಿನ ತೂಗುಯ್ಯಾಲೆಯಲ್ಲೇ ಐದು ವರ್ಷ ಪೂರೈಸಿದ ಬಿಜೆಪಿ ನೇತೃತ್ವದ ಸರ್ಕಾರಕ್ಕೂ ಅನ್ವಯವಾಗುವ ಮಾತು. 

ಮೈತ್ರಿ ಸರ್ಕಾರ ನಡೆಸುವುದು ಮುಖ್ಯಮಂತ್ರಿಯಾದವರಿಗೆ ಅದು ಹೋಗುತ್ತಲೂ ಬರುತ್ತಲೂ ಕೊಯ್ಯುವ ಗರಗಸದಂತೆ. ಅದರ ಆಯಸ್ಸು ಯಾವಾಗಲೂ ಐದು ವರ್ಷ ಇರುವುದಿಲ್ಲ. ಎಲ್ಲವೂ ನೆಟ್ಟಗೆ ನಡೆಯುತ್ತಿದೆ ಎಂದುಕೊಳ್ಳುವ ಹೊತ್ತಿನಲ್ಲಿ ದೊಡ್ಡ ಮೊತ್ತದ ಲಾಭದ ಕಡತಕ್ಕೆ ಸಹಿ ಬೀಳಲಿಲ್ಲ ಎಂದು ಸಚಿವನೋ, ತಮಗೆ ಬೇಕಾದ ಅಧಿಕಾರಿಯನ್ನು ವರ್ಗಾವಣೆ ಮಾಡಲಿಲ್ಲ ಎಂದು ಶಾಸಕನೋ ಕಲ್ಲು ಎಸೆದು ಅಶಾಂತಿ ಸೃಷ್ಟಿಸಿರುತ್ತಾನೆ. ಕಲ್ಲೇಟಿಗೆ ಮತ್ತೊಂದೆರಡು ದೊಡ್ಡೇಟು ಬಿದ್ದು ಅಲೆಗಳು ಭುಗಿಲೇಳುತ್ತವೆ. ಆಗ ವರಿಷ್ಠರು ‘ನೋವು ಶಮನ’ದ ಔಷಧ ಕೊಟ್ಟು, ಸರ್ಕಾರವನ್ನು ಮತ್ತೆ ಹಳಿಗೆ ದೂಡುವ ಸರ್ಕಸ್‌ ನಿರಂತರ ನಡೆಯುತ್ತದೆ.

ಈಗ ಆಗಿರುವುದೂ ಅದೇ. ಚುನಾವಣೆಯಲ್ಲಿ ಕಾದಾಡಿಕೊಂಡಿರುವವರ ಸೆಡಹು, ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಬಿಟ್ಟ ಬಾಣಗಳು ಈಗ ಕುಮಾರಸ್ವಾಮಿ ಅವರಿಗೆ ತಿರುಗುಬಾಣವಾಗಿ ಹೊಡೆಯುತ್ತಿವೆ. ಹಿಂದೊಮ್ಮೆ ಅಧಿಕಾರ ತಪ್ಪಿಸಿದ, ಸರ್ಕಾರ ನಡೆಸುವಷ್ಟು ಕಾಲವೂ ವೈಫಲ್ಯ–ಹಗರಣಗಳನ್ನು ಬಯಲಿಗೆಳೆದ ಕುಮಾರಸ್ವಾಮಿ ಅವರನ್ನು ಸರ್ಕಾರ ರಚನೆ ವೇಳೆ ಬೆಂಬಲಿಸುವ ಮನಸ್ಸು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರಿಗೆ ಇರಲಿಲ್ಲ. ಹೈಕಮಾಂಡ್‌ ನಿರ್ದೇಶನ ಪಾಲಿಸುವ ಅನಿವಾರ್ಯವಷ್ಟೇ ಅವರದ್ದಾಗಿತ್ತು.

ಅಂತರಂಗ ಸುಡುವ ಹಳೆಯ ಹಗೆಯನ್ನು ಬಹಳ ಕಾಲ ಅದುಮಿಡಲು ಯಾರಿಗೂ ಆಗುವುದಿಲ್ಲ. ಹಾಗಾಗಿ ಭಿನ್ನಮತದ ‘ಹೊಗೆ’ ಸರ್ಕಾರವನ್ನು ಸುಡುತ್ತಲೇ ಬಂದಿತು. ಅದಕ್ಕೆ ಸಿದ್ದರಾಮಯ್ಯ ಒಬ್ಬರೇ ಕಾರಣರಲ್ಲ. ಜೆಡಿಎಸ್‌ ಜತೆಗೆ ಬಡಿದಾಡಿಕೊಂಡೇ ತಮ್ಮ ರಾಜಕೀಯ ಅಸ್ತಿತ್ವ ಕಟ್ಟಿಕೊಂಡು ಬಂದ, ಭವಿಷ್ಯ ರೂಪಿಸಿಕೊಳ್ಳಬೇಕಾದ ಸಂದಿಗ್ಧದಲ್ಲಿರುವ ಕಾಂಗ್ರೆಸ್ ನಾಯಕರ ಒಳಗುದಿ ಕೂಡ. 

ಸಮ್ಮಿಶ್ರ ಸರ್ಕಾರದ ಸಮನ್ವಯಕ್ಕಾಗಿ ಅಸ್ತಿತ್ವಕ್ಕೆ ತರಲಾದ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯನವರೇ ‘ಅಪಸ್ವರ’ಗಳನ್ನು ಎತ್ತತೊಡಗಿದ ಮೇಲೆ ಇನ್ನುಳಿದವರು ಬಿಟ್ಟಾರೆಯೇ? ಹೀಗಾಗಿ, ಎಂದೂ ಏಕಸ್ವರ ಕೇಳಲೇ ಇಲ್ಲ. ಈಗಲೂ ಮೈತ್ರಿ ಮುಂದುವರಿಯುವುದು ಸಿದ್ದರಾಮಯ್ಯ ನವರಿಗೆ ಬೇಕಿಲ್ಲ. ‘ನಾಲ್ಕೈದು ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯನವರೇ ಬಿಜೆಪಿಗೆ ಕಳುಹಿಸಿ, ಆಟವಾಡಲು ಮುಂದಾಗಿರುವುದು ನಮ್ಮ ವರಿಷ್ಠರಿಗೆ ಗೊತ್ತಾಗಿದೆ. ಸರ್ಕಾರ ಪತನದ ಯತ್ನ ನಿಲ್ಲಿಸಿ ಎಂದು ವರಿಷ್ಠರು ಸೂಚಿಸಿದ್ದಾರೆ’ ಎಂಬ ಯಡಿಯೂರಪ್ಪ ಮಾತಿನಲ್ಲಿ ಸತ್ಯಾಂಶವಿಲ್ಲದೇ ಇಲ್ಲ. 

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ‘ಜನಾದೇಶ’ ತಮ್ಮ ಕಡೆಗೆ ಬಂದಿದೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಯವರು, ಸರ್ಕಾರ ಪತನದ ಯತ್ನವನ್ನೇನೂ ಕೈಬಿಟ್ಟಿಲ್ಲ. ಪ್ರಾದೇಶಿಕ, ಒಂದು ನಿರ್ದಿಷ್ಟ ಜಾತಿಯ ಬೆಂಬಲ ಇದೆ ಎನ್ನಲಾದ ಪಕ್ಷವೊಂದರ ನೇತೃತ್ವದಲ್ಲಿರುವ, ಕೆಲವು ಸ್ವಾಮೀಜಿಗಳ ಕೃಪೆಯೂ ಇರುವ ಸರ್ಕಾರವನ್ನು ಬೀಳಿಸಿದರೆ ಅದು ಮುಂದಿನ ದಿನಗಳಲ್ಲಿ ದೊಡ್ಡೇಟು ನೀಡಬಹುದೆಂಬ ಭಯಕ್ಕೆ ಬಿಜೆಪಿ ವರಿಷ್ಠರು ತಕ್ಷಣಕ್ಕೆ ಈ ಯತ್ನಕ್ಕೆ ಕೈಹಾಕದಂತೆ ಸೂಚನೆ ನೀಡಿದ್ದಾರೆ. ಅದೇನು ನಾಲ್ಕು ವರ್ಷಕ್ಕೆ ನೀಡಿದ ನಿರ್ದೇಶನವಲ್ಲ ಎಂಬುದು ಗುಟ್ಟೇನೂ ಅಲ್ಲ.

ಮೈತ್ರಿ ಕೊನೆಗೊಂಡು ಬಿಜೆಪಿ ನೇತೃತ್ವದ ಸರ್ಕಾರ ಬಂದರೆ ಅದೂ ಶಾಶ್ವತವಲ್ಲ. 105 ಶಾಸಕರ ಬಲ ಇರುವ (ಬಹುಮತಕ್ಕೆ ಬೇಕಾದ ಸಂಖ್ಯೆ 113) ಬಿಜೆಪಿ ತನ್ನ ಕಾಲ ಮೇಲೆ ನಿಂತು ಸರ್ಕಾರ ರಚಿಸಲಾಗದು. ಪಕ್ಷೇತರರು ನೆರವಿಗೆ ಬಂದರೂ ಬಹುಮತ ಅಸಾಧ್ಯ. ಆಪರೇಷನ್ ಕಮಲವೋ ಅಥವಾ ಶಾಸಕರೇ ರಾಜೀನಾಮೆ ಕೊಟ್ಟು ಬಂದು ಸರ್ಕಾರ ಅಲ್ಪಮತಕ್ಕೆ ಕುಸಿಯುವಂತೆ ಮಾಡಬೇಕು. ರಾಜೀನಾಮೆ ಕೊಟ್ಟವರು ಮತ್ತೆ ಉಪಚುನಾವಣೆಯಲ್ಲಿ ಗೆದ್ದು ಬರಬೇಕು. ಆಗಲೂ ಅಸ್ಥಿರಗೊಳಿಸಲು ಅಸಾಧ್ಯವಾಗುವಷ್ಟು ಸಂಖ್ಯಾಬಲ ಸಿಗುತ್ತದೆ ಎಂಬ ವಿಶ್ವಾಸವನ್ನೂ ಇಟ್ಟುಕೊಳ್ಳುವಂತಿಲ್ಲ. 

2008ರಲ್ಲಿ ಬಿಜೆಪಿ 110 ಸ್ಥಾನ ಗೆದ್ದಾಗ, ಪಕ್ಷೇತರರ ಬಲದ ಮೇಲೆ ಯಡಿಯೂರಪ್ಪನವರು ಸರ್ಕಾರ ರಚಿಸಿದರು. 14 ಶಾಸಕರನ್ನು ‘ಆಪರೇಷನ್ ಕಮಲ’ಕ್ಕೆ ಸಿಲುಕಿಸಿ, ‘ಸ್ಥಿರ’ ಸರ್ಕಾರ ರಚಿಸುವ ಯತ್ನ ಮಾಡಿದರು. ಅಲ್ಲಾಡದ ಸರ್ಕಾರ ಎಂಬ ಕೀರ್ತಿ ಕಿರೀಟ ಆಗಲೂ ಇರಲಿಲ್ಲ. ಮೊದಲು ಕುಮಾರಸ್ವಾಮಿ, ಬಳಿಕ ಯಡಿಯೂರಪ್ಪನವರೇ ಸರ್ಕಾರದ ಅಭದ್ರತೆ–ಭಿನ್ನಮತೀಯ ಚಟುವಟಿಕೆಗೆ ನಾಯಕತ್ವ ಕೊಟ್ಟಿದ್ದು ಚರಿತ್ರೆಯಲ್ಲಿ ಸೇರಿಹೋಗಿದೆ.

ಅತಂತ್ರ ಸರ್ಕಾರ ಇದ್ದಾಗ ಅಭಿವೃದ್ಧಿ ಕಡೆಗಣನೆ ಎಂಬುದು ಎಲ್ಲ ಕಾಲಕ್ಕೂ ಸಲ್ಲುವ ಮಾತು. ಸರ್ಕಾರ ಉಳಿಸಿಕೊಳ್ಳುವ ಇಕ್ಕಟ್ಟಿನಲ್ಲೇ ಸಿಲುಕಿದ ನಾಯಕರು ಅದಕ್ಕಾಗಿಯೇ ಏದುಸಿರುಬಿಡುತ್ತಾರೆ. ಈಗಿನ ಒಂದು ವರ್ಷದ ಅವಧಿಯಲ್ಲ; ಹಿಂದಿನ ಅನುಭವಗಳೂ ಇದನ್ನು ತೋರಿಸಿವೆ. ಈ ಮಾದರಿಯ ಸರ್ಕಾರಗಳಿದ್ದಾಗ ಸಂಕಷ್ಟಕ್ಕೆ ಸಿಲುಕುವವರು ಮತ ಹಾಕಿದ ಜನರಷ್ಟೆ.

ಕುಮಾರವ್ಯಾಸ ಭಾರತದಲ್ಲಿ ನಾರದ, ಧರ್ಮರಾಯನಿಗೆ ಕೇಳುವ ಪ್ರಶ್ನೆಯೊಂದು ಹೀಗಿದೆ.

ಅರಸು ರಾಕ್ಷಸ ಮಂತ್ರಿಯೆಂಬುವ/ ಮೊರೆವ ಹುಲಿ ಪರಿವಾರ ಹದ್ದಿನ/ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು/ಉರಿವುರಿವುತಿದೆ ದೇಶ ನಾವಿ/ನ್ನಿರಲು ಬಾರದೆನುತ್ತ ಜನ ಬೇಸರದ ಬೇಗೆಯಲಿರದಲೇ ಭೂಪಾಲ ಕೇಳೆಂದ/

(ರಾಜನೋ ರಾಕ್ಷಸ, ಮಂತ್ರಿಗಳೋ ಗರ್ಜಿಸುವ ಹುಲಿಗಳು, ಜತೆಗಿರುವವರು ಹದ್ದಿನ ಗುಂಪುಗಳು, ಹೀಗಿರುವಾಗ ಬಡವರ ನೋವನ್ನು ಆಲಿಸುವವರಾದರೂ ಯಾರು, ನೋವಿನ ಉರಿ ಜ್ವಾಲೆಯಾಗಿ ಉರಿಯುತ್ತಿರಲು ಈ ದೇಶದಲ್ಲಿ ಇರಬಾರದೆಂದು ಪ್ರಜೆಗಳು ಬೇಸರದ ಬೇಗೆಯಲ್ಲಿ ಬೇಯುತ್ತಿಲ್ಲ ತಾನೆ?)

ಇದು ನೇರವಾಗಿ ನಮ್ಮ ನಾಯಕರಿಗೆ ಅನ್ವಯವಾಗುವುದಿಲ್ಲ. ಆದರೆ, ಇದೇ ರೀತಿ ಕಚ್ಚಾಡಿ, ಗರ್ಜಿಸುತ್ತಿದ್ದರೆ ನಾರದನ ಪ್ರಶ್ನೆ ನಮಗೂ ಎದುರಾದೀತು ಎಂಬ ತಿಳಿವು ರಾಜಕಾರಣಿಗಳ ಮನದಲ್ಲಿರುವುದು ಒಳಿತು. 

ಪ್ರತಿಕ್ರಿಯಿಸಿ (+)